ಬಸವರಾಜು ಮೇಗಲಕೇರಿ ರೂಪಿಸಿರುವ ‘ನಮ್ಮ ಅರಸು’ ಕೃತಿ ಕುರಿತು ಅರುಣ್ ಜೋಳದಕೂಡ್ಲಿಗಿ ಅವರ ಟಿಪ್ಪಣಿ

ಮೊದಲಿಗೆ ನನಗೆ ಅರಸು ಕುರಿತು ತಿಳಿಯುವ ಸಂದರ್ಭ ಒದಗಿದ್ದು 2007 ರಲ್ಲಿ. ಆಗ ನಾನು 1973 ರಲ್ಲಿ ಸಮಾಜವಾದಿಗಳು ನಡೆಸಿದ ಸಂಡೂರು ಭೂ ಹೋರಾಟದ ಬಗ್ಗೆ ಸಂಶೋಧನೆ ಮಾಡತೊಡಗಿದೆ. ಕನ್ನಡ ವಿಶ್ವವಿದ್ಯಾಲಯದ ರಾಮಮನೋಹರ ಲೋಹಿಯಾ ಅಧ್ಯಯನ ಪೀಠದ ಆಗಿನ ಸಂಚಾಲಕರಾಗಿದ್ದ ಪ್ರೊ.ರಹಮತ್ ತರೀಕೆರೆ ಅವರು ನನಗೆ ಈ ಜವಾಬ್ದಾರಿಯನ್ನು ವಹಿಸಿದ್ದರು. ಪಿಹೆಚ್.ಡಿ ಮಾಡುವ ಹಂತದಲ್ಲೆ ಯುನಿವರ್ಸಿಟಿಯ ಪುಸ್ತಕ ಬರೆವ ಸದಾವಕಾಶ ಒದಗಿದ್ದಕ್ಕೆ ಉತ್ಸಾಹದಲ್ಲಿ ಈ ಸಂಶೋಧನೆ ಕೈಗೊಂಡೆ. ಈ ಸಂಶೋಧನೆಗಾಗಿ ಮಾಡಿದ ರೈತರ ಸಂದರ್ಶನಗಳಲ್ಲಿ ಮೊದಲು ಅರಸು ಅವರ ಬಗ್ಗೆ ತಿಳಿದೆ. ಅಂತೆಯೇ ಈ ಸಂಶೋಧನೆಗಾಗಿ ವಿಧಾನಸೌಧದಲ್ಲಿ ಅಸೆಂಬ್ಲಿ ಡಿಬೇಟಿನ ಸಂಪುಟಗಳನ್ನು ಅಧ್ಯಯನ ಮಾಡಬೇಕಾಯಿತು.
ಹದಿನೈದು ದಿನ ವಿಧಾನಸೌಧದಲ್ಲಿ ಕುಳಿತು ಅಧ್ಯಯನ ಮಾಡುವಾಗ ದೇವರಾಜ ಅರಸು ಅವರು ಅಸೆಂಬ್ಲಿಯಲ್ಲಿ ಆಡುತ್ತಿದ್ದ ಮಾತುಗಳು ಕಣ್ಣಿಗೆ ಕಟ್ಟಿದಂತೆ ಚಿತ್ರಗಳಾಗಿ ಬರತೊಡಗಿದ್ದವು. ಯಾವುದೇ ವಿಷಯವನ್ನು ಸಾಮಾಜಿಕ ನ್ಯಾಯದ ನೆಲೆಯಲ್ಲಿ ವಿಶ್ಲೇಷಿಸುವುದು, ಆಳವಾದ ಅಧ್ಯಯನದ ನೆಲೆಯಲ್ಲಿ ಸಮಸ್ಯೆಯನ್ನು ವಿವರಿಸುವುದು, ಬೇರೆಯವರ ಪ್ರಶ್ನೆಗಳನ್ನು ಸಮಚಿತ್ತದಿಂದ ಕೇಳಿಸಿಕೊಳ್ಳುವುದು, ಅಷ್ಟೇ ಸಾವಧಾನದಿಂದ ಪ್ರಶ್ನೆಗಳಿಗೆ ಪ್ರಬುದ್ಧವಾಗಿ ಉತ್ತರಿಸುವುದು. ಈ ಎಲ್ಲವನ್ನೂ ಓದುತ್ತಾ ಹೋದಂತೆ ನನ್ನೊಳಗೆ ಅರಸು ಚಿತ್ರಗಳು ಮೂಡತೊಡಗಿದವು. ಆದರೆ ಅರಸು ಅವಧಿಯಲ್ಲೆ ನಡೆದ ‘ಸಂಡೂರು ಭೂ ಹೋರಾಟಕ್ಕೆ’ ಅರಸು ಸ್ಪಂದಿಸದಾದರು. ಕಾರಣ ಸಂಡೂರಿನ ಎಂ.ವೈ ಘೋರ್ಪಡೆಯವರು ಸಂಪುಟದಲ್ಲಿ ಪ್ರಭಾವಿ ಸಚಿವರಾಗಿದ್ದರು. ಅಂತೆಯೇ ಇಂದಿರಾಗಾಂಧಿಯವರ ಜತೆ ಅತ್ಯುತ್ತಮ ಒಡನಾಟವಿತ್ತು. ಈ ಸಂದರ್ಭದಲ್ಲಿ ಅರಸು ಅವರಿಗೆ ಘೋರ್ಪಡೆ ವಿರುದ್ಧ ನಿಲುವು ತಾಳುವುದು, ತಮ್ಮದೆ ಪಕ್ಷದ ವಿರುದ್ಧ ನಡೆದಂತಾಗುತ್ತಿತ್ತು. ಹಾಗಾಗಿ ಅರಸು ಮೌನ ತಾಳಿದರು. ಆ ಸಂದರ್ಭಕ್ಕೆ ಸಂಡೂರಿನ ರೈತರ ಕಣ್ಣಲ್ಲಿ ವಿಲನ್ ಆದ ಅರಸು, ಭೂಸುಧಾರಣ ಕಾಯ್ದೆಯಿಂದ ಮತ್ತೆ ಅವರ ಗೌರವಕ್ಕೆ ಪಾತ್ರರಾದರು. ಕಾರಣ ಘೋರ್ಪಡೆ ವಂಶಸ್ಥರ ಸುಮಾರು 15 ಸಾವಿರ ಎಕರೆ ಭೂಮಿ ರೈತರಿಗೆ ದಕ್ಕಿತು. ನಾನು ಈ ಕೃತಿಯಲ್ಲಿ ಅರಸು ಅವರ ಮೌನದ ಬಿಕ್ಕಟ್ಟಿನ ಬಗ್ಗೆ ವಿಮರ್ಶಿಸಿ ಬರೆದೆ. ಈ ಕೃತಿ 2008 ರಲ್ಲಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ಪ್ರಕಟವಾಯಿತು. ಆಗ ನನ್ನೊಳಗೆ ಅರಸು ಕುರಿತು ಕೆಲವು ಬ್ಲಾಕ್ ಅಂಡ್ ವೈಟ್ ಚಿತ್ರಗಳು ಮೂಡಿದ್ದವು.

