ಮಂಗಳೂರು: ಪ್ರತಿಯೊಬ್ಬರಿಗೂ 10 ಕೆ.ಜಿ ಅಕ್ಕಿ ನೀಡುವುದಾಗಿ ಘೋಷಣೆ ಮಾಡುವ ಮುನ್ನ ಕಾಂಗ್ರೆಸ್ ಮುಖಂಡರ ತಲೆಯಲ್ಲಿ ಮೆದುಳು ಇರಲಿಲ್ಲವೇ ? ಎಂದು ಶೋಭಾ ಕರಂದ್ಲಾಜೆ ನೀಡಿರುವ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ವಿದೇಶದಿಂದ ಕಪ್ಪು ಹಣ ತಂದು ಎಲ್ಲರ ಖಾತೆಗೆ 15 ಲಕ್ಷ ರೂಪಾಯಿ ಹಾಕುತ್ತೇವೆ. ರೈತರ ಆದಾಯ ದ್ವಿಗುಣ ಮಾಡುತ್ತೇವೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುತ್ತೇವೆ ಎಂದಾಗ ಅವರ ತಲೆಯಲ್ಲಿ ಮೆದುಳು ಇರಲಿಲ್ಲವೇ ? ಎಂದು ಹೇಳುವ ಮೂಲಕ ಕರಂದ್ಲಾಜೆ ಪ್ರಶ್ನೆಗೆ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಡಿಕೆಶಿ ನಾವು ಜನರಿಗೆ ಕೊಟ್ಟಿರುವ ಮಾತು ಉಳಿಸಿಕೊಳ್ಳುತ್ತೇವೆ. ವಿರೋಧಪಕ್ಷಗಳು ಬಹಳ ಟೀಕೆ ಮಾಡುತ್ತಿವೆ, ಮಾಡಲಿ. ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ ಎಂದರು.
ನಮ್ಮ ಪಕ್ಷ ಬಿಜೆಪಿ ಪಕ್ಷಕಿಂತ ವಿಭಿನ್ನವಾಗಿದೆ. ಅವರು ನಾಲ್ಕು ವರ್ಷ ಆಡಳಿತ ಮಾಡಿದ್ದರೂ ಅವರ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆ ಈಡೇರಿಸಿಲ್ಲ. ಒಂದು ಲಕ್ಷ ರೂಪಾಯಿ ವರೆಗಿನ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದಿದ್ದರು. ಆದರೆ ಮಾಡಲಿಲ್ಲ. ನಾವು ಘೋಷಣೆ ಮಾಡಿರುವ ಯೋಜನೆ ಜಾರಿಗೆ ಮುಂದಾಗಿದ್ದೇವೆ. ನಮಗೆ ಬಡವರ ಬಗ್ಗೆ ಅಷ್ಟಾದರೂ ಕಾಳಜಿ ಇದೆ. ಅವರು ತಾಳ್ಮೆಯಿಂದ ಇದ್ದರೆ ಉತ್ತಮ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.