ಮಂಗಳೂರು: ರಾಜ್ಯದ 16ನೇ ವಿಧಾನಸಭೆಯ ಮೊಟ್ಟ ಮೊದಲ ವಿಶೇಷ ಅಧಿವೇಶನವು ಇಂದಿನಿಂದ ಮೇ.24ರ ವರೆಗೆ ನಡೆಯಲಿದೆ.
ನೂತನ ಶಾಸಕರ ಪದಗ್ರಹಣ ಹಾಗೂ ಸ್ಪೀಕರ್ ಆಯ್ಕೆ ಚುನಾವಣೆ ಹಿನ್ನೆಲೆಯಲ್ಲಿ ಈ ಮೂರು ದಿನಗಳ ವಿಶೇಷ ಅಧಿವೇಶನ ಕರೆಯಲಾಗಿದೆ. ಹಂಗಾಮಿ ಸ್ಪೀಕರ್ ಆಗಿ ನೇಮಕವಾಗಿರುವ ಹಿರಿಯ ಸದಸ್ಯ ಆರ್ ವಿ ದೇಶಪಾಂಡೆ ಸದನದ ಕಾರ್ಯಕಲಾಪಗಳನ್ನು ನಡೆಸಿಕೊಡಲಿದ್ದಾರೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸೇರಿದಂತೆ ಎಲ್ಲಾ 224 ಮಂದಿ ಸದಸ್ಯರಿಗೆ ಹಂಗಾಮಿ ಸ್ಪೀಕರ್ ಅಧಿಕಾರ ಪದ ಮತ್ತು ಗೌಪ್ಯತಾ ಪ್ರಮಾಣ ವಚನವನ್ನು ಬೋಧಿಸಲಿದ್ದಾರೆ. ಮೇ 24ರಂದು ವಿಧಾನಸಭೆಯ ನೂತನ ಸ್ಪೀಕರ್ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಆದರೆ ವಿರೋಧಪಕ್ಷವಾಗಿರುವ ಬಿಜೆಪಿಯನ್ನು ಸದನದಲ್ಲಿ ಮುನ್ನಡೆಸುವವರು ಯಾರು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕ ಅರವಿಂದ್ ಬೆಲ್ಲದ, ಬಸನಗೌಡ ಪಾಟೀಲ್ ಯತ್ನಾಳ್ ಹೆಸರುಗಳು ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಕೇಳಿ ಬರುತ್ತಿದೆ.