 

ಎರಡನೆಯದಾಗಿ, 2019 ರಲ್ಲಿ ಕನ್ನಡ ವಿಶ್ವವಿದ್ಯಾಲಯ ದೇವರಾಜ ಅರಸು ಬಗ್ಗೆ ಒಂದು ಸೆಮಿನಾರ್ ಆಯೋಜಿಸಿತ್ತು. ಅದರಲ್ಲಿ ಅರಸು ಕುರಿತಂತೆ ಮಾತನಾಡಲು ನನಗೆ ಅವಕಾಶವಿತ್ತು. ಈ ಮಾತಿಗಾಗಿ ನಾನು ಗ್ರಂಥಾಲಯದಲ್ಲಿ ಅರಸು ಕುರಿತು ಲಭ್ಯವಿದ್ದ ಪುಸ್ತಕಗಳನ್ನೆಲ್ಲಾ ಗುಡ್ಡೆಹಾಕಿಕೊಂಡು ಓದಿದೆ. ರಾಷ್ಟ್ರಕವಿ ಕುವೆಂಪು, ಬೇಂದ್ರೆ ಅರಸು ಕುರಿತಂತೆ ಮಾತನಾಡಿದ್ದು ಅಚ್ಚರಿ ಹುಟ್ಟಿಸಿತು. ಅಂದು ನಾನು ಮಾತನಾಡುತ್ತಾ, ಅರಸು ಕಾಲದ ಕೆಲವು ಸುಧಾರಣೆಗಳನ್ನು ನೋಡಿದರೆ, ಟಿಪ್ಪುಸುಲ್ತಾನ್ ತರಬಯಸಿದ ಕೆಲವು ಯೋಜನೆಗಳನ್ನು ಅರಸು ತಂದರು, ಟಿಪ್ಪು ಕನಸುಗಳನ್ನು ಅರಸು ನನಸು ಮಾಡಿದರು ಎಂದು ವಿಶ್ಲೇಷಿಸಿದೆ. ಆಗ ಅರಸು ಕುರಿತಂತೆ ಇನ್ನಷ್ಟು ಆಳವಾದ ವಿಸ್ತಾರವಾದ ಪುಸ್ತಕವೊಂದರ ಅಗತ್ಯವಿದೆ ಅನ್ನಿಸಿತು.

ಕರ್ನಾಟಕದ ರಾಜಕಾರಣದಲ್ಲಿ ಚಾರಿತ್ರಿಕ ಬದಲಾವಣೆಯ ಬೀಜ ಬಿತ್ತಿದ್ದು ನಿಸ್ಸಂಶಯವಾಗಿ ದೇವರಾಜ ಅರಸು. ಅರಸು ಕುರಿತಂತೆ ಸಾಕಷ್ಟು ಚರ್ಚೆ ಸಂವಾದಗಳು, ಬರಹಗಳು, ಅರಸು ಶತಮಾನೋತ್ಸವ ಸಂದರ್ಭದಲ್ಲಿ ಪ್ರಕಟವಾದ ಹಲವು ಪುಸ್ತಕಗಳಿವೆ. ಇಷ್ಟಾಗಿಯೂ ನಿಜಾರ್ಥದಲ್ಲಿ ಅರಸು ಅವರನ್ನು ಎಲ್ಲಾ ಮಗ್ಗಲುಗಳಿಂದ ಕಟ್ಟಿಕೊಡುವ ಪುಸ್ತಕವೊಂದರ ಅಗತ್ಯವಿತ್ತು. ಪಲ್ಲವ ಪ್ರಕಾಶನ ಪ್ರಕಟಿಸಿರುವ, ಬಸವರಾಜು ಮೇಗಲಕೇರಿ ವಾರ್ತಾಭಾರತಿಗೆ ಸರಣಿ ರೂಪದಲ್ಲಿ ಪ್ರಕಟಿಸಿದ ಸಂದರ್ಶನಗಳ ಸಂಪಾದಿತ ಕೃತಿ ‘ನಮ್ಮ ಅರಸು’ ಅಂತಹದ್ದೊಂದು ಸಾರ್ಥಕ ಪ್ರಯತ್ನ. ಒನ್ ಬೈ ಫೋರ್ ಸೈಜಿನ 550 ಪುಟಗಳ ಈ ಬೃಹತ್ ಪುಸ್ತಕವನ್ನು ಓದಿದಾಗ ನಮ್ಮೊಳಗೆ ಅರಸು ಅವರ ಅಂತಃಕರಣದ ಎಳೆಗಳು ಆಪ್ತವಾಗಿ ತಾಕುತ್ತವೆ, ಎಷ್ಟೋ ಕಡೆಗಳಲ್ಲಿ ಹೃದಯ ಭಾರವಾಗುತ್ತದೆ, ದುಃಖ ಉಮ್ಮಳಿಸಿ ಕಣ್ಣುಗಳು ಒದ್ದೆಯಾಗುತ್ತವೆ. ಈ ಕೃತಿಯಲ್ಲಿ ಹಾದು ಹೋಗಿರುವ ಅರಸು ವ್ಯಕ್ತಿತ್ವದ ಪ್ರಮುಖ ಎಳೆಗಳನ್ನು ಗುರುತಿಸುವ ಪ್ರಯತ್ನ ಇಲ್ಲಿದೆ.

ಅರಸು ಅವರ ಬಾಲ್ಯದ ಹಿನ್ನೆಲೆಯನ್ನು ಹಲವರು ಹಂಚಿಕೊಂಡಿದ್ದಾರೆ. ಅದರಲ್ಲಿ ಕನ್ನಡದ ಪ್ರಸಿದ್ಧ ಕಾದಂಬರಿಕಾರರಾದ ಅರಸು ಅವರ ಸಂಬಂಧಿಕರಾದ ಚದುರಂಗರ ಮಗ ವಿಕ್ರಂರಾಜೇ ಅರಸ್ ಅವರು “ಕಲ್ಲಹಳ್ಳಿ ಒಂದು ಕಾಲಕ್ಕೆ ಜೈನರ ನಾಡು. ಈಗಲೂ ಕಲ್ಲಹಳ್ಳಿಯಲ್ಲಿ ಎಂಟನೆ ತೀರ್ಥಂಕರ ಚಂದ್ರನಾಥ ಬಸದಿ ಇದೆ. ನಮ್ಮದು ಜೈನ ಕ್ಷತ್ರಿಯ ಪರಂಪರೆ. ನಾವು ಖ್ಯಾತ ಕವಿ ಮಂಗರಸನ ವಂಶಕ್ಕೆ ಸೇರಿದವರು” ಎಂದು ಹೇಳುತ್ತಾರೆ. ಅರಸು ಅವರ ಹುಟ್ಟಿದೂರು ಬೆಟ್ಟದತುಂಗ. ಅವರ ತಂದೆಯ ಹೆಸರು ದೇವರಾಜ ಅರಸು, ತಾಯಿ ದೊಡ್ಡಮ್ಮಣ್ಣಿ. ದೊಡ್ಡಬಳ್ಳಾಪುರದವರಾದ ಟಿ.ಸಿದ್ಧಲಿಂಗಯ್ಯನವರು ಮೈಸೂರು ಕಾಂಗ್ರೇಸ್ ಅಧ್ಯಕ್ಷರಾಗಿದ್ದರು. ಅವರು 1947-48 ರಲ್ಲಿ ದೇವರಾಜ ಅರಸು ಅವರನ್ನು ಕಲ್ಲಳ್ಳಿಗೆ ಹೋಗಿ ಕಾಂಗ್ರೇಸ್ ಪಕ್ಷಕ್ಕೆ ಕರೆತರುತ್ತಾರೆ. ಆಗ ಬಿಎಸ್ಸಿ ಮುಗಿಸಿ ಕೃಷಿ ಮಾಡುತ್ತಿರುವ ಅರಸರ ರಾಜಕೀಯ ಪ್ರವೇಶವಾಗುತ್ತದೆ. ಅಲ್ಲಿಂದ ಅರಸು ಕಾಲ ಆರಂಭವಾಗುತ್ತದೆ.

