ಮಂಗಳೂರು(ನೆಲಮಂಗಲ): 2023-24ರ ಬಜೆಟ್ ಜು.7 ರಂದು ಮಂಡನೆ ಮಾಡಲು ತಯಾರಿ ನಡೆಸಿದ್ದು, ಬಜೆಟ್ ಗಾತ್ರ ಅಂದಾಜು 3.35 ಲಕ್ಷ ಕೋಟಿ ರೂಪಾಯಿ ಇರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯದ 16ನೇ ವಿಧಾನ ಸಭೆಗೆ ನೂತನವಾಗಿ ಆಯ್ಕೆಯಾಗಿರುವ ನೂತನ ಸದಸ್ಯರಿಗೆ ಜೂ.26ರಂದು ನೆಲಮಂಗಲದ ಎಸ್‍ಡಿಎಂ ಇನ್‍ಸ್ಟಿಟ್ಯೂಟ್ ಆಫ್ ನ್ಯಾಚುರೋಪತಿ ಕ್ಷೇಮವನದಲ್ಲಿ ಹಮ್ಮಿ ಕೊಂಡಿದ್ದ ಮೂರು ದಿನಗಳ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಮೊದಲ ಬಾರಿ ಬಜೆಟ್ ಮಂಡಿಸಿದ್ದಾಗ ಕರ್ನಾಟಕದ ಬಜೆಟ್ ಗಾತ್ರ 21 ಕೋಟಿ ರೂಪಾಯಿ ಇತ್ತು. ಇತ್ತೀಚೆಗೆ ಮಂಡಿಸಲಾದ ಬಜೆಟ್ ಗಾತ್ರ 3.9 ಲಕ್ಷ ಕೋಟಿ ರೂಪಾಯಿ. ಆದರೆ ಈ ಬಾರಿ ಮಂಡಿಸಲಿರುವ ಬಜೆಟ್ ಗಾತ್ರ 30 ರಿಂದ 35 ಸಾವಿರ ಕೋಟಿ ರೂಪಾಯಿ ಹೆಚ್ಚಾಗಲಿದೆ. ಅಲ್ಲದೆ, ನಾವು 5 ಗ್ಯಾರೆಂಟಿ ಘೋಷಣೆ ಮಾಡಿದ್ದೇವೆ. ಇದಕ್ಕಾಗಿ ಹಣ ಹೊಂದಿಸಬೇಕಿದೆ. ಹೀಗಾಗಿ ಬಜೆಟ್ ಗಾತ್ರ ವಿಸ್ತರಣೆಯಾಗಲಿದ್ದು, ಈ 5 ಗ್ಯಾರಂಟಿ ಜಾರಿಗೆ ಸುಮಾರು 59ರಿಂದ 60 ಸಾವಿರ ಕೋಟಿ ರೂಪಾಯಿ ಹಣ ಬೇಕಾಗಲಿದೆ ಎಂದು ತಿಳಿಸಿದರು.
ಆಗಸ್ಟ್ 1 ರಿಂದ ನೂತನ ಬಜೆಟ್ ಜಾರಿಯಾಗಲಿದೆ ಎಂದ ಅವರು, ಶಾಸಕರು ಸಂಸದರು ಬಜೆಟ್ ಅಂದರೆ ಏನೆಂದು ಅರ್ಥ ಮಾಡಿಕೊಳ್ಳಬೇಕು. 12ನೇ ಶತಮಾನದಲ್ಲಿ ಕಾಯಕಯೋಗಿ ಬಸವಣ್ಣನವರು ಬಜೆಟ್ ಬಗ್ಗೆ ಹೇಳಿದ್ದಾರೆ. ಕಾಯಕ ಮತ್ತು ದಾಸೋಹ ಬಜೆಟ್‍ನ ಪ್ರಮುಖ ಸಂಗತಿಗಳು. ಕಾಯಕ ಎಂದರೆ ಉತ್ಪಾದನೆ, ದಾಸೋಹ ಎಂದರೆ ಹಂಚಿಕೆ. ಬಜೆಟ್ ಎಂದರೆ ಇಷ್ಟೇ, ಎಲ್ಲಿಂದ ಉತ್ಪಾದನೆ ಬರುತ್ತದೆ ಅದನ್ನು ಸಮಾಜದ ಯಾರಿಗೆ ಹಂಚುತ್ತೇವೆ ಎನ್ನುವುದೇ ಬಜೆಟ್ ನ ಮೌಲ್ಯ ಎಂದು ಅವರು ವಿಶ್ಲೇಷಿಸಿದರು.