ಮಂಗಳೂರು: ತನ್ನ ಪತ್ನಿಯನ್ನು ಸಾರ್ವಜನಿಕರೆದುರು ರಸ್ತೆ ತುಂಬಾ ಅಟ್ಟಾಡಿಸಿ ಮನಬಂದಂತೆ ರಾಡ್, ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ತಿರುಮಲಾಪುರದಲ್ಲಿ ನಡೆದಿದೆ. ಶ್ರೀನಿವಾಸ್ ಎಂಬಾತ ತನ್ನ ಪತ್ನಿ ಸವಿತ ಎಂಬವರ ಮೇಲೆ ಹಲ್ಲೆ ನಡೆಸಿದ್ದಾನೆ.
18 ವರ್ಷಗಳ ಹಿಂದೆ ವಿವಾಹವಾಗಿದ್ದ ಶ್ರೀನಿವಾಸ್ ಹಾಗೂ ಸವಿತಾ ಕಳೆದ ಎರಡು ವರ್ಷಗಳಿಂದ ಒಂದೇ ಮನೆಯಲ್ಲಿ ಬೇರೆ ಬೇರೆಯಾಗಿ ವಾಸಮಾಡುತ್ತಿದ್ದಾರೆ. ಪತಿಯಿಂದ ವಿಚ್ಛೇದನಕ್ಕಾಗಿ ಕಾನೂನು ಹೋರಾಟ ನಡೆಸುತ್ತಿರುವ ಸವಿತಾ, ಆಸ್ತಿ ವಿಭಾಗಕ್ಕಾಗಿ ಪತಿ ಮೇಲೆ ಕೇಸ್ ದಾಖಲಿಸಿದ್ದಳು. ಈ ನಡುವೆ ನಿವೇಶನವೊಂದನ್ನು ಮಾರಾಟ ಮಾಡುವ ವಿಚಾರದಲ್ಲಿ ಸವಿತಾ ಜೊತೆ ಶ್ರೀನಿವಾಸ್ ಜಗಳ ಮಾಡಿದನು. ಈ ವೇಳೆ ಎದುರು ಮಾತನಾಡಿದ ಪತ್ನಿ ಮೇಲೆ ಮಚ್ಚು ಹಾಗೂ ರಾಡ್ನಿಂದ ಹಲ್ಲೆ ಮಾಡಿದ್ದಾನೆ. ಪತಿಯ ಹಲ್ಲೆಯಿಂದ ತಪ್ಪಿಸಿಕೊಂಡು ಓಡಿದರೂ ಬೆನ್ನು ಬಿಡದೆ ಮಚ್ಚಿನಿಂದ ಅಮಾನುಷವಾಗಿ ಹಲ್ಲೆಗೈದಿದ್ದಾನೆ. ಅಲ್ಲದೆ ಪತ್ನಿ ಸವಿತಾ ತಂಗಿ ಅನಿತಾ ಕಾರಿನ ಮೇಲೂ ದಾಳಿ ಮಾಡಿ ಗ್ಲಾಸ್ ಪುಡಿ ಮಾಡಿದ್ದಾನೆ.
ಗಾಯಾಳು ಸವಿತಾಳನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ಶ್ರೀನಿವಾಸ್ ಬಂಧನಕ್ಕೆ ಪೊಲೀಸರು ಎರಡು ತಂಡ ರಚಿಸಿದ್ದಾರೆ. ಆರೋಪಿಗೆ ಮಚ್ಚು ನೀಡಿದ ಶ್ರೀನಿವಾಸ್ ಸಂಬಂಧಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.