ಮಂಗಳೂರು: ದೇವಸ್ಥಾನಗಳ ತವರೂರು ಆಗಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಮುಂಗಾರು ಪ್ರವೇಶವಾಗದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ನೀರಿನ ಸಮಸ್ಯೆ ತಲೆದೋರಿದೆ. ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯಕ್ಕೂ ಜಲ ಕ್ಷಾಮದ ಬಿಸಿ ತಟ್ಟಿದೆ. ಪ್ರತಿದಿನ ಪ್ರತಿದಿನ ಇಲ್ಲಿಗೆ 15 ರಿಂದ 20 ಸಾವಿರದಷ್ಟು ಭಕ್ತರು ಭೇಟಿ ನೀಡುತ್ತಿದ್ದು, ಅವರೆಲ್ಲರಿಗೂ ಊಟದ ವ್ಯವಸ್ಥೆ ಇದೆ.
ಇದರಿಂದಾಗಿ ಎದುರಾಗಿರುವ ನೀರಿನ ಸಮಸ್ಯೆಯಿಂದಾಗಿ ದೇಗುಲದ ಆಡಳಿತ ಮಂಡಳಿ ಕಂಗೆಟ್ಟಿದೆ. ನೀರಿನ ಸಮಸ್ಯೆಯಿಂದಾಗಿ ದೇಗುಲದಲ್ಲಿ ಅನ್ನಪ್ರಸಾದಕ್ಕಾಗಿ ತಟ್ಟೆಯ ಬದಲು ಬಳಸಿ ಎಸೆಯುವ ಬಾಳೆ ಎಲೆಯನ್ನು ಬಳಸಲಾಗುತ್ತಿದೆ. ಮಾತ್ರವಲ್ಲ ಪ್ರವೇಶ ದ್ವಾರದಲ್ಲಿ ಭಕ್ತರು ಕೈಕಾಲು ತೊಳೆಯುವ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಆದರೆ ಶೌಚಾಲಯ ಅತಿಥಿಗೃಹಗಳಿಗೆ ಸರಿಯಾದ ನೀರು ಪೂರೈಕೆ ಇಲ್ಲದೆ ಭಕ್ತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಪ್ರತಿ ದಿನ ಇಲ್ಲಿ ಸುಮಾರು ಏಳು ಲಕ್ಷ ಲೀಟರ್ ನಷ್ಟು ನೀರಿನ ಅಗತ್ಯವಿದ್ದು, ಸದ್ಯ ಖಾಸಗಿ ಟ್ಯಾಂಕರ್ ಗಳ ಮೂಲಕ ದೇಗುಲಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ. ನೀರಿನ ಕೊರತೆಯಿಂದಾಗಿ ದೇವಸ್ಥಾನದ ಅಧೀನದಲ್ಲಿರುವ ಪ್ರಾಥಮಿಕ ಪ್ರೌಢಶಾಲೆ ಹಾಗೂ ಪದವಿಪೂರ್ವ ಶಿಕ್ಷಣ ಸಂಸ್ಥೆಗಳಲ್ಲಿ ತರಗತಿಗಳನ್ನು ಅರ್ಧ ದಿನಕ್ಕೆ ಮೊಟಕು ಗೊಳಿಸಲಾಗಿದೆ. ಗೋಶಾಲೆಗಳಿಗೂ ಜಲ ಕ್ಷಾಮದ ಭೀತಿ ಎದುರಾಗಿದ್ದು ಊಟದ ವ್ಯವಸ್ಥೆ ಮಾಡುವುದಕ್ಕೂ ನೀರಿನ ಸಮಸ್ಯೆ ತಲೆದೋರಿದೆ. ದೇಗುಲದ ಪಕ್ಕದಲ್ಲಿ ಹರಿಯುವ ನಂದಿನಿ ಬರಡಾಗಿದೆ.. ಆಡಳಿತ ಮಂಡಳಿ ಬಾವಿ ತೋಡಲು ನಿರ್ಧರಿಸಿದೆ. ಆದರೆ ನೀರಿನ ಲಭ್ಯತೆಯ ಬಗ್ಗೆ ಶ್ರೀದೇವಿಯೇ ತೀರ್ಮಾನಿಸಬೇಕಾಗಿದೆ.