‘ರುಚಿಗೋಲ್ಡ್ ಕಂಪೆನಿಯಿಂದ ಪರಿಸರ ಮಾಲಿನ್ಯ- ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ಆರೋಪ

ಮಂಗಳೂರು: ನಗರ ಹೊರವಲಯದ ಜೋಕಟ್ಟೆ ಸಮೀಪ ಬಾಬಾ ರಾಮ್‌ದೇವ್ ಮಾಲಕತ್ವದ ‘ರುಚಿಗೋಲ್ಡ್’ ತಾಳೆಎಣ್ಣೆ ಕಂಪೆನಿಯಿಂದ ಪರಿಸರ ಮಾಲಿನ್ಯವಾಗುತ್ತಿದೆ ಎಂದು ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ಆರೋಪಿಸಿದೆ.

 ಕಂಪೆನಿಯು ಪಲ್ಗುಣಿ ನದಿಗೆ ನಿರಂತರವಾಗಿ ಕೈಗಾರಿಕಾ ವಿಷಕಾರಿ ತ್ಯಾಜ್ಯವನ್ನು ಹರಿಸುತ್ತಿದ್ದು, ಇದರಿಂದ ಪರಿಸರ ಮಾಲಿನ್ಯವಾಗುತ್ತಿದೆ. ಹಾಗಾಗಿ ತಕ್ಷಣ ‘ರುಚಿಗೋಲ್ಡ್’ ಸಂಸ್ಥೆಗೆ ಬೀಗ ಜಡಿದು, ಭ್ರಷ್ಟ ಪರಿಸರ  ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಒತ್ತಾಯಿಸಿದೆ.

 

ನಾಗರಿಕ ಹೋರಾಟ ಸಮಿತಿಯ ಸತತ ದೂರು ಮತ್ತು ಪ್ರತಿಭಟನೆಯಿಂದಾಗಿ ಪಲ್ಗುಣಿ ನದಿ ಹಾಗೂ ತೋಕೂರು ಹಳ್ಳಕ್ಕೆ ಎಂಆರ್‌ಪಿಎಲ್, ಎಸ್‌ಇಝೆಡ್, ಅದಾನಿ ವಿಲ್ಮರ್, ರುಚಿಗೋಲ್ಡ್ ಮತ್ತಿತರ ಹಲವು ಉದ್ಯಮಗಳು  ತ್ಯಾಜ್ಯವನ್ನು ನದಿಗೆ ಬಿಡುವ ವಿಷಯ ಹಸಿರು ಪೀಠದ ಮುಂದೆ ಬರುವಂತಾಯಿತಾಯಿತಲ್ಲದೆ, ಉದ್ಯಮಗಳ ಮೇಲೆ ಜಿಲ್ಲಾಡಳಿತ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನೋಟೀಸು ನೀಡುವಂತಾಯಿತು.  ಆದರೆ ಈ ಕೈಗಾರಿಕೆಗಳ ವಿರುದ್ದ ಯಾವುದೇ ಕಠಿಣ ಕ್ರಮಗಳು ಜರುಗಿಲ್ಲ. ರುಚಿಗೋಲ್ಡ್ ಕಂಪೆನಿಯಂತೂ ದುರಹಂಕಾರದಿಂದ ನಡೆದುಕೊಳ್ಳುತ್ತಿದ್ದು, ತೋಕೂರು ಹಳ್ಳದ ಮೂಲಕ ನೇರವಾಗಿ ಪಲ್ಗುಣಿ ನದಿಗೆ ಮಾರಕ ಕೈಗಾರಿಕಾ ತ್ಯಾಜ್ಯವನ್ನು ಬಹಿರಂಗವಾಗಿ ಹರಿಸುತ್ತಿದೆ ಎಂದು ಸಮಿತಿ ಆರೋಪಿಸಿದೆ.

ಈಗಾಗಲೇ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ತ್ಯಾಜ್ಯವನ್ನು ದೊಡ್ಡ ಪ್ರಮಾಣದಲ್ಲಿ ತೋಕೂರು ಹಳ್ಳಕ್ಕೆ ಹರಿಸುತ್ತಿರುವುದನ್ನು ಗುರುತಿಸಿದ್ದಾರೆ. ಈ ಮಧ್ಯೆ ಜೂನ್‌.2ರಂದು  ತೋಕೋರು ಹಳ್ಳದಲ್ಲಿ ಶೇಖರಣೆಗೊಂಡಿರುವ ತ್ಯಾಜ್ಯವನ್ನು ಸಂಗ್ರಹಿಸಿ ಬೇರೆಡೆಗೆ ಸಾಗಿಸುವ ಮೂಲಕ ಹಸಿರು ಪೀಠ, ಪರಿಸರ ನಿಯಮ ಹಾಗೂ ಜನತೆಯ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದೆ.  ಸ್ಥಳೀಯ ಶಾಸಕರ ಸಹಿತ ಜಿಲ್ಲೆಯ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳು ತುಳುನಾಡಿನ ಭವಿಷ್ಯವನ್ನೇ ಮುಳುಗಿಸುತ್ತಿರುವ ಗಂಭೀರವಾದ ಕೈಗಾರಿಕಾ ಮಾಲಿನ್ಯದ ಕುರಿತು ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಸಮಿತಿಯೂ ಆಪಾದಿಸಿದೆ.

ಆದಾಗ್ಯೂ ರುಚಿ ಗೋಲ್ಡ್ ಸಂಸ್ಥೆಗೆ ಬೀಗ ಜಡಿದು, ತುಳುನಾಡಿನ ಯುವಜನರಿಗೆ ಉದ್ಯೋಗವನ್ನೂ ನಿರಾಕರಿಸಿ, ನೆಲ ಜಲವನ್ನೂ ನಾಶ ಪಡಿಸುವ ಇಂತಹ ಉದ್ಯಮಗಳಿಗೆ ಸರಿಯಾದ ಶಿಕ್ಷೆ ಆಗಬೇಕು ಎಂದು ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ಒತ್ತಾಯಿಸಿದೆ.

ಈಗಾಗಲೇ ನಾವು ಸ್ಥಳ ತನಿಖೆ ನಡೆಸಿದ್ದೇವೆ. ಸೂಕ್ತ ದಾಖಲೆಗಳನ್ನೂ ಸಂಗ್ರಹಿಸಿದ್ದೇವೆ. ನೋಟಿಸ್ ಜಾರಿಯ ಪ್ರಕ್ರಿಯೆ ನಡೆಯುತ್ತಿದೆ ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಂಗಳೂರು ವಲಯ ಅಧಿಕಾರಿ ವಿಜಯಾ ಹೆಗಡೆ ಪ್ರತಿಕ್ರಿಯಿಸಿದ್ದಾರೆ.

LEAVE A REPLY

Please enter your comment!
Please enter your name here