ಅರಸು ಕರ್ನಾಟಕ ರಾಜಕಾರಣದ ದಿಕ್ಕನ್ನು ಬದಲಿಸಿದ ಸಂಗತಿಯೆಂದರೆ, ಅಧಿಕಾರ ರಹಿತ ಜನರ ಮನೆ ಬಾಗಿಲಿಗೆ ಅಧಿಕಾರವನ್ನು ಒಯ್ದು ಹಂಚಿದ್ದು. 1972ರ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ರಹಿತ ಅಂಚಿನ 70 ಜನ ಹೊಸಬರಿಗೆ ಸೀಟ್ ಕೊಟ್ಟರು. ಕುರುಬರ ಡಿ.ಕೆ.ನಾಯ್ಕರ್, ದೇವಾಡಿಗರ ವೀರಪ್ಪ ಮೊಯ್ಲಿ, ಕೋಲಿ ಸಮಾಜದ ಘಾಳಪ್ಪ, ಬಂಜಾರ ಸಮುದಾಯದ ರಾಠೋಡ್, ಎಡಗೈ ದಲಿತರ ಆರ್.ಡಿ ಕಿತ್ತೂರ, ಬೆಸ್ತರ ಮನೋರಮಾ ಭಾರದ್ವಾಜ್, ಕ್ರಿಶ್ಚಿಯನ್ನರ ಇ.ಇ.ವಾಜ್, ಒಕ್ಕಲಿಗರ ಹೆಚ್.ಎನ್.ನಂಜೇಗೌಡ, ಬಂಟರ ಸುಬ್ಬಯ್ಯ ಶೆಟ್ಟಿ, ಮುಸ್ಲಿಂ ಅಜೀಜ್ ಶೇಟ್, ಮಹಮದ್ ಅಲಿ, ನಾಯ್ಡು ಕಮುನಿಟಿಯ ರಾಮುಲು- ಹೀಗೆ ಮೊದಲ ಬಾರಿಗೆ ಚುನಾವಣೆ ಎದುರಿಸಿ ಗೆದ್ದು ಬಂದರು.

1978ರ ಚುನಾವಣೆಯಲ್ಲಿ 40 ರಷ್ಟು ಅಂಚಿನ ಸಮುದಾಯದ ಹೊಸ ನಾಯಕರು ಅರಸರ ಕಾರಣಕ್ಕೆ ವಿಧಾನಸಭೆಗೆ ಆಯ್ಕೆಯಾದರು. ಕೋಲಾರದ ವಡ್ಡರ ಸಮುದಾಯದ ವೆಂಕಟೇಶಪ್ಪ ತಾಲೂಕು ಬೋರ್ಡ್ ಮೆಂಬರ್ ಆಗಿದ್ದವರು ಶಾಸಕರಾಗುತ್ತಾರೆ, ಬೆಳಗಾವಿಯಲ್ಲಿ 1970 ರಲ್ಲಿ ದಲಿತ ನಾಯಕ ಬಿ.ಶಂಕರಾನಂದರನ್ನು ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರನ್ನಾಗಿ ನೇಮಿಸಿ, ಲಿಂಗಾಯತ ಎಸ್.ಬಿ.ಸಿದ್ನಾಳ್ ಅವರನ್ನು ಕಾರ್ಯದರ್ಶಿ ಮಾಡುತ್ತಾರೆ. ಹೀಗೆ ಹೆಚ್.ವಿಶ್ವನಾಥ, ವೀರಣ್ಣ ಮತ್ತೀಕಟ್ಟಿ, ಬಿ.ಎ.ಮೋಹಿದ್ದೀನ್, ರಮೇಶ್ ಕುಮಾರ್ ಮುಂತಾದವರು ತಮ್ಮ ರಾಜಕೀಯ ಜೀವನ ಆರಂಭಿಸುತ್ತಾರೆ. 1970 ರಲ್ಲಿ ಮೂರು ಉಪಚುನಾವಣೆಗಳು ನಡೆದವು. ಅದರಲ್ಲಿ ಶಿವಾಜಿನಗರದ ಕೋಲ್ಸ್ ಪಾರ್ಕಿನಲ್ಲಿ ಕಡಲೆಕಾಯಿ ಮಾರಿ ಜೀವನ ಸಾಗಿಸುತ್ತಿದ್ದ ಹಮೀದ್ ಷಾ ಎನ್ನುವವರನ್ನು ನಿಲ್ಲಿಸುತ್ತಾರೆ. ಇದನ್ನು ನೋಡಿ ಪ್ರತಿಪಕ್ಷದವರು ನಗುತ್ತಾರೆ. ಆದರೆ ಷಾ 10 ಸಾವಿರ ಲೀಡಲ್ಲಿ ಗೆಲ್ಲುತ್ತಾರೆ. 1971 ರ ಲೋಕಸಭಾ ಚುನಾವಣೆಯಲ್ಲೂ ಹಾಗೆಯೆ, ತುಮಕೂರಲ್ಲಿ ಕುಂಚುಟಿಗರ ಮಲ್ಲಣ್ಣ, ಬಾಗಲಕೋಟೆ-ಬಿಜಾಪುರ ಕ್ಷೇತ್ರದಿಂದ ಮೀನುಗಾರ ಸಮುದಾಯದ ಬಿ.ಇ.ಚೌದರಿ ಗೆಲ್ಲುತ್ತಾರೆ.

ಈ ಎರಡು ಚುನಾವಣೆಗಳು ಕರ್ನಾಟಕದ ರಾಜಕಾರಣದಲ್ಲಿ ಅಧಿಕಾರ ರಹಿತ ಸಮುದಾಯಗಳು ಅಧಿಕಾರಕ್ಕೆ ಪ್ರವೇಶಿಸಿದ ಚಾರಿತ್ರಿಕ ಘಟ್ಟಗಳು. ಇದನ್ನೆಲ್ಲಾ ಸಾಧ್ಯವಾಗಿಸಿದ್ದು ಅರಸು. ಅರಸು ಆಗ ಆರಿಸಿದ ಬಂಗಾರಪ್ಪ, ವೀರಪ್ಪ ಮೊಯ್ಲಿ, ಧರಂಸಿಂಗ್, ಮತ್ತು ಸಿದ್ಧರಾಮಯ್ಯ ರಾಜ್ಯದ ಮುಖ್ಯಮಂತ್ರಿಗಳಾದರು. ಈ ಸಮೀಕರಣ ಅರಸು ಅವರ ಮುನ್ನೋಟದ ದೃಷ್ಟಿಕೋನದ ಫಲ.

ಪತ್ರಕರ್ತರಾಗಿದ್ದ ಡಿ.ವಿ ರಾಜಶೇಖರ್ ‘ಅರಸು ಲೋಹಿಯಾವಾದದ ಒಂದು ಎಳೆ, ಕಮ್ಯುನಿಸಮ್‍ನ ಒಂದು ಎಳೆಯನ್ನು ಎತ್ತಿಕೊಂಡು, ತಮ್ಮದೇ ಆದ ಒಂದು ಹೊಸ ವರ್ಗವೊಂದನ್ನು ಹುಟ್ಟುಹಾಕಲು ಪ್ರಯತ್ನಿಸಿದ್ದರು. ಇದರಲ್ಲಿ ಸೋಷಿಯಲ್ ಇಂಜಿನಿಯರಿಂಗ್ ಕೂಡ ಇತ್ತು. ಇದನ್ನು ಕರ್ನಾಟಕದ ರಾಜಕಾರಣದಲ್ಲಿ ಜಾರಿಗೆ ತಂದರು. ಅಲ್ಲಿಯವರೆಗೆ ಜಾತಿಯ ಆಧಾರದ ಮೇಲೆ ನಡೆಯುತ್ತಿದ್ದ ರಾಜಕಾರಣವನ್ನು ಪಕ್ಕಕ್ಕಿಟ್ಟು, ಸಣ್ಣಪುಟ್ಟ ಜಾತಿಯವರನ್ನೆಲ್ಲಾ ಒಂದುಗೂಡಿಸಿ, ಅದಕ್ಕೆ ಹಿಂದುಳಿದ ವರ್ಗ, ಬ್ಯಾಕ್ ವರ್ಡ್ ಕ್ಲಾಸ್ ಎಂದು ಹೆಸರಿಸಿ, ಆ ವರ್ಗದ ಶಾಸಕರ ಸಂಖ್ಯೆಯನ್ನು ಹೆಚ್ಚಿಸಿ, ಆ ವರ್ಗಕ್ಕೆ ಶಕ್ತಿ ತುಂಬಿ, ಸದೃಢಗೊಳಿಸಿ, ಆ ಮೂಲಕ ಮೇಲ್ಜಾತಿಗಳನ್ನು ನಿಯಂತ್ರಣದಲ್ಲಿಟ್ಟು ರಾಜಕಾರಣ ಮಾಡುವುದು ಅರಸರ ದೂರದೃಷ್ಟಿಯಾಗಿತ್ತು ಎಂದು ಗುರುತಿಸುತ್ತಾರೆ.

