ಬಿಜೆಪಿ ನಾಯಕರು ಮೌನ ಮುರಿಯಬೇಕು – 13 ಸಂಸದರ ತೇಜೋವಧೆ ಮಾಡುವ ಕೆಲಸ ನಡೆಯುತ್ತಿದೆ – ಡಿ ವಿ ಸದಾನಂದ ಗೌಡ ಬೇಸರ

ಮಂಗಳೂರು: ರಾಜ್ಯದ 13 ಮಂದಿ ಬಿಜೆಪಿ ಸಂಸದರು ಯಾವುದೇ ಕೆಲಸ ಮಾಡಿಲ್ಲ, ಅಯೋಗ್ಯರು ಎಂದು ಮಾನಹಾನಿಯಾಗುವ ರೀತಿಯ ವರದಿಗಳ ಕುರಿತು ರಾಜ್ಯದ ಬಿಜೆಪಿ ನಾಯಕರು ಮೌನವಾಗಿರುವುದೇಕೆ? ಎಂದು ಬಿಜೆಪಿ ಸಂಸದ ಡಿವಿ ಸದಾನಂದ ಗೌಡ ಪ್ರಶ್ನಿಸಿದ್ದಾರೆ.

ನಗರದ ವಿವಿ ಟವರ್ ನಲ್ಲಿರುವ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 13 ಮಂದಿ ಬಿಜೆಪಿ ಸಂಸದ ಮಾನಹಾನಿ ಆಗುತ್ತಿರುವುದು ನೋಡಿಯೂ ಸ್ಪಷ್ಟನೆ ನೀಡದಿರುವುದು ತರವಲ್ಲ. ಇದರಿಂದ ರಾಜ್ಯಕ್ಕೆ ಬೇರೆ ರೀತಿಯ ಸಂದೇಶ ಹೋಗಲಿದೆ. ಕೂಡಲೇ ಗೊಂದಲವನ್ನು ಪರಿಹರಿಸುವ ಕೆಲಸವನ್ನು ಸಂಬಂಧಪಟ್ಟ ನಾಯಕರು ಮಾಡಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.

ಲೋಕಸಭಾ ಚುನಾವಣೆಗೆ ಇನ್ನೊಂದು ವರ್ಷ ಬಾಕಿ ಇದೆ. ಈ ಹಂತದಲ್ಲಿ ಸಂಸದರನ್ನು ತೇಜೋವಧೆ ಮಾಡುವ ಕೆಲಸವಾಗುತ್ತಿದೆ. ಮಾನಹಾನಿ ಹಿಂದೆ ಯಾರಿದ್ದಾರೋ ಗೊತ್ತಿಲ್ಲ. ಆಯ್ಕೆಯಾಗಿರುವ 25 ಸಂಸದರ ಪೈಕಿ 13 ಮಂದಿ ಕ್ಷೇತ್ರದಲ್ಲಿ ಅಭಿವೃದ್ಧಿಯೇ ಮಾಡಿಲ್ಲ. ಇನ್ನು ಕೆಲವು ಸಂಸದರು ಅನಾರೋಗ್ಯ ಪೀಡಿತರಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಟಿಕೆಟ್ ಸಿಗುವುದಿಲ್ಲ ಎಂಬ ರೀತಿಯಲ್ಲಿ ಕೆಲ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಆಯ್ಕೆಯಾಗಿರುವ 25 ಬಿಜೆಪಿ ಸಂಸದರ ಪೈಕಿ 13 ಮಂದಿ ನಾಲಾಯಕ್ ಸಂಸದರು ಎಂದು ತೇಜೋವಧೆ ಮಾಡುವ ಕೆಲಸವಾಗುತ್ತಿದೆ. ಈ ಮೂಲಕ ಹಿರಿಯ ಸಂಸದರ ಮನೋಸ್ಥೈರ್ಯ ಕುಗ್ಗಿಸುವ ಪ್ರಯತ್ನವಾಗುತ್ತಿದೆ. ಮತದಾರರಿಂದ ಆಯ್ಕೆಗೊಂಡ ಸಂಸದರನ್ನು ತೇಜೋವಧೆ ಮಾಡುವ ಕೆಲಸ ಎಷ್ಟು ಸರಿ? ಕೂಡಲೇ ರಾಷ್ಟ್ರೀಯ ಹಾಗೂ ರಾಜ್ಯದ ಬಿಜೆಪಿ ನಾಯಕರು ಮಧ್ಯಪ್ರವೇಶಿಸಿ ಗೊಂದಲಕ್ಕೆ ತೆರೆ ಎಳೆಯಬೇಕು. ನನಗೆ ಹನ್ನೆರಡು ಮಂದಿ ಸಂಸದರು ಕರೆ ಮಾಡಿ ಅಳಲು ತೋಡಿಕೊಂಡಿದ್ದಾರೆ. ಹೀಗಾಗಿ ಕೂಡಲೇ ರಾಷ್ಟ್ರೀಯ ಹಾಗೂ ರಾಜ್ಯ ಬಿಜೆಪಿ ನಾಯಕರು ಈ ಬಗ್ಗೆ ಇತಿಶ್ರೀ ಹಾಡಬೇಕಿದೆ ಎಂದು ಅವರು ಆಗ್ರಹಿಸಿದರು.

LEAVE A REPLY

Please enter your comment!
Please enter your name here