ಮಂಗಳೂರು: ಬಂಟ್ವಾಳ ತಾಲೂಕಿನ ವಗ್ಗ ಸಮೀಪದ ಆಲಂಪುರಿಯ ಮನೆಯೊಂದರ ಬಳಿ ಗಾಯಗೊಂಡ ನಾಗರ ಹಾವು ಪತ್ತೆಯಾಗಿದೆ. ನಾಗರಹಾವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಗುಣಮುಖವಾದ ಬಳಿಕ ಜೂನ್ 19ರಂದು ಸುರಕ್ಷಿತವಾಗಿ ರಕ್ಷಿತಾರಣ್ಯಕ್ಕೆ ಬಿಡಲಾಗಿದೆ.
ಆಲಂಪುರಿ ನಿವಾಸಿ ವಸಂತಿ ಎಂಬವರ ಮನೆಯ ಬಳಿ ಜೂನ್ 6 ರಂದು ನಾಗರಹಾವು ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ವಸಂತಿಯವರು ನೀಡಿದ ಮಾಹಿತಿಯಂತೆ ಒದ್ದಾಡುತ್ತಿದ್ದ ನಾಗರಹಾವನ್ನು ಉರಗ ಪ್ರೇಮಿ ಸ್ನೇಕ್ ಕಿರಣ್ ರಕ್ಷಿಸಿದ್ದಾರೆ. ಈ ವೇಳೆ ಅದರ ಹೊಟ್ಟೆ ಮತ್ತು ಕತ್ತಿನ ಭಾಗಕ್ಕೆ ಗಾಯವಾಗಿತ್ತು. ಹಾವನ್ನು ಮಂಗಳೂರಿನ ಪಶುವೈದ್ಯ ಡಾ. ಯಶಸ್ವಿ ಬಳಿ ಕೊಂಡೊಯ್ದ ಕಿರಣ್ ಚಿಕಿತ್ಸೆ ಕೊಡಿಸಿದ್ದಾರೆ. ಈ ವೇಳೆ ಹಾವನ್ನು ಪರೀಕ್ಷಿಸಿದ ವೈದ್ಯರು ಹರಿದ ಚರ್ಮಕ್ಕೆ ಹೊಲಿಗೆ ಹಾಕಿದ್ದರು.
ಆದರೂ ಹಾವಿನ ಹೊಟ್ಟೆಯಲ್ಲಿ ಏನೋ ಇದೆ ಎಂಬ ಸಂಶಯಗೊಂಡು ಪರೀಕ್ಷೆ ನಡೆಸಿದ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಹಾವಿನ ಉದರದಲ್ಲಿದ್ದ ಸುಣ್ಣದ ಪ್ಲಾಸ್ಟಿಕ್ ಬುರುಡೆಯೊಂದನ್ನು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ.
ಡಾ. ಯಶಸ್ವಿ ಸುಮಾರು 15 ದಿನಗಳ ಕಾಲ ಹಾವಿನ ಬಗ್ಗೆ ನಿಗಾ ವಹಿಸಿ ಬಳಿಕ ಕಿರಣ್ ಅವರಿಗೆ ಹಸ್ತಾಂತರಿಸಿದ್ದಾರೆ. ಎರಡು ದಿನಗಳ ಕಾಲ ಹಾವನ್ನು ಜತೆಯಲ್ಲಿಟ್ಟು ಹಾವಿನ ಆರೋಗ್ಯದ ಬಗ್ಗೆ ನಿಗಾ ವಹಿಸಿದ ಕಿರಣ್ ಬಳಿಕ ಬಂಟ್ವಾಳ ವಲಯ ಅರಣ್ಯ ಅಧಿಕಾರಿ ರಾಜೇಶ್ ಬಳಿಗಾರ್ ಹಾಗೂ ಅರಣ್ಯ ರಕ್ಷಕ ಮನೋಜ್ ಅವರ ನೆರವಿನಿಂದ ಹಾವನ್ನು ರಕ್ಷಿತಾರಣ್ಯಕ್ಕೆ ಬಿಡುವ ಮೂಲಕ ಹಾವಿಗೆ ಹೊಸ ಬದುಕು ನೀಡಿದ್ದಾರೆ.