ಮಂಗಳೂರು(ನವದೆಹಲಿ): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಯೋಜನೆ ಅನ್ನಭಾಗ್ಯ ಜಾರಿಗಾಗಿ ಅಕ್ಕಿ ಹೊಂದಿಸಲು ಸರ್ಕಾರ ಕಸರತ್ತು ನಡೆಸುತ್ತಿದ್ದು, ಸಚಿವ ಕೆಎಚ್ ಮುನಿಯಪ್ಪ ಜೂ.23ರ ಇಂದು ನವದೆಹಲಿಯಲ್ಲಿ ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ, ಕರ್ನಾಟಕಕ್ಕೆ ಅಕ್ಕಿ ಪೂರೈಸುವಂತೆ ಮನವಿ ಮಾಡಿದ್ದಾರೆ. ಆದರೆ ಪಿಯೂಷ್ ಗೋಯಲ್ ಅವರು ಹಾರಿಕೆಯ ಉತ್ತರ ನೀಡಿದ್ದಾರೆ ಎಂದು ಮುನಿಯಪ್ಪ ಹೇಳಿದ್ದಾರೆ.
ಪಿಯೂಷ್ ಗೋಯಲ್ ಭೇಟಿ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಮುನಿಯಪ್ಪ, ಅಕ್ಕಿ ಕೊಡಲು ಆಗುವುದಿಲ್ಲ ಎಂದು ಗೋಯಲ್ ಹೇಳಿದ್ದಾರೆ. ಹಣ ನೀಡುತ್ತೇವೆ ಅಕ್ಕಿ ಪೂರೈಸಿ ಎಂದು ಕೇಳಿದೆ. ಆದ್ರೆ ಕೇಂದ್ರ ಸಚಿವ ಗೋಯಲ್ ಹಾರಿಕೆ ಉತ್ತರ ಕೊಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿಸದರು.
ಎಷ್ಟೇ ಕಷ್ಟವಾದರೂ ಉಚಿತವಾಗಿ 10 ಕೆಜಿ ಅಕ್ಕಿ ಕೊಟ್ಟೇ ಕೊಡುತ್ತೇವೆ. ಅಕ್ಕಿ ಕೊಡಲು ಸ್ವಲ್ಪ ವಿಳಂಬವಾಗಹುದು ಅಷ್ಟೇ. ಏಜೆನ್ಸಿಗಳ ಮೂಲಕ ಅಕ್ಕಿ ಖರೀದಿಸುವ ಪ್ರಯತ್ನ ಮಾಡುತ್ತಿದ್ದೇವೆ. ರಾಜಕೀಯ ಉದ್ದೇಶದಿಂದ ಅಕ್ಕಿ ಪೂರೈಕೆ ಮಾಡುತ್ತಿಲ್ಲ. ಸ್ಟಾಕ್ ಇದ್ದರೂ ಅಕ್ಕಿ ಕೊಡಲ್ಲ ಎನ್ನುವುದು ಎಷ್ಟರ ಮಟ್ಟಿಗೆ ಸರಿ? ಅಕ್ಕಿ ವಿಚಾರವಾಗಿ ನಮ್ಮ ದಾರಿಯನ್ನು ನಾವು ಕಂಡುಕೊಳ್ಳಬೇಕಿದೆ. ರಾಜಕೀಯ ದುರುದ್ದೇಶ ಇದೆ ಎನ್ನುವ ಭಾವನೆ ಬರುತ್ತಿದೆ. ಈ ವಾರದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಸಚಿವರು ಹೇಳಿದರು.
ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಕೇಂದ್ರ ಸರ್ಕಾರದ ಧೋರಣೆ ಏನು ಎಂದು ಎಲ್ಲರಿಗೂ ಅರ್ಥವಾಗುತ್ತಿದೆ. ಮುಂದೆ ಏನು ಮಾಡಬೇಕೆಂದು ಸಿಎಂ, ಆಹಾರ ಸಚಿವರು ನಿರ್ಧರಿಸುತ್ತಾರೆ. ಇನ್ನು ಯಡಿಯೂರಪ್ಪ ಸೇರಿ ಬಿಜೆಪಿ ನಾಯಕರು ಧರಣಿ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಕೇಂದ್ರ ಸರ್ಕಾರದ ಧೋರಣೆ ವಿರುದ್ಧ ಪ್ರತಿಭಟನೆ ಮಾಡಿದ್ರೆ ಒಳ್ಳೆಯದು ಎಂದು ಟಾಂಗ್ ನೀಡಿದರು.
ರಾಷ್ಟಪತಿ ಭೇಟಿ, ಕೇಂದ್ರ ಸಚಿವರ ಭೇಟಿ ಸೇರಿದಂತೆ ವಿವಿಧ ಕಾರಣಕ್ಕೆ ದೆಹಲಿಗೆ ಹಾರಿದ್ದ ಸಿಎಂ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನ ಭೇಟಿಯಾಗಿ ಅಕ್ಕಿ ಸಂಬಂಧ ಚರ್ಚಿಸಿದ್ದರು. ಅಮಿತ್ ಶಾ ಕೂಡಾ ಸಂಬಂಧ ಪಟ್ಟವರ ಜತೆ ಚರ್ಚಿಸುತ್ತೇನೆ ಎಂದು ಹೇಳಿದ್ದರಂತೆ, ಆದ್ರೆ, ಇದೀಗ ಸ್ವತಃ ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್, ಕರ್ನಾಟಕಕ್ಕೆ ಅಕ್ಕಿ ಕೊಡಲು ನಿರಾಕರಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.