ಮಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೂರನೆಯ ಸ್ಥಾನಕ್ಕೆ ತಳ್ಳಲ್ಪಟ್ಟು ಹೀನಾಯವಾಗಿ ಸೋಲು ಕಂಡಿದ್ದರು. ಬಿಜೆಪಿಯಿಂದ ಮುನಿಸಿಕೊಂಡು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅರುಣ್ ಕುಮಾರ್ ಪುತ್ತಿಲ ಈ ಸೋಲಿಗೆ ಕಾರಣರಾಗಿದ್ದರು.
ಹೀಗಾಗಿ ಮುಂದಿನ ಲೋಕಸಭಾ ಚುನಾವಣೆಯೊಳಗೆ ಪುತ್ತೂರು ಕ್ಷೇತ್ರದಲ್ಲಿ ತಲೆದೋರಿರುವ ಬಿಕ್ಕಟ್ಟನ್ನು ಶಮನಗೊಳಿಸುವ ನೆಲೆಯಲ್ಲಿ ಬಿಜೆಪಿ ನಾಯಕರು ತೆರೆಮರೆಯ ಕಸರತ್ತು ನಡೆಸುತ್ತಿದ್ದು, ದೆಹಲಿಯ ಕೇಂದ್ರ ಸಚಿವರೊಬ್ಬರ ಜೊತೆ ಅರುಣ್ ಕುಮಾರ್ ಪುತ್ತಿಲ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಕೇಂದ್ರದ ವರಿಷ್ಠರ ಗಮನಕ್ಕೆ ತಂದು ಶೀಘ್ರವೇ ಸಮಸ್ಯೆಯನ್ನು ಇತ್ಯರ್ಥ ಪಡಿಸುವ ಭರವಸೆಯನ್ನು ಸಚಿವರು ನೀಡಿದ್ದಾರೆ ಎಂದು ಹೇಳಲಾಗಿದೆ.
ಕೆಲ ದಿನಗಳ ಹಿಂದೆ ಪೇಜಾವರ ಶ್ರೀಗಳು ಪುತ್ತಿಲ ಅವರ ಮನೆಗೆ ದಿಢೀರ್ ಭೇಟಿ ನೀಡಿ ರಾತ್ರಿ ವಾಸ್ತವ್ಯ ಹೂಡಿದ್ದು, ಮಧ್ಯವರ್ತಿಯಾಗಿ ಮಾತುಕತೆ ನಡೆಸಿದ್ದು ಶೀಘ್ರದಲ್ಲಿ ಬಿಕ್ಕಟ್ಟು ಶಮನವಾಗುವ ಬಗ್ಗೆ ಪೇಜಾವರ ಶ್ರೀ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ. ಬಿಜೆಪಿ ಮತ್ತು ಪುತ್ತಿಲ ನಡುವಿನ ಬಿಕ್ಕಟ್ಟು ಲೋಕಸಭಾ ಚುನಾವಣೆ ವೇಳೆ ಬಿಜೆಪಿಗೆ ಮುಳುವಾಗುವ ಸಾಧ್ಯತೆಯಿದ್ದು ಬಿಕ್ಕಟ್ಟು ಶಮನಕ್ಕೆ ಕೇಂದ್ರ ನಾಯಕರು ಮುಂದಾಗಿದ್ದಾರೆ ಎನ್ನಲಾಗಿದೆ.