ಎಸ್.ಸಿದ್ನಾಳ್ ಉಲ್ಲೇಖಿಸುವ ಒಂದು ಘಟನೆ: `ಒಮ್ಮೆ ನಾನು ಅರಸು ಕಾಣಲು ಬೆಂಗಳೂರಿಗೆ ಹೋಗಿದ್ದೆ, ಅವರ ಮನೆ ಬಾಲಬ್ರೂಯಿಯ ಹೊರಗೆ ನಿಂತಿದ್ದೆ. ಅಲ್ಲಿಗೆ ಒಬ್ಬ ಬಡ ವಯಸ್ಸಾದ ಮುದುಕನೊಬ್ಬ ಬಂದು ಅರಸು ಅವರನ್ನು ಭೇಟಿಯಾಗಬೇಕೆಂದು ಗೇಟಿನಲ್ಲಿದ್ದ ಪೋಲೀಸರಿಗೆ ಹೇಳಿ, ಹೊರಗೆ ಕಾಯುತ್ತಾ ಕುಳಿತಿದ್ದ. ಆತನನ್ನು ಗಮನಿಸಿದರೆ ಆತ ಕಣ್ಣಿಲ್ಲದ ಕುರುಡ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿತ್ತು. ಮನೆಯೊಳಗಿನಿಂದ ಸಿದ್ಧರಾಗಿ ಅರಸು ಹೊರಬಂದರು. ಇನ್ನೇನು ವಿಧಾನಸೌಧಕ್ಕೆ ಹೊರಡಬೇಕು, ಆಗ ಗೇಟಿನ ಬಳಿ ನಿಂತ ಆ ವ್ಯಕ್ತಿಯನ್ನು ಗಮನಿಸಿದರು. ಅಷ್ಟೇ ಅಲ್ಲ, ಅವರೆ ಸ್ವತಃ ಆತನ ಬಳಿ ಹೋಗಿ, `ಅಜ್ಜಪ್ಪ ಏನಾಗಬೇಕು?’ ಎಂದು ಕೇಳಿದರು. ಆ ಮುದುಕನಿಗೆ ಇವರೆ ಅರಸು ಅಂತ ಗೊತ್ತಿರಲಿಲ್ಲ. `ಏನಪ್ಪಾ ಇಲ್ಲಿ ಯಾರೋ ದೊರೆ ಅರಸು ಅಂತ ಇದ್ದಾರಂತಲ್ಲಾ, ನನ್ನನ್ನು ಅವರ ಬಳಿ ಕರೆದುಕೊಂಡು ಹೋಗಪ್ಪ’ ಎಂದರು. ಅರಸು `ಅವರನ್ನು ಯಾಕೆ ನೋಡಬೇಕು ಅಜ್ಜ’ ಎನ್ನುತ್ತಾರೆ. ಈ ವರ್ಷ ಮಳೆ ಆಗಲಿಲ್ಲ, ಮೊಮ್ಮಗಳ ಮದುವೆ ಇದೆ. ಅವರ ಅಪ್ಪ ತೀರಿಕೊಂಡ. ನಾನು ಮುದುಕ. ಈಗ ದುಡಿಯಲು ಆಗುತ್ತಿಲ್ಲ. ಅದಕ್ಕೆ ದೊರೆ ಹತ್ತಿರ ಇದೆಲ್ಲವನ್ನೂ ಹೇಳಿಕೊಂಡರೆ, ಅವರು ಸ್ವಲ್ಪ ಸಹಾಯ ಮಾಡಿದರೆ, ಆಕೆಯ ಮದುವೆ ಮಾಡಿ ನಿಶ್ಚಿಂತೆಯಿಂದ ದೇವರ ಪಾದ ಸೇರಕೋಬಹುದು’ ಅಂದರು. ಆ ಬಡ ಮುದುಕನ ಮಾತು ಕೇಳಿದ ಅರಸು `ನಾನೇ ಅರಸು ಅಜ್ಜಪ್ಪ’ ಎಂದು ಕಣ್ಣಲ್ಲಿ ನೀರು ತುಂಬಿಕೊಂಡರು. ಇದನ್ನು ನೋಡಿ ನನಗೂ ಕಣ್ಣೀರು ಬಂತು. ಸಾವರಿಸಿಕೊಂಡು `ಸರ್ ನೀವೇ ಹೀಗೆ ಅತ್ತರೆ ಹೇಗೆ’ ಅಂದೆ. `ಸಿದ್ನಾಳ್, ಈ ನಮ್ಮ ಜನರನ್ನು ನಾವು ಯಾವಾಗ ಕಷ್ಟದಿಂದ ಮುಕ್ತಿಗೊಳಿಸೋದು?’ ಎಂದರು. ಅದು ಅಂತಿಂಥ ಮಾತಲ್ಲ. ಕರುಳಿನಿಂದ ಬಂದ ಮಾತು. ಅಲ್ಲಿ ಯಾರೂ ಮಾಧ್ಯಮದವರಿರಲಿಲ್ಲ. ಪ್ರಚಾರಕ್ಕೆ ಕಣ್ಣೀರು ಹಾಕಿದ್ದೂ ಅಲ್ಲ. ಆ ತಕ್ಷಣವೇ ಜೇಬಿಗೆ ಕೈಹಾಕಿ, ಸಿಕ್ಕಷ್ಟು ಕೈಗಿಟ್ಟು, `ಹೋಗಿ ಬನ್ನಿ’ ಎಂದರು. ಅಲ್ಲಿದ್ದ ಪೋಲೀಸರಿಗೆ `ಇವರು ಯಾವ ಊರು ಎಂದು ಕೇಳಿ, ಬಸ್‍ಗೆ ಕೂರಿಸಿ ಬನ್ನಿ’ ಎಂದರೆಂದು ಹೇಳುತ್ತಾ, ಯಾರಿದ್ದಾರೆ ಇಂಥವರು, ಈಗ? ಎನ್ನುತ್ತಾರೆ. ಇಡೀ ಕೃತಿಯುದ್ಧಕ್ಕೂ ಇಂತಹದ್ದೇ ಘಟನೆಗಳ ಸರಣಿ ಸಿಗುತ್ತವೆ. ಈ ಎಲ್ಲಾ ಘಟನಾವಳಿಗಳು ಅರಸು ಒಬ್ಬ ಅಂತಃಕರಣದ ವ್ಯಕ್ತಿ ಹೇಗೆ ಎನ್ನುವುದನ್ನು ಮನವರಿಕೆ ಮಾಡುತ್ತವೆ.

