ದುಡಿಯಲು ಸಮರ್ಥಳಿರುವ ಪತ್ನಿ ಹೆಚ್ಚಿನ ಜೀವನಾಂಶ ಕೇಳುವಂತಿಲ್ಲ – ಹೈಕೋರ್ಟ್ ತೀರ್ಪು

ಮಂಗಳೂರು (ಬೆಂಗಳೂರು): ದುಡಿಯಲು ಸಮರ್ಥಳಿರುವ ಪತ್ನಿ ಹೆಚ್ಚಿನ ಜೀವನಾಂಶ ಕೋರುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ರಾಜೇಂದ್ರ ಬಾದಮಿಕರ್ ಅವರ ನ್ಯಾಯ ಪೀಠವು ಪ್ರಕರಣವೊಂದರಲ್ಲಿ ಪತ್ನಿಗೆ ಪತಿ ನೀಡಬೇಕಿದ್ದ ಮಾಸಿಕ ಜೀವನಾಂಶದ ಮೊತ್ತವನ್ನು 10 ಸಾವಿರ ರೂಪಾಯಿಯಿಂದ 5 ಸಾವಿರ ರೂಪಾಯಿಗಳಿಗೆ ಕಡಿತಗೊಳಿಸಿ ಸೆಷನ್ಸ್ ಕೋರ್ಟ್ ಆದೇಶ ನೀಡಿದೆ.

ವಿವಾಹಕ್ಕೆ ಮುನ್ನ ಉದ್ಯೋಗದಲ್ಲಿದ್ದ ಪತ್ನಿ ಮತ್ತೆ ಕೆಲಸಕ್ಕೆ ಸೇರದಿರಲು ಸಕಾರಣವಿಲ್ಲ. ಆಲಸ್ಯದಿಂದ ಮನೆಯಲ್ಲಿಯೇ ಕುಳಿತು ಪತಿಯಿಂದಲೇ ಸಂಪೂರ್ಣ ಜೀವನಾಂಶ ಕೇಳುವುದು ಸಮಂಜಸವಲ್ಲ. ತನ್ನ ಜೀವನ ನಿರ್ವಹಣೆಗೆ ಪತ್ನಿ ಪ್ರಯತ್ನಿಸಬೇಕು. ಪೂರಕ ಜೀವನಾಂಶವನ್ನಷ್ಟೇ ಪತಿಯಿಂದ ಪತ್ನಿ ಕೇಳಬಹುದು ಎಂದು ಕೋರ್ಟ್ ಹೇಳಿದೆ. ವಿವಾಹದ ನಂತರ ದಂಪತಿಗಳಿಗೆ ಒಂದು ಮಗು ಜನಿಸಿತ್ತು. ಆದರೆ ಪತ್ನಿಗೆ ಅತ್ತೆ ಮತ್ತು ಅವಿವಾಹಿತ ನಾದಿನಿಯೊಂದಿಗೆ ವಾಸಿಸುವ ಇಚ್ಚೆ ಇರಲಿಲ್ಲ. ಹೀಗಾಗಿ ತನ್ನ ತಾಯಿಯೊಂದಿಗೆ ಪ್ರತ್ಯೇಕ ವಾಸವಾಗಿದ್ದ ಪತ್ನಿ ಜೀವನಾಂಶಕ್ಕಾಗಿ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು. ಮ್ಯಾಜಿಸ್ಟ್ರೇಟ್ ಕೋರ್ಟ್ ಪತ್ನಿಗೆ 10 ಸಾವಿರ ಮಾಸಿಕ ಹಾಗೂ 3 ಲಕ್ಷ ಪರಿಹಾರ ನೀಡುವಂತೆ ಪತಿಗೆ ಆದೇಶ ನೀಡಿತ್ತು. ಇದನ್ನು ಪತಿ ಸೆಷನ್ಸ್ ಕೋರ್ಟಿನಲ್ಲಿ ಪ್ರಶ್ನಿಸಿದ್ದರು. ಸೆಷನ್ಸ್ ಕೋರ್ಟ್ ಜೀವನಾಂಶದ ಮೊತ್ತವನ್ನು 10 ಸಾವಿರದಿಂದ 5 ಕ್ಕೆ ಇಳಿಸಿ, ಪರಿಹಾರದ ಮೊತ್ತವನ್ನು 3 ಲಕ್ಷದಿಂದ ಎರಡು ಲಕ್ಷಕ್ಕೆ ಇಳಿಸಿ ಆದೇಶ ನೀಡಿದೆ.

LEAVE A REPLY

Please enter your comment!
Please enter your name here