ಗೃಹಜ್ಯೋತಿ – 4 ದಿನದಲ್ಲಿ 12 ಲಕ್ಷ ನೋಂದಣಿ – ಗಡುವು ನೀಡದ ಸರಕಾರ

ಮಂಗಳೂರು: ಗೃಹಜ್ಯೋತಿ ನೋಂದಣಿ ಪ್ರಕ್ರಿಯೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಸರ್ವರ್ ಸಮಸ್ಯೆಯ ನಡುವೆಯೂ ಜೂನ್ 21ರ ಸಂಜೆ ವೇಳೆಗೆ ಒಟ್ಟು 12.51 ಲಕ್ಷ ಗ್ರಾಹಕರು ಸೇವಾ ಸಿಂಧು ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ.‌

ಗೃಹ ಜ್ಯೋತಿ ಯೋಜನೆಗೆ ನೋಂದಣಿ ಪ್ರಕ್ರಿಯೆ ಜೂನ್ 18ರಂದು ಆರಂಭಗೊಂಡಿತ್ತು. ಮೊದಲ ದಿನ 96,305, ಎರಡನೇ ದಿನ 3,34,845, ಮೂರನೇ ದಿನ ರಾತ್ರಿ ವೇಳೆಗೆ 4,64,225 ಹಾಗೂ ನಾಲ್ಕನೇ ದಿನ 3.56 ಲಕ್ಷ ಗ್ರಾಹಕರು ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ.

ಜೂನ್ 22ರಂದು ರಾಜ್ಯದ ಎಲ್ಲಾ ವಿದ್ಯುತ್ ಕಚೇರಿಗಳಲ್ಲಿ ಸಾರ್ವಜನಿಕರಿಗೆ ನೋಂದಣಿ ಮಾಡಲು ಪ್ರತ್ಯೇಕ ಲಾಗಿನ್ ಐಡಿ ಮತ್ತು ಪ್ರತ್ಯೇಕ ಲಿಂಕನ್ನು ನೀಡಲಾಗಿದೆ. ಹಾಗಾಗಿ ರಾಜ್ಯದ 2000 ವಿದ್ಯುತ್ ಕಚೇರಿಗಳಲ್ಲಿ ಗೃಹಜ್ಯೋತಿ ನೋಂದಣಿ ಪ್ರಕ್ರಿಯೆ ಸರಾಗವಾಗಿ ನಡೆಯಲಿದ್ದು, ಗ್ರಾಹಕರು ಇದರ ಪ್ರಯೋಜನ ಪಡೆಯಬಹುದಾಗಿದೆ. ಯೋಜನೆ ನೋಂದಣಿ ಮಾಡಿಕೊಳ್ಳಲು ಯಾವುದೇ ಗಡುವನ್ನು ನಿಗದಿಪಡಿಸದ ಕಾರಣ ಗ್ರಾಹಕರು ಗಡಿಬಿಡಿ ಇಲ್ಲದೆ, ಆತಂಕ ಪಡದೆ ಸೇವಾ ಸಿಂಧು ಪೋರ್ಟಲ್ ಮೂಲಕ ನೊಂದಾಯಿಸಬಹುದು ಎಂದು ರಾಜ್ಯ ಸರಕಾರ ಸ್ಪಷ್ಟಪಡಿಸಿದೆ.

LEAVE A REPLY

Please enter your comment!
Please enter your name here