ಮಂಗಳೂರು: ಸಹಾಯಕ ಸರಕಾರಿ ಅಭಿಯೋಜಕರು ಮತ್ತು ಸಹಾಯಕ ಅಭಿಯೋಜಕರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸಮಗ್ರ ತನಿಖೆಗೆ ರಾಜ್ಯ ಸರ್ಕಾರ ಸೂಚನೆ ನೀಡಿದ್ದು, ನೇಮಕಾತಿ ರದ್ದಾಗುವ ಸಾಧ್ಯತೆ ಇದೆ.
ಜೂನ್ 6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಬರೆದ ಟಿಪ್ಪಣಿಯಲ್ಲಿ ನೇಮಕಾತಿ ಬಗ್ಗೆ ತನಿಖೆಗೆ ಪ್ರಸ್ತಾಪಿಸಲಾಗಿದೆ.
ಸಹಾಯಕ ಸರಕಾರಿ ಅಭಿಯೋಜಕರು ಮತ್ತು ಸಹಾಯಕ ಅಭಿಯೋಜಕರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಈ ಬಗ್ಗೆ ನಿರ್ಧಾಕ್ಷಿಣ್ಯವಾಗಿ ಇಲಾಖಾ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿವರಗಳ ಜೊತೆಗೆ 10 ದಿನಗಳ ಒಳಗೆ ವರದಿ ನೀಡುವಂತೆ ಟಿಪ್ಪಣಿಯಲ್ಲಿ ಸೂಚಿಸಲಾಗಿದೆ. 2022 ಜೂಲೈ 23 ಮತ್ತು 24ರಂದು ಸಹಾಯಕ ಸರ್ಕಾರಿ ಅಭಿಯೋಜಕರು ಸಹಾಯಕ ಸರಕಾರಿ ವಕೀಲರ ನೇಮಕಾತಿ ಪರೀಕ್ಷೆ ನಡೆದಿತ್ತು.