ಗರುಡನಗಿರಿ ನಾಗರಾಜ ಅವರು ಹೇಳುವ ಒಂದು ಘಟನೆ: `ಬಿಜಾಪುರದ ಗೆಸ್ಟ್ ಹೌಸಿನಲ್ಲಿ ನಮ್ಮ ವಾಸ್ತವ್ಯ. ಒಂದು ದಿನ ಬೆಳಗ್ಗೆ ಐದು ಗಂಟೆಗೆ ಎದ್ದು ಹೊರಗೆ ಒಂದು ಸಿಗರೇಟ್ ಸೇದುತ್ತಾ ನಿಂತಿದ್ದೆ. ಅಲ್ಲಿಗೆ ಚಡ್ಡಿ, ಜುಬ್ಬ, ತಲೆಗೆ ಟರ್ಕಿ ಟವಲ್ ಸುತ್ತಿಕೊಂಡ ವ್ಯಕ್ತಿ ಬಂದರು. ಹತ್ತಿರ ಬಂದಾಗ ಗೊತ್ತಾಯಿತು ಅವರು ಮುಖ್ಯಮಂತ್ರಿ ಅರಸು ಎಂದು. `ಬನ್ನಿ, ಇಲ್ಲೇ ಹೋಗಿ ಬರೋಣ ಎಂದು ಅವರೆ ಕಾರನ್ನು ಡ್ರೈವ್ ಮಾಡಿಕೊಂಡು ಕುಷ್ಠರೋಗಿಗಳ ಪುನರ್ ವಸತಿ ಕೇಂದ್ರಕ್ಕೆ ಕರೆದುಕೊಂಡು ಹೋದರು. ಅವರಿಗೆ ಇವರು ಯಾರು ಎನ್ನುವುದು ಗೊತ್ತಿಲ್ಲ. ಇವರೂ ಹೇಳಿಕೊಳ್ಳಲಿಲ್ಲ. ಅವರನ್ನೆಲ್ಲ ಕರೆದು, ಊಟ ತಿಂಡಿ ವ್ಯವಸ್ಥೆ ಹೇಗಿದೆ ಎಂದು ಕೇಳಿದರು. ಅಲ್ಲಿದ್ದ ಒಬ್ಬರು, `ಒಬ್ಬರಿಗೆ ತಿಂಗಳಿಗೆ 20 ರಿಂದ 25 ರೂಪಾಯಿ ಕೊಡ್ತಾರೆ, ಏನೇನೂ ಸಾಲದು, ಯಾವ ಸೌಕರ್ಯವೂ ಇಲ್ಲ’ ಎಂದರು. ಅಷ್ಟೇ, ಎಲ್ಲವನ್ನೂ ಕೇಳಿಸಿಕೊಂಡ ಅರಸು ಸೀದಾ ಗೆಸ್ಟ್ ಹೌಸಿಗೆ ಬಂದವರೆ ಅಧಿಕಾರಿಗಳನ್ನು ಕರೆದು, `ಊಟ ತಿಂಡಿಗೆ ಒಬ್ಬ ಕುಷ್ಟ ರೋಗಿಗೆ ಇವತ್ತಿನಿಂದ 50 ರೂಪಾಯಿ ಕೊಡಿ’ ಎಂದರು. ಅಧಿಕಾರಿ `ಕಾನೂನಿನ ಪ್ರಕಾರ ಅದು..’ ಅಂದ. `ಬಾಯಿ ಮುಚ್ಚು, ನಾನು ಹೇಳಿದ್ದು ಮಾಡು’ ಎಂದರು. ಇಂತಹದ್ದೆ ನೂರಾರು ಘಟನೆಗಳು ಅರಸು ಅವರ ಮಾನವೀಯತೆಯನ್ನು ಎತ್ತಿ ತೋರುತ್ತವೆ. ಹೀಗಾಗಿ ಈ ಕೃತಿಯನ್ನು ಓದುತ್ತಾ ಹೋದಂತೆ ಸಾಕ್ಷ್ಯಚಿತ್ರವೊಂದು ಕಣ್ಮುಂದೆ ಬಿಚ್ಚಿಕೊಂಡಂತಹ ಅನುಭವವಾಗುತ್ತದೆ.

ಎನ್.ಎ.ಎಲ್ಲಪ್ಪರೆಡ್ಡಿ ಅವರ ಅನುಭವಗಳು ಅರಸು ಹೇಗೆ ಒಬ್ಬ ಪರಿಸರದ ಬಗ್ಗೆ ಅನನ್ಯ ಕಾಳಜಿಯ ಮನುಷ್ಯರಾಗಿದ್ದರು ಎಂದು ವಿವರಿಸುತ್ತವೆ. ಅರಸು ಅವರು `ಟ್ರೀ ಪ್ರೊಟೆಕ್ಷನ್ ಆಕ್ಟ್’ ತರುವುದಕ್ಕೆ ಸಮ್ಮತಿಸಿದ್ದರು. ಯಾವುದೇ ಮರ ಕಡಿಯಲು ಸರಕಾರದ ಅನುಮತಿ ಪಡೆಯುವ ಮತ್ತು ಒಂದು ಮರ ಕಡಿದರೆ, ನಾಲ್ಕು ಮರ ನೆಡುವ ಯೋಜನೆ ನಿಜಕ್ಕೂ ದೂರದೃಷ್ಟಿಯದು. ಆಗ ಈ ಯೋಜನೆ ಕುರಿತಂತೆ ಬಿಬಿಸಿಯಲ್ಲಿ ಚರ್ಚೆಯಾಗಿತ್ತು. ಭೂಮಿಯ ತಾಪಮಾನ ಏರುತ್ತಿರುವ ಬಗ್ಗೆ ಅರಸು ಅವರ ಗಮನಸೆಳೆದಾಗ ಸರಕಾರಿ ಜಮೀನನ್ನು ಬೇರೆಯವರು ಕಬಳಿಸದಂತೆ `ಗ್ರೀನ್ ಬೆಲ್ಟ್’ ಮಾಡಿ ಅರಣ್ಯ ಇಲಾಖೆಯ ವ್ಯಾಪ್ತಿಗೆ ತಂದಿದ್ದರು. ನಂತರದಲ್ಲಿ ಬಂದ ಸರಕಾರದ ರಾಜಕಾರಣಿಗಳು ಈ ಎಲ್ಲಾ ಗ್ರೀನ್ ಬೆಲ್ಟ್ ಗಳನ್ನು ಡಿನೋಟಿಫೈ ಮಾಡಿ ಕಬಳಿಸಿದರು ಎನ್ನುತ್ತಾರೆ.

