ದಿನೇಶ್ ಅಮಿನ್ ಮಟ್ಟು ಅವರು ಸಂಪಾದಕರಾಗಿ ರೂಪಿಸಿರುವ ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಬರಹಗಳ ಸಂಕಲನ ‘ಬೇರೆಯೇ ಮಾತು’ ಪುಸ್ತಕದ ಕುರಿತು ನರೇಂದ್ರ ರೈ ದೇರ್ಲ ಅವರ ಟಿಪ್ಪಣಿ…
‘ಬೇರೆಯೇ ಮಾತು’- ಇತ್ತೀಚೆಗೆ ದೇವನೂರು ಕೈಯಿಂದ ಅಧಿಕೃತವಾಗಿ ಬಿಡುಗಡೆಗೊಂಡರೂ ಆ ಪುಸ್ತಕ ಮುಂಚೆಯೇ ಮಾರುಕಟ್ಟೆಗೆ ಲಗ್ಗೆಯಿಟ್ಟು ಬಹುಪಾಲು ಆಸಕ್ತ ಓದುಗರ ಕೈಗೆ ಲಭಿಸಿತ್ತು. ಪತ್ರಿಕೆಗಳಲ್ಲಿ ಪ್ರಕಟಿತ ನಿಯತ ಅಂಕಣಗಳಿಗಿಂತ ಸಂಪಾದಕೀಯದ ಬಾಳುವೆ ಸ್ವಲ್ಪ ಕಡಿಮೆಯೇ. ಸಾಹಿತ್ಯ-ಸಂಸ್ಕೃತಿ, ಸಮಾಜ, ಸಮುದಾಯಕ್ಕೆ ಸಂಬಂಧಿಸಿದ ಎಷ್ಟೋ ಸೂಕ್ಷ್ಮ ಅಂಕಣಗಳು ಕಾಲಾತೀತವಾಗಿ ಉಳಿಯುತ್ತವೆ. ಈ ಹಿನ್ನಲೆಯಲ್ಲಿ ವಡ್ಡರ್ಸೆ ರಘುರಾಮ ಶೆಟ್ಟರ ಸಂಪಾದಕೀಯ ಈಗ ಎಷ್ಟು ಪ್ರಸ್ತುತ ಎನ್ನುವ ಪ್ರಶ್ನೆಯನ್ನು ಇಟ್ಟುಕೊಂಡೇ ಬಹುತೇಕ ಓದುಗರು ಈ ಕೃತಿಯನ್ನು ಪ್ರವೇಶಿಸಬಹುದು. ನನ್ನ ಮನಸ್ಸು ಕೂಡಾ ಅದೇ ಆಗಿತ್ತು.
ಇದಕ್ಕಿಂತ ಹೆಚ್ಚಿನ ಇನ್ನೊಂದು ವಿಶೇಷ ಕುತೂಹಲ ಇರುವುದು ಆ ಪುಸ್ತಕವನ್ನು ದಿನೇಶ್ ಅಮಿನ್ ಮಟ್ಟು ಸಂಪಾದಿಸಿದ್ದಾರೆ ಎಂಬುವುದು. ಇವತ್ತು ನಮ್ಮ ಅಂಗೈಯಲ್ಲಿರುವ ಮಾಹಿತಿ ಯಂತ್ರ ಜಗತ್ತನ್ನು ಕ್ಷಣಾರ್ಧದಲ್ಲಿ ಬಗೆದು ಮಾಹಿತಿಯನ್ನು ರಾಶಿ ಸುರಿಯುತ್ತವೆ. ವಡ್ಡರ್ಸೆ ರಘುರಾಮಶೆಟ್ಟರು ಪುಟಕಟ್ಟಿದ ಕಾಲದಲ್ಲಿ ಇಂತಹ ಮಾಹಿತಿ ಜಾಲವನ್ನು ಊಹಿಸಲು ಸಾಧ್ಯವಿಲ್ಲ. ಇಂದಿರಾಗಾಂಧಿಯ ಸಾವಿನ ತತ್ ಕ್ಷಣದ ಮತ್ತು ತತ್ ಸ್ಥಳದ ನೇರ ವರದಿಯ 2-3 ಭಾಗಗಳು ಇಲ್ಲಿವೆ. ಸುಮಾರು ಮೂರು ನಾಲ್ಕು ದಶಕಗಳ ಹಿಂದಿನ ಪತ್ರಿಕೋದ್ಯಮ ಎಷ್ಟು ಸವಾಲಿನದ್ದು ಮತ್ತು ಸೂಕ್ಷ್ಮವಾದದ್ದು ಎಂಬ ಕಾರಣಗಳಿಗೆ ಇವತ್ತಿನ ಪತ್ರಕರ್ತರಿಗೆ ಈ ಪುಸ್ತಕ ಒಂದು ಪಠ್ಯವೂ ಹೌದು. ಒಬ್ಬ ಪ್ರಾಮಾಣಿಕ ಪತ್ರಕರ್ತ- ಸಂಪಾದಕ ಏಕಕಾಲದಲ್ಲಿ ಪ್ರಕಾಶಕನೂ ಆಗಬಾರದು ಎಂಬ ಸಂದೇಶ; ತಾನು ಬರೆಯುವ ಸಂಪಾದಕೀಯ ಅಚ್ಚಾಗುವ ಕಾಗದವನ್ನು ತಾನೇ ಸಂಪಾದಿಸುವ ಜವಾಬ್ದಾರಿ ಯಾವ ಪತ್ರಕರ್ತನಿಗೂ ಬರಬಾರದು; ನ್ಯೂಸ್ ಪ್ರಿಂಟ್ ಗಾಗಿ ಹಣ ಹೊಂಚುವ ವಡ್ಡರ್ಸೆ ರಘುರಾಮ ಶೆಟ್ಟಿಯವರು ಅದೇ ಕಾಲಕ್ಕೆ ಅಕ್ಷರ ಕಟ್ಟುವ ಕೆಲಸವನ್ನು ನಿಭಾಯಿಸಿಕೊಳ್ಳುವಲ್ಲಿ ಪಡುವ ಕಷ್ಟ ಅಸಹನೀಯವಾದುದು. ಒಂದುಕಾಲದ ಮಾಧ್ಯಮ ಬದ್ಧತೆ-ಸೂಕ್ಷ್ಮತೆಯನ್ನು ತೆರೆದು ತೋರಿಸುವ ಈ ಪುಸ್ತಕಕ್ಕೆ ದಿನೇಶ್ ಅಮಿನ್ ಮಟ್ಟು ಬರೆದ ವಿಸ್ತಾರವಾದ ಮುನ್ನುಡಿ ಕೇವಲ ‘ಮುಂಗಾರು’ವಿನ ಚರಿತ್ರೆಯಲ್ಲ, ವಡ್ಡರ್ಸೆ ರಘುರಾಮ ಶೆಟ್ಟರ ಚರಿತ್ರೆಯಲ್ಲ, ಈ ದೇಶದ ನಿಷ್ಠಾವಂತ ಪ್ರಾಮಾಣಿಕ ವಸ್ತುನಿಷ್ಠ ಪತ್ರಿಕೋದ್ಯಮದ ಚರಿತ್ರೆಯೂ ಹೌದು.
‘ಬೇರೆಯೇ ಮಾತು’ ಕೃತಿ ಪ್ರಜೋದಯ ಪ್ರಕಾಶನದ Online Storeನಲ್ಲಿ ಲಭ್ಯವಿದ್ದು, ಆಸಕ್ತರು ಪುಸ್ತಕ ಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ಕಿಸಬಹುದು…
https://imojo.in/37sjxpo