ಮಂಗಳೂರು: 2021 ರಲ್ಲಿ ಎಂಆರ್ಪಿಎಲ್ ನಲ್ಲಿ 234 ಹುದ್ದೆಗಳಿಗೆ ನೇಮಕಾತಿ ಸಂದರ್ಭದಲ್ಲಿಯೂ ಸಂಸದ ನಳಿನ್ ಕುಮಾರ್ ಕಟೀಲ್ ಶಾಸಕರಾದ ಉಮಾನಾಥ್ ಕೋಟ್ಯಾನ್, ಭರತ್ ಶೆಟ್ಟಿ, ವೇದವ್ಯಾಸ್ ಕಾಮತ್, ಸಂಸ್ಥೆಯ ಅಧಿಕಾರಿಗಳೊಂದಿಗೆ ಸ್ಥಳೀಯ ಯುವಕ ಯುವತಿಯರಿಗೆ ಉದ್ಯೋಗಾವಕಾಶ ನೀಡುವಂತೆ ಸಭೆ ನಡೆಸಿ ಅಂತಿಮವಾಗಿ ನೇಮಕಾತಿ ಪ್ರಕ್ರಿಯೆ ರದ್ದುಗೊಂಡಿದೆ ಎಂದು ಸುಳ್ಳು ಪ್ರಕಟಣೆ ಹೊರಡಿಸಿ, ತುಳುನಾಡಿನ ಯುವಜನರನ್ನು ವಂಚಿಸಿದ್ದರು ಎಂದು ಡಿವೈಎಫ್ಐ ನ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ಈಗ ಮತ್ತೆ ಐವತ್ತು ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿ ದೆ. ಯಥಾ ಪ್ರಕಾರ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಬಿಜೆಪಿ ಶಾಸಕರ ತಂಡ ಎಂಆರ್ಪಿಎಲ್ ಅಧಿಕಾರಿಗಳ ಜೊತೆ ಸ್ಥಳೀಯ ಯುವಕ ಯುವತಿಯರಿಗೆ ನೇಮಕಾತಿಯಲ್ಲಿ ಆದ್ಯತೆ ನೀಡುವಂತೆ ಮಾತುಕತೆ ನಡೆಸಿದರು ಎಂಬ ಸುದ್ದಿ ಫೋಟೋ ಸಹಿತ ಮಾಧ್ಯಮಗಳಲ್ಲಿ ಪ್ರಕಟವಾಗಿದೆ ಎಂದು ಹೇಳಿರುವ ಅವರು ಶಾಸಕ ಭರತ್ ಶೆಟ್ಟಿ ಅವರ ಎರಡು ವರ್ಷಗಳ ಹಿಂದಿನ ಟ್ವೀಟನ್ನು ಮತ್ತೆ ಪೋಸ್ಟ್ ಮಾಡಿದ್ದಾರೆ.
ಸಂಸದರಿಗೆ ಮತ್ತು ಶಾಸಕರಿಗೆ ಧಮ್ಮು,ತಾಕತ್ತು ಇದ್ದರೆ ಸ್ಥಳೀಯರನ್ನು ಹೊರಗಿಟ್ಟು ನಡೆಯುವ ನೇಮಕಾತಿ ಪ್ರಕ್ರಿಯೆಯನ್ನು ತಮ್ಮ ಅಧಿಕಾರ ಬಳಸಿ ರದ್ದುಗೊಳಿಸಲಿ ಎಂದು ಕಾಟಿಪಳ್ಳ ಹೇಳಿದ್ದಾರೆ.