ಮಂಗಳೂರು : ಹುಲಿ ಯೋಜನೆಯ ಸುವರ್ಣ ಮಹೋತ್ಸವದ ಅಂಗವಾಗಿ ಬಂಡಿಪುರಕ್ಕೆ ಆಗಮಿಸಿರುವ ಪ್ರಧಾನಿ ಮೋದಿ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಭಾನುವಾರ 22 ಕಿಲೋಮೀಟರ್ ಸಪಾರಿ ನಡೆಸಿದರು.
ಬಂಡಿಪುರ ಕ್ಯಾಂಪಸ್ ತಲುಪಿದ ಮೋದಿ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಗೌರವಿ ಸಲ್ಲಿಸಿದ ಬಳಿಕ ತೆರೆದ ಜೀಪಿನಲ್ಲಿ ಸಫಾರಿ ತೆರಳಿದ್ದು ಎರಡು ಗಂಟೆಗಳ ಕಾಲ ಬಂಡಿಪುರ ಅರಣ್ಯದಲ್ಲಿ ಸಂಚರಿಸಿ ಪ್ರಕೃತಿ ಸೌಂದರ್ಯ ಸವಿದರು. 2 ಗಂಟೆಗಳ ಅವಧಿಯಲ್ಲಿ ಮೋದಿಯವರು ಅರಣ್ಯದ ಕಚ್ಚಾ ರಸ್ತೆಯಲ್ಲಿ 22 ಕಿ ಮೀ ಸಂಚರಿಸಿ ಬಂಡಿಪುರದ ಅರಣ್ಯ, ಪ್ರಾಣಿ ಪಕ್ಷಿಗಳನ್ನು ವೀಕ್ಷಿಸಿದರು. ಆನೆ, ಜಿಂಕೆ, ಕಾಟಿ ಸೇರಿದಂತೆ ಹಲವು ಪ್ರಾಣಿ ಪಕ್ಷಿಗಳು ಸಫಾರಿ ಸಮಯದಲ್ಲಿ ಎದುರಾಗಿ ಕಣ್ಣಿಗೆ ಬಿತ್ತಾದರೂ ಹುಲಿ ಮಾತ್ರ ಕಾಣಿಸಲಿಲ್ಲ. ಬಳಿಕ ಕೆಕ್ಕೆನಹಳ್ಳಿ ಚೆಕ್ ಪೋಸ್ಟ್ ತಲುಪಿದ ಮೋದಿ ಅಲ್ಲಿಂದ ತಮ್ಮ ವಾಹನದಲ್ಲಿ ತಮಿಳುನಾಡಿನ ಮದುಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ತೆರಳಿದರು.