ಮಂಗಳೂರು(ಬೆಂಗಳೂರು): ಗ್ಯಾಸ್ ಗೀಸರ್ ನಿಂದ ವಿಷಾನಿಲ ಸೋರಿಕೆಯಿಂದಾಗಿ ಹಸೆಮಣೆ ಏರಬೇಕಾಗಿದ್ದ ಯುವ ಜೋಡಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಚಿಕ್ಕಜಾಲದ ತರಬನಹಳ್ಳಿಯಲ್ಲಿ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಗುಂಡ್ಲುಪೇಟೆ ತಾಲೂಕಿನ ಚಂದ್ರಶೇಖರ್, ಗೋಕಾಕ್ ತಾಲೂಕಿನ ಸುಧಾರಾಣಿ ಮೃತ ದುರ್ದೈವಿಗಳಾಗಿದ್ದಾರೆ. ನಂದಿ ಹಿಲ್ಸ್ ಬಳಿಯ ಗಾಲ್ಫ್ ಹೋಟೆಲ್ನಲ್ಲಿ ಚಂದ್ರಶೇಖರ್ ಮತ್ತು ಸುಧಾರಾಣಿ ಕೆಲಸ ಮಾಡುತ್ತಿದ್ದು ಶೀಘ್ರದಲ್ಲಿ ಮದುವೆಯಾಗಲು ನಿರ್ಧರಿಸಿದ್ದರು. ಜೂ.10 ರಂದು ಸಂಜೆ ಸುಧಾರಾಣಿ ಚಿಕ್ಕಜಾಲದ ತರಬನಹಳ್ಳಿಯಲ್ಲಿ ವಾಸವಿದ್ದ ಚಂದ್ರಶೇಖರ್ ನ ಬಾಡಿಗೆ ಮನೆಗೆ ಬಂದಿದ್ದಾಳೆ.
ರಾತ್ರಿ ಸ್ನಾನಕ್ಕೆಂದು ಗ್ಯಾಸ್ ಗೀಸರ್ ಆನ್ ಮಾಡಿ ಇಬ್ಬರೂ ಬಾತ್ ರೂಮಿಗೆ ಹೋಗಿದ್ದಾರೆ. ದುರಾದೃಷ್ಟವಶಾತ್ ಆ ವೇಳೆ ಗ್ಯಾಸ್ ಗೀಸರ್ ನಿಂದ ವಿಷಾನಿಲ ಸೋರಿಕೆಯಾಗಿದೆ. ಇದರಿಂದ ಸ್ನಾನ ಮಾಡುತ್ತಿರುವಾಗಲೇ ಉಸಿರುಗಟ್ಟಿ ಬಾತ್ ರೂಮಿನಲ್ಲಿ ಪ್ರಜ್ಞೆ ತಪ್ಪಿ ಕುಸಿದು ಬಿದ್ದು ಇಬ್ಬರೂ ಮೃತಪಟ್ಟಿದ್ದಾರೆ.ಬೆಳಿಗ್ಗೆ ಚಂದ್ರಶೇಖರ್ ಮನೆಯಿಂದ ಹೊರಗೆ ಬಾರದೆ ಇದ್ದಾಗ ಮನೆ ಮಾಲೀಕ ಅನುಮಾನಗೊಂಡು ಪರಿಶೀಲನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲವೇ ದಿನಗಳಲ್ಲಿ ಇವರಿಬ್ಬರ ಮದುವೆ ನಡೆಯುವುದರಲ್ಲಿತ್ತು. ಅಷ್ಟರಲ್ಲಿ ಈ ದುರಂತ ಸಂಭವಿಸಿದ್ದು ಹಸೆಮಣೆ ಏರಬೇಕಿದ್ದ ಈ ಜೋಡಿ ಸ್ಮಶಾನ ಸೇರುವಂತಾಗಿದ್ದು ಮಾತ್ರ ವಿಪರ್ಯಾಸ.