ಮಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯ ನೇಮಕಾತಿ ಜಿಪಿಎಸ್ಟಿಆರ್ 2022 ರಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ನೇಮಕಾತಿ ಪರಿಶೀಲನೆಗೆ ತಮ್ಮ ಹಳೆ ವಿದ್ಯಾರ್ಥಿಗಳು ಪ್ರತಿ ಅಂಕಪಟ್ಟಿ ಪ್ರಮಾಣಪತ್ರಕ್ಕೆ 1500 ರೂಪಾಯಿಯಂತೆ ಪಾವತಿಸಿರುತ್ತಾರೆ. ಇದರಂತೆ ಒಂದು ದೊಡ್ಡ ಪ್ರಮಾಣದ ಮೊತ್ತವನ್ನು ವಿದ್ಯಾರ್ಥಿಗಳಿಂದ ವಿಶ್ವವಿದ್ಯಾಲಯವು ಸಂಗ್ರಹಿಸಿರುತ್ತದೆ. ಪ್ರತಿ ವಿದ್ಯಾರ್ಥಿಗಳಿಂದ ಅಂದಾಜು 18,000 ದಷ್ಟು ಮೊತ್ತವನ್ನು ವಿಶ್ವವಿದ್ಯಾಲಯವು ಚಲನ್ ರೂಪದಲ್ಲಿ ಸಂಗ್ರಹಿಸಿದ್ದು, ಸುಮಾರು 130 ಅಭ್ಯರ್ಥಿಗಳಿಂದ ಸಂಗ್ರಹವಾದ ನಂತರದಲ್ಲಿ ಈ ಮೊತ್ತವನ್ನು 500 ರೂಪಾಯಿಗಳಿಗೆ ಇಳಿಸಲಾಗಿದೆ.
ಆದರೆ ಈ ಹಿಂದೆ ಪ್ರತಿಗಳಿಗೆ 1500ರಂತೆ ಪಾವತಿಸಿರುವ ಅಭ್ಯರ್ಥಿಗಳಿಗೆ ವಿಶ್ವವಿದ್ಯಾಲಯ ಪಡೆದುಕೊಂಡ ಹೆಚ್ಚುವರಿ ಮೊತ್ತವನ್ನು ಹಿಂದಿರುಗಿಸಿಲ್ಲ. ಇಂತಹ ದುಬಾರಿ ಮೊತ್ತದಿಂದ ಅನೇಕ ಅಭ್ಯರ್ಥಿಗಳಿಗೆ ಆರ್ಥಿಕವಾಗಿ ಸಮಸ್ಯೆಗಳಾಗಿವೆ. ಹಾಗಾಗಿ ಎಲ್ಲಾ ಅಂಶಗಳನ್ನು ಮನಗಂಡು ಮಂಗಳೂರು ವಿಶ್ವವಿದ್ಯಾನಿಲಯವು ಅಂಕಪಟ್ಟಿ ಪರಿಶೀಲನೆಗೆಂದು ಅಭ್ಯರ್ಥಿ ಗಳಿಂದ ಪಡೆದುಕೊಂಡಿರುವ ಹೆಚ್ಚಿನ ಮೊತ್ತವನ್ನು ಹಿಂಪಾವತಿಸಲು ಒತ್ತಾಯಿಸಿ, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಹಾಗೂ ಕುಲಸಚಿವರಿಗೆ ಡಿ ವೈ ಎಫ್ ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ನಿಯೋಗವು ಜೂನ್ 27ರಂದು ಮನವಿಯನ್ನು ಸಲ್ಲಿಸಿದೆ. ನಿಯೋಗದಲ್ಲಿ ಡಿ ವೈ ಎಫ್ ಐ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಜಿಲ್ಲಾ ಕೋಶಾಧಿಕಾರಿ ಮನೋಜವ ಮಂಜೂರು, ನಗರ ಕಾರ್ಯದರ್ಶಿ ನವೀನ್ ಕೊಂಚಾಡಿ ಜಿಲ್ಲಾ ಮುಖಂಡರಾದ ರಜಾ ಕಮಂಟೆ ಪದವು ರಜಾಕ್ ಮುಡಿಪು ನವಾಜ್ ಮುಂತಾದವರು ಉಪಸ್ಥಿತರಿದ್ದರು.