ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ, ಇತ್ತೀಚೆಗಷ್ಟೇ ಕಾಂಗ್ರೆಸ್ ತನ್ನ ಮೊದಲ 124 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಉಳಿದ 100 ಅಭ್ಯರ್ಥಿಗಳನ್ನು ಆಯ್ಕೆಗಾಗಿ ಕಾಂಗ್ರೆಸ್ ನ ಸ್ಕ್ರೀನಿಂಗ್ ಸಮಿತಿ ಸಭೆ ಮಾ.27ರಂದು ನಡೆದಿದೆ. ಈ ಸಭೆಯಲ್ಲಿ 34 ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಅಂತಿಮಗೊಳಿಸಲಾಗಿದ್ದು, ಕೇಂದ್ರ ಚುನಾವಣಾ ಸಮಿತಿ ಸಭೆ ಬಳಿಕ ಪಟ್ಟಿ ಬಿಡುಗಡೆಯಾಗಲಿದೆ.
ಸೋಮವಾರ ನಡೆದ ಸ್ಕ್ರೀನಿಂಗ್ ಕಮಿಟಿ ಸಭೆ ನಡೆಯಲ್ಲಿ 34 ಕ್ಷೇತ್ರಗಳ ಟಿಕೆಟ್ ಅಂತಿಮಗೊಳಿಸಲಾಗಿದೆ. ಸುದೀರ್ಘ ಏಳು ಗಂಟೆಗಳ ಕಾಲ ನಡೆದ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ನೂರು ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಸಮಿತಿ ಸದಸ್ಯರು ಚರ್ಚೆ ನಡೆಸಿದ್ದಾರೆ. ಎರಡು ಮೂರು ಆಕಾಂಕ್ಷಿಗಳು ಇರುವ 34 ಕ್ಷೇತ್ರಗಳಲ್ಲಿ ಓರ್ವ ಅಭ್ಯರ್ಥಿ ಹೆಸರನ್ನು ಸಭೆ ಅಂತಿಮಗೊಳಿಸಿದೆ. ಇದೇ ತಿಂಗಳ 30 ರಂದು ಮತ್ತೆ ಸಭೆ ನಡೆಸಲು ನಾಯಕರು ನಿರ್ಧರಿಸಿದ್ದು, ಏಪ್ರಿಲ್ 3 ರಂದು ದೆಹಲಿಯಲ್ಲಿ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಅಷ್ಟರೊಳಗಾಗಿ ಬಹುತೇಕ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಬಳಿಕ ದೆಹಲಿಗೆ ಕಳುಹಿಸಲು ನಿರ್ಧಾರ ಮಾಡಲಾಗಿದೆ. ಕೇಂದ್ರ ಚುನಾವಣಾ ಸಮಿತಿ ಸಭೆಯ ಬಳಿಕ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ. ಕೆಲವು ಕ್ಷೇತ್ರಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಆಕಾಂಕ್ಷಿಗಳಿದ್ದು ಈ ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಯ್ಕೆ ಜಟಿಲವಾಗಲಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಎಚ್ಚರಿಕೆಯ ಹೆಜ್ಜೆ ಇಡಲು ಕಾಂಗ್ರೆಸ್ ನಾಯಕರು ನಿರ್ಧಾರ ಮಾಡಿದ್ದಾರೆ. 2ನೇ ಪಟ್ಟಿ ಹೆಚ್ಚು ಕುತೂಹಲ ಕೆರಳಿಸಿದೆ.