ಅರಸು ದಲಿತ ಪಕ್ಷಪಾತಿಯಾಗಿದ್ದರು. ಹುಣಸೂರಿನ ಡಾ.ಡಿ.ತಿಮ್ಮಯ್ಯ ಅವರಿಗೆ ಅರಸು ನೇರ ವೈದ್ಯಾಧಿಕಾರಿ ಹುದ್ದೆ ಕೊಡಿಸಿದಾಗ ವಿಧಾನಸಭೆಯಲ್ಲಿ ಈ ವಿಷಯ ಅಧಿಕಾರ ದುರುಪಯೋಗ ಎನ್ನುವ ಚರ್ಚೆಗೆ ಬರುತ್ತದೆ. ಆಗ ಅರಸು `ನೋಡಿ ನನ್ನ ಮಕ್ಕಳಿಗೆ ಮೊಮ್ಮಕ್ಕಳಿಗೆ ಕೆಲಸ ಕೊಟ್ಟಿಲ್ಲ, ಒಬ್ಬ ಪರಿಶಿಷ್ಟಜಾತಿಯಲ್ಲಿ ಹುಟ್ಟಿ, ಕಷ್ಟಪಟ್ಟು ಓದಿ ಉತ್ತಮ ಅಂಕ ಪಡೆದು ಪಾಸಾದ ಪ್ರತಿಭಾವಂತನಿಗೆ, ತಂದೆ ಇಲ್ಲದ ಹುಡುಗನಿಗೆ ಕೊಟ್ಟಿದ್ದೇನೆ. ನನ್ನ ತಾಲೂಕಿನ ಮೊದಲ ಎಂ.ಬಿ.ಬಿ.ಎಸ್ ಪದವಿ ಪಡೆದ ದಲಿತ ಹುಡುಗ ಎನ್ನುವ ಕಾರಣಕ್ಕಾಗಿ ಕೊಟ್ಟಿದ್ದೇನೆ. ನನ್ನ ವಿವೇಚನೆಗೆ ಸರಿ ಅನ್ನಿಸಿದ್ದನ್ನು ಮಾಡಿದ್ದೇನೆ. ತಪ್ಪಾಗಿದ್ದಲ್ಲಿ ಹೇಳಿ. ಅಧಿಕಾರ ದುರುಪಯೋಗ ಮಾಡಿಲ್ಲ’ ಎಂದು ಸಮರ್ಥಿಸಿಕೊಳ್ಳುತ್ತಾರೆ.

ಮಂಡ್ಯದ ನಗರಸಭೆಗೆ ದಲಿತ ಎಸ್.ಹೊನ್ನಯ್ಯ ಎನ್ನುವವರನ್ನು ಅಧ್ಯಕ್ಷರನ್ನಾಗಿ ಮಾಡುತ್ತಾರೆ. ಈಚೆಗೆ ನಮ್ಮನ್ನು ಅಗಲಿದ ಬಿ.ನಾರಾಯಣರಾವ್ ಅವರು ಬೀದರಿನ ಟೋಕ್ರೆಕೋಳಿ ಬುಡಕಟ್ಟು ಸಮುದಾಯದವರು. ಅವರ ಜತೆಗಿನ ಅರಸು ನಡವಳಿಕೆ ಕಣ್ಣನ್ನು ಒದ್ದೆ ಮಾಡುತ್ತದೆ. ಕಾರ್ಯಕ್ರಮಕ್ಕೆಂದು ಬೀದರಿಗೆ ಹೋದವರು ಅವರ ಮನೆಗೆ ಹೋಗುತ್ತಾರೆ. ತಾಯಿ ಚೆಂಬಿನಲ್ಲಿ ಮಜ್ಜಿಗೆಯನ್ನು ಲೋಟಕ್ಕೆ ಹಾಕುವಾಗ `ಚೆಂಬನ್ನೆ ಕೊಡುತಾಯಿ, ನಿನ್ನ ಮಗನ ಜವಾಬ್ದಾರಿ ನನಗೆ ಬಿಡು’ ಎನ್ನುವುದು ಬಹಳ ಮುಖ್ಯ ಸಂಗತಿ. ‘ಬಲಾಢ್ಯ ಜಾತಿ ಜನ ಹತ್ತು ರೊಟ್ಟಿ ತಿನ್ನುತ್ತಿದ್ದರು, ಹಿಂದುಳಿದವರು ಉಪವಾಸವಿದ್ದರು. ಅದರಲ್ಲಿ ಅರಸು ನಾಲ್ಕು ರೊಟ್ಟಿಯನ್ನು ಹಿಂದುಳಿದವರಿಗೂ ಹಂಚಿದರು’ ಎಂದು ನಾರಾಯಣರಾವ್ ಇಲ್ಲಿ ಹೇಳುತ್ತಾರೆ.

1972 ರಲ್ಲಿ ಶಿರಹಟ್ಟಿಯ ಮುಸ್ಲಿಂ ಸಮುದಾಯದ ಐ.ಜಿ.ಸನದಿ ಅವರನ್ನು ಹುಬ್ಬಳ್ಳಿ ನಗರದ ವಿಧಾನಸಭೆಗೆ ನಿಲ್ಲಿಸುತ್ತಾರೆ. ಸನದಿ ಚುನಾವಣೆಯಲ್ಲಿ ಗೆದ್ದು, ಚುನಾವಣೆ ಖರ್ಚಲ್ಲಿ ಉಳಿದಿದ್ದ ಹತ್ತು ಸಾವಿರದಲ್ಲಿ ಕಾರು ತೆಗೆದುಕೊಳ್ಳಲೆ ಎಂದಾಗ ಅರಸರು, `ಸನದಿಯವರೆ ನಾವು ಬಡವರಾಗಿದ್ದವರು ನಾವು ಹಾಗೆಯೆ ಇರಬೇಕು. ಇವತ್ತು ಅಧಿಕಾರ ಬಂತು ಎಂದು ಕಾರಲ್ಲಿ ಮೆರೆದಾಡಿದರೆ ಜನ ತಪ್ಪು ತಿಳೀತಾರೆ. ಅಧಿಕಾರ ಹೋದಮೇಲೆ ಬಾಳ ಕಷ್ಟ ಆಗುತ್ತೆ. ಪಕ್ಷ ಕಟ್ಟುವಾಗ ನಾನು ಸಣ್ಣ ಹೋಟಲಲ್ಲಿ ಉಳೀತಿದ್ದೆ. ಧೋತ್ರ ಹರಿದಿರತಿತ್ತು. ಚಪ್ಪಲಿ ಕಿತ್ತೋಗಿರತಿತ್ತು. ಅದನ್ನು ನಾನು ಸ್ವತಃ ರಿಪೇರಿ ಮಾಡಿ ಹಾಕೊಂಡಿದ್ದೇನೆ. ಮುಂದೆ ಅಧಿಕಾರ ಇಲ್ಲದಾಗ ನಿಮಗೆ ಬೇಕಾಗುತ್ತೆ, ನಿಮ್ಮಲ್ಲಿರಲಿ’ ಎನ್ನುತ್ತಾರೆ. ಇದು ಅರಸು ಅಂಚಿನ ಸಮುದಾಯದ ಯುವಕರನ್ನು ರಾಜಕಾರಣಕ್ಕೆ ತಂದಾಗ ಹೇಳುತ್ತಿದ್ದ ರಾಜನೀತಿ. ಆದರೂ ಸನದಿ ಕಾರು ತೆಗೆದುಕೊಳ್ಳುತ್ತಾರೆ. ಮಾಧ್ಯಮದಲ್ಲಿ ಸುದ್ದಿಯೂ ಆಗುತ್ತೆ. ಮುಜುಗರಕ್ಕೀಡಾಗಿ ಅರಸು ಮಾತನ್ನು ನೆನೆಯುತ್ತಾರೆ.

