ಮಂಗಳೂರು: ವಿದ್ಯುತ್ ಗ್ರಾಹಕರಿಗೆ ಮತ್ತೊಂದು ಶಾಕ್ ಎದುರಾಗಿದೆ. ಗೃಹ ಬಳಕೆ ವಿದ್ಯುತ್ ಸಂಪರ್ಕಕ್ಕೆ ಪ್ರತಿ ಕಿಲೋ ವ್ಯಾಟ್ ಗೆ ನೂರು ರೂಪಾಯಿ ಇದ್ದ ನಿಗದಿತ ಶುಲ್ಕವನ್ನು ಮೇ ತಿಂಗಳಿನಿಂದ ಅನ್ವಯವಾಗುವಂತೆ 110 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಈಗಾಗಲೇ ಯೂನಿಟ್ ಬೆಲೆಯಲ್ಲಿ 70 ಪೈಸೆ ಏರಿಕೆಯಾಗಿದ್ದು, ಇಂಧನ ಇಲಾಖೆ ಗ್ರಾಹಕನ ಕಿಸೆಗೆ ಕತ್ತರಿ ಹಾಕಿದೆ.
ಗೃಹಬಳಕೆ ಸಂಪರ್ಕಕ್ಕೆ 50 ಕಿಲೋ ವ್ಯಾಟ್ ವರೆಗೆ ಪ್ರತಿ ಕಿಲೋ ವ್ಯಾಟ್ ಗೆ 110 ರೂ. ಶುಲ್ಕ ನಿಗದಿ ಮಾಡಲಾಗಿದ್ದು, 50 ಕಿಲೋ ವ್ಯಾಟ್ ಮೇಲ್ಪಟ್ಟ ಬಳಕೆಗೆ ಪ್ರತಿ ಕೆ.ವಿ ಗೆ 210 ರೂ.ನಿಗದಿ ಮಾಡಲಾಗಿದೆ. ವಾಣಿಜ್ಯ ಬಳಕೆ ಸಂಪರ್ಕಗಳಿಗೆ ಪ್ರತಿ ಕೆ.ವಿ ಗೆ 125 ಇದ್ದ ದರ ಮೇ ತಿಂಗಳಿನಿಂದ 200 ರೂ.ಗೆ ಏರಿಕೆಯಾಗಿದೆ. ಇನ್ನು ವಾಣಿಜ್ಯ ಬಳಕೆ ಸಂಪರ್ಕಗಳಿಗೆ 50 ಕೆ.ವಿ ಮೇಲಿನ ಬಳಕೆಗೆ ಪ್ರತಿ ಕಿಲೋ ವ್ಯಾಟ್ ಗೆ ರೂ.300 ನಿಗದಿ ಮಾಡಲಾಗಿದೆ. ಗೃಹ ಜ್ಯೋತಿ ಫಲಾನುಭವಿಗಳಿಗೆ ನಿಗದಿತ ಶುಲ್ಕದ ಹೊರೆ ಇರುವುದಿಲ್ಲ. ಗೃಹ ಜ್ಯೋತಿ ಫಲಾನುಭವಿಗಳ ಪಿಕ್ಸೆಡ್ ಚಾರ್ಜ್ ಸರಕಾರವೇ ಭರಿಸಲಿದೆ. ಆದರೆ ಏಪ್ರಿಲ್ ಹಾಗೂ ಮೇ ತಿಂಗಳ ಬಾಕಿ ಪಾವತಿಸಲೇಬೇಕು.