ಮಂಗಳೂರು: ಹಿಂದೂ ಜನ ಜಾಗೃತಿ ಸಮಿತಿಯಿಂದ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯಕ್ಕೆ ಶಕ್ತಿ ತುಂಬಲು ಜೂನ್ 16 ರಿಂದ 22 ರವರೆಗೆ ಗೋವಾದ ಶ್ರೀ ರಾಮನಾಥ ದೇವಸ್ಥಾನದಲ್ಲಿ 11ನೇ ಅಖಿಲ ಭಾರತೀಯ ಹಿಂದೂರಾಷ್ಟ್ರ ಅಧಿವೇಶನ ಹಮ್ಮಿಕೊಳ್ಳಲಾಗಿದೆ ಎಂದು ಜನ ಜಾಗೃತಿ ಸಮಿತಿ ರಾಜ್ಯ ವಕ್ತಾರ ಮೋಹನ್ ಗೌಡ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಮುಂದೆ ನಡೆಯುವ ಕಾರ್ಯಕ್ರಮಗಳ ರೂಪರೇಷೆಗಳ ಬಗ್ಗೆ ಚರ್ಚಿಸಲಾಗುವುದು. ಗೌರವಾನ್ವಿತರ ಸಂದರ್ಶನ ಈ ಬಾರಿಯ ಅಧಿವೇಶನದ ವಿಶೇಷ ಆಕರ್ಷಣೆ ಆಗಲಿದೆ. ಲವ್ ಜಿಹಾದ್, ಹಲಾಲ್ ಸರ್ಟಿಫಿಕೇಷನ್, ಲ್ಯಾಂಡ್ ಜಿಹಾದ್, ಕಾಶಿ – ಮಥುರಾ ಮುಕ್ತಿ, ಮತಾಂತರ, ಗೋಹತ್ಯೆ, ಕೋಟೆ, ದೇವಸ್ಥಾನಗಳ ಮೇಲಿನ ಇಸ್ಲಾಮಿ ಅತಿಕ್ರಮಣ, ದೇವಸ್ಥಾನ ಸಂಸ್ಕೃತಿಯ ರಕ್ಷಣೆ, ಕಾಶ್ಮೀರಿ ಹಿಂದು ಪುನರ್ವಸತಿ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಹಿಂದುಗಳ ಮೇಲೆ ವಿಚಾರ ವಿನಿಮಯ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಅಧಿವೇಶನದಲ್ಲಿ ಅಮೆರಿಕ, ಬಾಂಗ್ಲಾದೇಶ, ನೇಪಾಳ, ಇಂಗ್ಲೆಂಡ್, ಸಿಂಗಾಪುರ ಹಾಗೂ ಭಾರತದ 28 ರಾಜ್ಯದಲ್ಲಿನ 350ಕ್ಕೂ ಅಧಿಕ ಹಿಂದೂ ಸಂಘಟನೆಗಳ ಸಾವಿರದ ಐನೂರಕ್ಕಿಂತ ಹೆಚ್ಚಿನ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಕರ್ನಾಟಕದಿಂದ ಚಕ್ರವರ್ತಿ ಸೂಲಿಬೆಲೆ, ಹಿಂದೂ ನಾಯಕ ಅರುಣ್ ಕುಮಾರ್ ಪುತ್ತಿಲ, ಡಾ. ಎಸ್. ಆರ್ ಲೀಲಾ, ಅಡ್ಡಂಡ ಕಾರ್ಯಪ್ಪ, ರುಕ್ಮಿಣಿ ವಲ್ಲಭ ಪೀಠದ ಜಗದ್ಗುರು ಧರ್ಮಾಚಾರ್ಯ ಜನಾರ್ದನ ಮಹಾರಾಜ್ ಮೇಟೆ ಸೇರಿದಂತೆ ರಾಜ್ಯದ ಇನ್ನೂರ ಐವತ್ತಕ್ಕೂ ಅಧಿಕ ಹಿಂದುತ್ವವಾದಿ ನಾಯಕರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.