ಮಂಗಳೂರು : 2024ರ ಲೋಕಸಭಾ ಚುನಾವಣೆಗೆ ಬಿಜೆಪಿ ತಯಾರಿ ಆರಂಭಿಸಿದ್ದು, ಈ ಚುನಾವಣೆಯನ್ನು ಗೆಲ್ಲಲು ಮೋದಿ ಮ್ಯಾಜಿಕ್ ಹಾಗೂ ಹಿಂದುತ್ವವಷ್ಟೇ ಸಾಲದು ಎಂದು ಆರ್ ಎಸ್ ಎಸ್ ಮುಖವಾಣಿ ವಾರಪತ್ರಿಕೆ ಆರ್ಗನೈಝರ್ ಬಿಜೆಪಿಗೆ ಸಲಹೆ ನೀಡಿದೆ. ಮೋದಿ ಮ್ಯಾಜಿಕ್ ಹಾಗೂ ಹಿಂದುತ್ವವಷ್ಟೇ ಚುನಾವಣೆ ಗೆಲ್ಲುವುದರ ಸೂತ್ರ ಎಂಬ ಅಭಿಪ್ರಾಯವನ್ನು ಆರ್ಗನೈಝರ್ ತಿರಸ್ಕರಿಸಿದೆ.
ಸ್ಥಳೀಯ ಮಟ್ಟದಲ್ಲಿ ಬಲಿಷ್ಠ ನಾಯಕತ್ವ ಹಾಗೂ ತನ್ಮೂಲಕ ಸಮರ್ಥವಾದ ಆಡಳಿತದ ಅಗತ್ಯತೆಯು ಇದೆ ಎಂಬುದು ಬಿಜೆಪಿಗೆ ಆರ್ಗನೈಝರ್ ನೀಡಿರುವ ಸಲಹೆಯ ಸಾರಾಂಶವಾಗಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು ಆಧಾರವಾಗಿಟ್ಟುಕೊಂಡು ಆರ್ಗನೈಸರ್ ಈ ಸಲಹೆ ನೀಡಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ನ ಗೆಲುವು ಬಿಜೆಪಿಗೆ ಪರಿಸ್ಥಿತಿಯನ್ನು ಅವಲೋಕಿಸುವುದಕ್ಕೆ ಸೂಕ್ತವಾದ ಸಮಯ ಎಂದು ಆರ್ಗನೈಝರ್ ಹೇಳಿದೆ. ಮೋದಿ ಪ್ರಧಾನಿಯಾದ ಮೊದಲ ಅವಧಿಯಲ್ಲಿ ಭ್ರಷ್ಟಾಚಾರ ಪ್ರಮುಖ ವಿಷಯವಾಗಿತ್ತು. ಆದರೆ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭ್ರಷ್ಟಾಚಾರದ ಆರೋಪವನ್ನು ಸಮರ್ಥಿಸಿಕೊಳ್ಳಬೇಕಾಯಿತು ಎಂದು ಆರ್ಗನೈಝರ್ ಉಲ್ಲೇಖಿಸಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಮತದಾರರ ಗಮನವನ್ನು ಸ್ಥಳೀಯ ವಿಷಯಗಳತ್ತ ಸೆಳೆಯುವಲ್ಲಿ ಶ್ರಮಿಸಿದರೆ ಆಡಳಿತ ರೂಢಪಕ್ಷ ರಾಷ್ಟ್ರೀಯ ಮಟ್ಟದ ಯೋಜನೆಗಳತ್ತ ಸೆಳೆಯಲು ಯತ್ನಿಸಿತು. ಈ ಹಿಂದೆ ಪಡೆದಿದ್ದ ಮತಗಳ ಪಾಲಿಗೆ ಮತ್ತಷ್ಟು ಮತಗಳನ್ನು ಸೇರಿಸಿಕೊಳ್ಳುವುದರಲ್ಲಿ ಬಿಜೆಪಿ ಕರ್ನಾಟಕದಲ್ಲಿ ವಿಫಲವಾಗಿದೆ. ಇದು ಕಳಪೆ ಸ್ಥಾನಗಳಿಗೆ ಪರಿವರ್ತನೆಯಾಯಿತು ಹಾಲಿ ಸಚಿವರ ವಿರುದ್ಧದ ಆಡಳಿತ ವಿರೋಧಿ ನಿಲುವು ಬಿಜೆಪಿಗೆ ಕಳವಳಕಾರಿಯಾಗಿತ್ತು ಎಂದು ಆರ್ಗನೈಝರ್ ಹೇಳಿದೆ. ಕರ್ನಾಟಕದ ಚುನಾವಣೆಯಲ್ಲಿ ಉತ್ತರ ಹಾಗೂ ದಕ್ಷಿಣ ಭಾರತವೆಂಬ ತಾರತಮ್ಯವನ್ನು ಕಾಂಗ್ರೆಸ್ ಮತ ಪಡೆಯಲು ಬಳಕೆ ಮಾಡಿದ್ದು ಅತ್ಯಂತ ಅಪಾಯಕಾರಿ ಟ್ರೆಂಡ್ ಎಂದು ಆರ್ಗನೈಝರ್ ಹೇಳಿದೆ.