ಮಂಗಳೂರು: ಚಂದ್ರಯಾನ ಹಾಗೂ ಮಂಗಳಯಾನದ ಜೊತೆಗೆ ಭವಿಷ್ಯದಲ್ಲಿ ಬಾಹ್ಯಾಕಾಶ ಅನ್ವೇಷಣೆಯ ಹಲವು ಕನಸುಗಳನ್ನು ಹೊಂದಿರುವ ಮಹತ್ವದ ಅರ್ಟೆಮಿಸ್ ಒಪ್ಪಂದಕ್ಕೆ ಭಾರತ ಸಹಿ ಹಾಕಿದೆ. ಮುಂದಿನ ವರ್ಷ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಜಂಟಿ ಕಾರ್ಯಾಚರಣೆಗೆ ಅಮೆರಿಕಾದ ನಾಸಾ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಜೊತೆಗೂಡಿ ಕೆಲಸ ಮಾಡಲಿದೆ.
2024ರಲ್ಲಿ ಮಾನವ ಸಹಿತ ಜಂಟಿ ಅಂತರಿಕ್ಷಯಾನ ಮಾಡಲಿದ್ದು, ಇತರ ಅಂತರಿಕ್ಷ ಕುರಿತ ವಿಷಯಗಳ ಬಗ್ಗೆ ಅಧ್ಯಯನ ನಡೆಸಲಿದೆ. ಈ ಮೂಲಕ ಅಮೆರಿಕಾದಿಂದ ಸೃಷ್ಟಿಯಾದ ವೇದಿಕೆಗೆ 26ನೇ ದೇಶವಾಗಿ ಭಾರತ ಸೇರ್ಪಡೆಯಾಗಿದೆ. ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಆಹ್ವಾನದ ಮೇರೆಗೆ ಯುಎಸ್ ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಹಲವು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಅರ್ಟೆಮಿಸ್ ಯೋಜನೆಯ ಭಾಗವಾಗಿ 2024ರಲ್ಲಿ ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಜಂಟಿ ಪ್ರಯಾಣ ಕೈಗೊಳ್ಳಲು ಉಭಯ ದೇಶಗಳು ಸಮ್ಮತಿಸಿವೆ.
1967ರ ಬಾಹ್ಯಾಕಾಶ ಒಪ್ಪಂದದ ಆಧಾರದಲ್ಲಿ ಅರ್ಟೆಮಿಸ್ ಒಪ್ಪಂದಗಳು ನಾಗರಿಕ ಬಾಹ್ಯಾಕಾಶ ಪರಿಶೋಧನೆ ಮತ್ತು ಬಳಕೆ ಮಾರ್ಗದರ್ಶನಕ್ಕಾಗಿ ವಿನ್ಯಾಸಗೊಳಿಸಲಾದ ಒಂದು ಕಾರ್ಯಾಚರಣೆಯಾಗಿದೆ.
2025ರ ವೇಳೆಗೆ ಮಾನವನನ್ನು ಚಂದ್ರನತ್ತ ಕಳಿಸಲು ಪ್ರಯತ್ನ ನಡೆಸಿದೆ. ಜೊತೆಗೆ ಮಂಗಳಯಾನ ಮತ್ತು ಅದರ ಆಚೆಗೆ ಬಾಹ್ಯಾಕಾಶ ಪರಿಶೋಧನೆಯನ್ನು ವಿಸ್ತರಿಸುವ ಅಂತಿಮ ಗುರಿ ಹೊಂದಿದೆ. ನಾಸಾ ಮತ್ತು ಇಸ್ರೋ ಈ ವರ್ತಮಾನದ ಮಾನವ ಬಾಹ್ಯಾಕಾಶಯಾನ ಸರಕಾರಕ್ಕಾಗಿ ಕಾರ್ಯತಂತ್ರವನ್ನು ಅಳವಡಿಸಲಾಗಿದೆ ಎಂದು ಶ್ವೇತ ಭವನದ ಮೂಲಗಳು ತಿಳಿಸಿದೆ.