ಬರ ವೀಕ್ಷಣೆ ಸಂದರ್ಭದಲ್ಲಿ ಮುಂಡರಗಿ ಕಡೆ ಹೋಗುವಾಗ ಬಿಸಿಲಲ್ಲಿ ಕೆರೆ ಹೂಳೆತ್ತುವ ಕೂಲಿಗಳ ನೋಡಿ ಕಾರು ನಿಲ್ಲಿಸಿ ಹೋಗಿ, ಒಬ್ಬ ಮಹಿಳೆಯನ್ನು ಮಾತನಾಡಿಸಿ ದಿನಕ್ಕೆ ಎಷ್ಟು ಕೂಲಿ ಸಿಗುತ್ತಮ್ಮಾ ಅಂತ ಕೇಳುತ್ತಾರೆ. ಮಹಿಳೆ 5 ರೂಪಾಯಿ ಹತ್ತು ಪೈಸೆ ಎನ್ನುತ್ತಾ, ನಮ್ಮೂರ ಡಾಕ್ಟರ್ ಒಂದು ಸೂಜಿ ಮಾಡಿದ್ರೆ ಹತ್ತು ರೂಪಾಯಿ ತಗೊಳ್ತಾನೆ ಎನ್ನುತ್ತಾಳೆ. ಕೂಡಲೆ ಕಾರ್ಯದರ್ಶಿ ಕರೆದು ಆ ಡಾಕ್ಟರನನ್ನು ಸಸ್ಪೆಂಡ್ ಮಾಡಿ ಎನ್ನುತ್ತಾರೆ. ಹೀಗೆ ಅರಸು ಕಾರಲ್ಲಿ ಸಾಗುವಾಗ ಎಲ್ಲೆಂದರಲ್ಲಿ ನಿಲ್ಲಿಸಿ ಜನರ ಕಷ್ಟ ಸುಖ ವಿಚಾರಿಸುವ ಸಂಗತಿ ಇಂದು ಅಪರೂಪದ ಘಟನೆಗಳಂತೆ ಕಾಣುತ್ತವೆ. ಸ್ವತಃ ಅರಸು ಕಾರಿಗೆ ಬಡಜನರನ್ನು ಕಂಡೊಡನೆ ನಿಲ್ಲುವ ಚಾಳಿಯೂ ಇದ್ದಿರಬಹುದು.

ಆರ್.ಸಿ.ಹಿರೇಮಠ ಅವರನ್ನು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಯನ್ನಾಗಿ ಆಯ್ಕೆ ಮಾಡಿದ ಸಂದರ್ಭದಲ್ಲಿ ಅರಸು `ಸ್ವಾಮಿಗಳೆ, ನಿಮ್ಮಿಂದ ಜನರು ಹೆಚ್ಚಿನದನ್ನು ನಿರೀಕ್ಷೆ ಮಾಡುತ್ತಿದ್ದಾರೆ. ಎಂದಿಗೂ ಕರ್ತವ್ಯಕ್ಕೆ ದ್ರೋಹ ಬಗೆಯಬೇಡಿ, ಯುನಿವರ್ಸಿಟಿಗೆ ಒಳ್ಳೆಯ ಹೆಸರು ತನ್ನಿ’ ಎಂದು ಅವರನ್ನು ಕರ್ನಾಟಕ ವಿವಿಗೆ ಅರಸು ಆಯ್ಕೆ ಮಾಡುತ್ತಾರೆ. ಇಂದು ಕೋಟಿಗಟ್ಟಲೆ ಕೊಟ್ಟು ಕುಲಪತಿಗಳಾಗುವ ವರ್ತಮಾನವನ್ನು ನೋಡಿದರೆ ಅರಸು ಒಂದು ವಿಶ್ವವಿದ್ಯಾಲಯದ ಕುಲಪತಿ ಆಯ್ಕೆಯನ್ನೂ ಎಷ್ಟು ಜವಾಬ್ದಾರಿಯಿಂದ ನಡೆಸುತ್ತಿದ್ದರು ಎನ್ನುವುದು ತಿಳಿಯುತ್ತದೆ. 1976 ರಲ್ಲಿ ಮೈಸೂರು ವಿವಿ ರಾಜ್ ಕುಮಾರ್ ಅವರಿಗೆ ಡಾಕ್ಟರೇಟ್ ಕೊಟ್ಟ ಸಂದರ್ಭದಲ್ಲಿ ಅರಸು ಡಾಕ್ಟರೇಟ್ ಬಗ್ಗೆ ಮಾತನಾಡಿರುವುದು ಅವರೊಬ್ಬ ಎಂತಹ ಮುತ್ಸದ್ದಿ ಎನ್ನುವುದಕ್ಕೆ ಸಾಕ್ಷಿಯಾಗುತ್ತದೆ. `ವಿಶ್ವವಿದ್ಯಾಲಯಗಳು ಕೊಡುವುದು ಬರಿ ಅಕ್ಷರ ಜ್ಞಾನವನ್ನು. ಆದರೆ ಅನುಭವ ಎನ್ನುವ ಜ್ಞಾನ ನಮ್ಮ ಹಳ್ಳಿಯಲ್ಲಿದೆ. ನಮ್ಮ ಹಾಡಿಯ ಬುಡಕಟ್ಟಿನ ಜನರಲ್ಲಿದೆ. ಒಬ್ಬ ಟ್ರೈಬಲ್ ಹತ್ತು ಜನ ಐಎಫ್ಎಸ್‍ ಅಧಿಕಾರಿಗಳಿಗೆ ಸಮ. ಈ ಜ್ಞಾನ ಎಷ್ಟು ಅಗಾಧ. ಹಳ್ಳಿಯಲ್ಲಿ ಹಿಟ್ಟು-ಬಸ್ಸಾರು ಮಾಡ್ತಾಳಲ್ಲ ಮಹಿಳೆ, ಅದೂ ಕೂಡ ವಿದ್ಯೆಯೇ, ಜ್ಞಾನವೆ. ಅವರಿಗೆ ಕೊಡಬೇಕು ಡಾಕ್ಟರೇಟು, ಆರು ಕಟ್ಟಿ ನೆಟ್ಟಗೆ ಉಕ್ಕೆ ಹೊಡಿತಾನಲ್ಲ, ಅವನಿಗೆ ಕೊಡಬೇಕು ಡಾಕ್ಟರೇಟ್, ಆದರೆ ನೀವು ಯಾರಾರಿಗೋ ಕೊಟ್ಟು ಅದರ ಬೆಲೆಯನ್ನು ಘನತೆಯನ್ನು ಕಡಿಮೆ ಮಾಡ್ತಿದಿರಿ. ನೀವು ರಾಜಕುಮಾರ್ ಅವರಿಗೆ ಕೊಡುವ ಡಾಕ್ಟರೇಟ್ ಹಳ್ಳಿಗಾಡಿನ ಜ್ಞಾನಕ್ಕೆ, ವಿದ್ಯೆಗೆ ಅನುಭವಕ್ಕೆ ಸಿಕ್ಕಂತಹ ಗೌರವ’ ಎನ್ನುತ್ತಾರೆ.

ಅರಸು ಅವರಲ್ಲಿ ಭಿನ್ನಾಭಿಪ್ರಾಯಕ್ಕೆ ಮನ್ನಣೆಯಿತ್ತು. ಎಲ್ಲರ ಮಾತನ್ನು ಕೇಳಿಸಿಕೊಳ್ಳುವ ವ್ಯವಧಾನವಿತ್ತು. ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಶಿವರಾಮ ಕಾರಂತ, ಗೋಪಾಲ ಕೃಷ್ಣ ಅಡಿಗ, ಲಂಕೇಶ, ಮಾಸ್ಟರ್ ಹಿರಣ್ಣಯ್ಯ ಅವರು ತುರ್ತುಪರಿಸ್ಥಿತಿ ವಿರೋಧಿಸಿ ಭಾಷಣ ಮಾಡಿದರೂ ಬಂಧಿಸಲಿಲ್ಲ. ಬಿಹಾರದಿಂದ ಕರೆತಂದಿದ್ದ ಒಬ್ಬನ ಕಾಲಿಗೆ ಸರಪಣಿ ಹಾಕಿದ್ದನ್ನು ಕಂಡು, ಜೈಲ್ ಐಜಿ ಮಲ್ಲಯ್ಯನವರನ್ನು ಕರೆದು `ಮೊದಲು ಬಿಚ್ಚಿ, ಆತ ಖೈದಿಯಲ್ಲ, ಚೆನ್ನಾಗಿ ನೋಡಿಕೊಳ್ಳಿ’ ಎಂದಿದ್ದರು. ಗೋಪಾಲ ಕೃಷ್ಣ ಅಡಿಗರು ಜನಸಂಘದಲ್ಲಿ ಚುನಾವಣೆಗೆ ನಿಂತು ಸೋತು ಕೆಲಸ ಕಳೆದುಕೊಂಡಾಗ ದೇವರಾಜ ಅರಸು ಅಡಿಗರಿಗೆ ನೆರವಾಗುತ್ತಾರೆ. ಅಡಿಗರೆ `ನಿಮ್ಮ ಬಗ್ಗೆ ತಪ್ಪು ತಿಳಿದಿದ್ದೆ, ನೀವು ನಿಜವಾಗಿಯೂ ದೊಡ್ಡ ಮನುಷ್ಯರಪ್ಪ. ನಿಮ್ಮ ಹೃದಯವಂತಿಕೆಯಿಂದ ನನ್ನ ಮನ ತುಂಬಿ ಬಂತು’ ಎನ್ನುತ್ತಾರೆ.

