ಮಂಗಳೂರು: ವಿದ್ಯುತ್ ದರ ಏರಿಕೆ ಖಂಡಿಸಿ ಜೂನ್ 22 ರಂದು ಕರ್ನಾಟಕ ಬಂದ್ ಗೆ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್( ಕೆಸಿಸಿಐ) ಕರೆ ನೀಡಿದೆ. ಕರ್ನಾಟಕ ಬಂದ್ ಗೆ ಕರೆ ನೀಡಿರುವ ಹಿನ್ನೆಲೆ ಜೂನ್ 22ರಂದು ರಾಜ್ಯಾದ್ಯಂತ ಕೈಗಾರಿಕೆಗಳು ಬಂದ್ ಆಗಲಿದೆ.
ಕೆಸಿಸಿಐ ಮತ್ತು ಇತರ ಜಿಲ್ಲಾ ವಾಣಿಜ್ಯ ಮಂಡಳಿಗಳು ಬಂದ್ ಗೆ ಕರೆ ನೀಡಿದ್ದು ಎಲ್ಲಾ ವ್ಯಾಪಾರ ಹಾಗೂ ಕೈಗಾರಿಕೆಗಳು ,ಇಂಡಸ್ಟ್ರಿಗಳು ಸ್ತಬ್ಧವಾಗಲಿದೆ. ಬಂದ್ ಗೆ 25ಕ್ಕೂ ಹೆಚ್ಚು ಜಿಲ್ಲಾ ಚೆಂಬರ್‌ಗಳ ಬೆಂಬಲ ದೊರಕಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕೆಸಿಸಿಐ ,ಎಸ್ಕಾಂನ ಅಸಹಜ ವಿದ್ಯುತ್ ಬೆಲೆ ಏರಿಕೆಯನ್ನು ವಿರೋಧಿಸಿ ಬಂದ್ ಗೆ ಕರೆ ನೀಡಲಾಗಿದೆ. ಕಳೆದ ಎಂಟು ದಿನಗಳಿಂದ ವಿದ್ಯುತ್ ಶುಲ್ಕ ಹೆಚ್ಚಳದ ಪರಿಣಾಮದ ಗಂಭೀರತೆಯನ್ನು ಸರಕಾರಕ್ಕೆ ತಿಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಆದರೆ ಅಧಿಕಾರಿಗಳಾಗಲಿ ,ಜನಪ್ರತಿನಿಧಿಗಳಾಗಲಿ ನಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ. ಸರಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಬಂದ್ ಗೆ ಕರೆ ನೀಡಿದ್ದೇವೆ. ಇನ್ನಾದರೂ ಸರಕಾರ ನಮ್ಮ ಮನವಿಗೆ ಸ್ಪಂದಿಸುತ್ತದೆ ಎಂದು ಭಾವಿಸಿದ್ದೇವೆ ಎಂದು ಕೆಸಿಸಿಐ ಹೇಳಿದೆ .