ಶಕ್ತಿ ಯೋಜನೆ ಜಾರಿ – ಹೆಚ್ಚುವರಿ ಬಸ್ ಖರೀದಿಗೆ ಸರಕಾರದ ಚಿಂತನೆ

ಮಂಗಳೂರು : ಶಕ್ತಿ ಯೋಜನೆ ಜಾರಿಯಿಂದಾಗಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದ್ದು ಈ ವರ್ಷ 1,894 ಬಸ್ಸುಗಳನ್ನು ಖರೀದಿಸಲು ಸರಕಾರ ಚಿಂತನೆ ನಡೆಸಿದೆ.

ಅಗತ್ಯಕ್ಕೆ ತಕ್ಕಂತೆ ಹೆಚ್ಚಿನ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಸಾರಿಗೆ ನಿಗಮ ಮುಂದಾಗಿದೆ. ಅಲ್ಲದೆ ಮಹಿಳಾ ಪ್ರಯಾಣಿಕರು ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿರುವ ಕೆಲವು ಮಾರ್ಗಗಳಲ್ಲಿ ಬೇಡಿಕೆಯನ್ನು ಪೂರೈಸಲು ವೇಳಾಪಟ್ಟಿಯನ್ನು ಪರಿಷ್ಕರಿಸಲಾಗುವುದು ಎಂದು ಇಲಾಖೆ ಹೇಳಿದೆ.

ಪ್ರಸ್ತುತ ನಾಲ್ಕು ಸಾರಿಗೆ ನಿಗಮಗಳು 1,04,450 ಸಿಬ್ಬಂದಿ ಮತ್ತು ರಾಜ್ಯದಾದ್ಯಂತ 23,989 ಬಸ್ಸುಗಳನ್ನು ಹೊಂದಿದೆ ಒಂದು ದಿನಕ್ಕೆ ಈ ಬಸ್ಸುಗಳು ಸರಾಸರಿ 65.02 ಲಕ್ಷ ಕಿಲೋಮೀಟರ್ ಸಂಚರಿಸುತ್ತದೆ. ಶಕ್ತಿ ಯೋಜನೆಯಿಂದಾಗಿ ಸರಕಾರಕ್ಕೆ ಹೆಚ್ಚುವರಿ ವಾರ್ಷಿಕ ಸುಮಾರು ರೂ.4051.56 ಕೋಟಿ ರೂಪಾಯಿ ಹೊರೆ ಬೀಳುವ ಸಾಧ್ಯತೆ ಇದೆ.

ಶೂನ್ಯ ಟಿಕೆಟ್ ಅಥವಾ ಶಕ್ತಿ ಸ್ಮಾರ್ಟ್ ಕಾರ್ಡ್ ನೀಡಿದ ಡೇಟಾದ ಆಧಾರದ ಮೇಲೆ ನಿಗಮಗಳಿಗೆ ಉಚಿತ ಪ್ರಯಾಣದ ವೆಚ್ಚವನ್ನು ಸರಕಾರ ಬರಿಸುತ್ತದೆ. ವಿಶೇಷ ಅನುದಾನ ಮತ್ತು ಹಣಕಾಸಿನ ನೆರವಿನ ಹೊರತಾಗಿ ಬಸ್ ಪಾಸ್ ಗಳಿಗೆ ಒದಗಿಸಲಾದ ಸಬ್ಸಿಡಿಯನ್ನು ಸರಕಾರ ಎಂದಿನಂತೆ ಮರುಪಾವತಿ ಮಾಡುತ್ತದೆ. ಶಕ್ತಿ ಯೋಜನೆ ಜಾರಿಯಾದ ಜೂನ್ 11ರ ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 12 ರವರೆಗೆ 5,71,023 ಮಹಿಳೆಯರು ಉಚಿತವಾಗಿ  ಪ್ರಯಾಣಿಸಿದ್ದು ಕರ್ನಾಟಕ ಸಾರಿಗೆಯ ನಾಲ್ಕು ನಿಗಮಗಳಲ್ಲಿ ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ 1,40,22,878 ರೂಪಾಯಿ ಆಗಿದೆ.

LEAVE A REPLY

Please enter your comment!
Please enter your name here