ಜೂನ್ 16ಕ್ಕೆ ಧರ್ಮಸ್ಥಳ ಸೌಜನ್ಯ ಹತ್ಯೆ ಪ್ರಕರಣದ ತೀರ್ಪು ಪ್ರಕಟ

ಧರ್ಮಸ್ಥಳ: ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಕಾಲೇಜು ವಿದ್ಯಾರ್ಥಿನಿ ಸೌಜನ್ಯ (17) ಎಂಬ ಯುವತಿಯನ್ನು ಅತ್ಯಾಚಾರ ನಡೆಸಿ ಹತ್ಯೆ ಮಾಡಿದ್ದ ಪ್ರಕರಣದ ತೀರ್ಪು 11 ವರ್ಷಗಳ ಬಳಿಕ ಬೆಂಗಳೂರು ಸಿಬಿಐ ವಿಶೇಷ ಕೋರ್ಟು ಜೂನ್ 16ರಂದು ಪ್ರಕಟಿಸಲಿದೆ.

2012 ಅಕ್ಟೋಬರ್ 9ರಂದು ಕಾಲೇಜಿನಿಂದ ಮನೆಗೆ ತೆರಳುವ ದಾರಿಯಲ್ಲಿ ಸೌಜನ್ಯ ನಾಪತ್ತೆಯಾಗಿದ್ದು ಬೆಳ್ತಂಗಡಿ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

ಇದಾದ ಮರುದಿನ ಅಕ್ಟೋಬರ್ 10ರಂದು ಧರ್ಮಸ್ಥಳ ಮಣ್ಣಸಂಖದಲ್ಲಿ ಸೌಜನ್ಯ ಶವ ಪತ್ತೆಯಾಗಿತ್ತು. ಬಳಿಕ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ರೇಪ್ ಅಂಡ್ ಮರ್ಡರ್ ಪ್ರಕರಣ ದಾಖಲಾಗಿತ್ತು. ಅಕ್ಟೋಬರ್ 11ರಂದು ಪ್ರಕರಣದ ಆರೋಪಿ ಎನ್ನಲಾದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಹೌಸಿಂಗ್ ಕಾಲೋನಿಯ ಸಂತೋಷ ರಾವ್( 38) ಬಾಹುಬಲಿ ಬೆಟ್ಟದ ಬಳಿ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದಿದ್ದು ಪೊಲೀಸರು ಆತನನ್ನು ಬಂಧಿಸಿದ್ದರು. ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಸಾರ್ವಜನಿಕರ ಪ್ರತಿಭಟನೆ ಜೋರಾಗಿದ್ದರಿಂದ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ಒಪ್ಪಿಸಿತ್ತು. ಪ್ರಕರಣದ ಆರೋಪಿ ಸಂತೋಷ ರಾವ್ ಬೆಂಗಳೂರು ಸಿಬಿಐ ಕೋರ್ಟಿಗೆ ಆರಕ್ಕಿಂತಲೂ ಹೆಚ್ಚು ಬಾರಿ ಹಾಜರಾಗದೆ ತಲೆಮರೆಸಿಕೊಂಡಿದ್ದ.
ಪ್ರಕರಣ ನಡೆದು 11 ವರ್ಷಗಳ ಬಳಿಕ ಜೂನ್ 16 ರಂದು ತೀರ್ಪು ಪ್ರಕಟವಾಗಲಿದ್ದು ಸಾರ್ವಜನಿಕರ ಕುತೂಹಲ ಇಮ್ಮಡಿಯಾಗಿದೆ.

LEAVE A REPLY

Please enter your comment!
Please enter your name here