ಖಾಸಗಿಯಾಗಿ ಹೊರಗಡೆ ಹೋದರೆ ಕಾರ್ ಡ್ರೈವ್ ಮಾಡ್ತಿದ್ದ ಶ್ರೀಹರಿ ಖೋಡೆ, ಒಮ್ಮೆ ಅರಸು ಅವರನ್ನು ಕರೆದುಕೊಂಡು ಕಲ್ಲಹಳ್ಳಿಗೆ ಹೋಗಿರುತ್ತಾರೆ. ಅಲ್ಲಿ ನಡೆದ ಒಂದು ಘಟನೆ `ಒಂದ್ಸಲ ಬೆಳಗ್ಗೆನೆ ಸುತ್ತಾಡೋದಕ್ಕೆ ಕರಕೊಂಡು ಹೋದ್ರು. ಹುಟ್ಟುವ ಸೂರ್ಯನನ್ನು ತೋರಿಸಿ, `ನೋಡಿ, ಅವನಿಗೆ ಅಹಂಕಾರನೆ ಇಲ್ಲ. ನನ್ನಿಂದ ಈ ಜಗತ್ತು ಬೆಳಗಾಯ್ತಿದೆ, ಈ ಗಿಡಮರಗಳು ಹಸಿರು ಉತ್ಪತ್ತಿ ಮಾಡ್ತಿವೆ, ಅದನ್ನ ಪ್ರಾಣಿ ಪಕ್ಷಿಗಳು ಅವಲಂಬಿಸಿವೆ ಎನ್ನುವುದರ ಪರಿವೆಯೇ ಇಲ್ಲ. ಸೂರ್ಯನಿಗೆ ವಂಚನೆ ಗೊತ್ತಿಲ್ಲ. ಮನುಷ್ಯ ಪ್ರಾಣಿಗೆ ಮಾತ್ರ ಅಹಂಕಾರ, ವಂಚನೆ, ಪದವಿ, ಪ್ರತಿಷ್ಠೆ ಎಲ್ಲ’ ಎಂದರು. ಇದನ್ನು ಯಾವ ಸಂತನಿಂದಲೂ, ವಿಜ್ಞಾನಿಯಿಂದಲೂ ಮಠಾಧೀಶರಿಂದಲೂ ಕೇಳಲು ಸಾಧ್ಯವಿಲ್ಲ ಎನ್ನುತ್ತಾರೆ. ಅರಸು ಖೋಡೆಯನ್ನು ಕಾಡು ನೋಡಿ ಬರೋಣ ಅಂತ ಕರೆದುಕೊಂಡು ಹೋಗುತ್ತಿದ್ದರಂತೆ, ಕಾಡಿನಲ್ಲಿ ನಡೆದುಕೊಂಡು ಹೋಗಿ 2-3 ಗಂಟೆ ಒಬ್ಬರೆ ಕಾಡೊಳಗೆ ಕೂತು ವಾಪಾಸ್ ಬರುತ್ತಿದ್ದರಂತೆ. ಆಗ ಅರಸು `ಜನ ನನ್ನನ್ನು ಆರಿಸಿ ಕಳಿಸಿರುವುದು ನನ್ನ ಬುದ್ಧಿ ಖರ್ಚು ಮಾಡಿ ನಿರ್ಧಾರ ತೆಗೆದುಕೊಳ್ಳಲಿ ಎಂದು. ನಾನ್ಯಾಕೆ ಯಾರು ಯಾರದೋ ಬುದ್ಧಿಯನ್ನು ಸಿದ್ಧಾಂತವನ್ನು ಆಲೋಚನೆಗಳನ್ನು ಅವಲಂಬಿಸಬೇಕು? ನನಗೆ ಯೋಚಿಸಲು ಸಮಯ ಬೇಕು. ಪ್ರಶಾಂತ ವಾತಾವರಣವಿರಬೇಕು. ಅದು ಈ ಕಾಡಿನಲ್ಲಿ ಸಿಗುತ್ತದೆ, ಬಂದೆ’ ಎನ್ನುತ್ತಿದ್ದರಂತೆ. ಇಷ್ಟೆಲ್ಲಾ ಒತ್ತಡದ ನಡುವೆಯೂ ಒಬ್ಬರೇ ಕೂತು ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತಿದ್ದ ನಡೆ ಅಪರೂಪದ್ದು.

ಹಿಂದುಳಿದವರು ಯಾರು ಎಂದರೆ-ಆರೋಗ್ಯ, ಆಶ್ರಯ, ಶಿಕ್ಷಣ ಮತ್ತು ತಮ್ಮ ಕಾಲ ಮೇಲೆ ತಾವು ನಿಲ್ಲಲು ಶಕ್ತಿ ಇಲ್ಲದವರು ಎಂದು ವ್ಯಾಖ್ಯಾನಿಸುತ್ತಿದ್ದರು. ಎಲ್ಲರೂ ಸುಖವಾಗಿರಬೇಕು-ಲಕ್ಷುರಿ ಇಲ್ಲದೆ ಇದ್ದರೂ ಪರವಾಗಿಲ್ಲ, ಮಾನ ಕಾಪಾಡಿಕೊಳ್ಳುವಷ್ಟಾದರೂ ಹಣ ಇರಬೇಕು. ಮುಂದುವರಿದವರು ಭವಿಷ್ಯದ ಬಗ್ಗೆ ಪ್ಲಾನ್ ಮಾಡುತ್ತಾರೆ. ಆದರೆ ಹಿಂದುಳಿದವರಿಗೆ ಪ್ಲಾನ್ ಇರಲಿ, ಟೂಲ್ಸೇ ಇರಲ್ಲ. ನಾನು ಆ ಟೂಲ್ಸ್ ಕೊಡಲು ಪ್ರಯತ್ನಿಸುತ್ತಿದ್ದೇನೆ’ ಎನ್ನುತ್ತಿದ್ದರು. ಹಾಗಾಗಿಯೇ ಮಾರ್ಗರೇಟ್ ಆಳ್ವ `ನಮ್ಮಂಥವರ ಪೊಲಿಟಿಕಲ್ ಗಾಡ್ ಫಾದರ್. ನಿರ್ಲಕ್ಷಿತ ಸಮುದಾಯಗಳನ್ನು, ಕಡೆಗಣಿಸಲ್ಪಟ್ಟ ಕಡಿಮೆ ಸಂಖ್ಯೆಯ ಜಾತಿಯ ಜನರನ್ನು, ರಾಜಕಾರಣದಿಂದ ಮಾರುದೂರವಿದ್ದ ಮೈನೂಟ್ ಕಮ್ಯುನಿಟಿಯನ್ನು ಅಧಿಕಾರದ ವ್ಯಾಪ್ತಿಗೆ ತಂದರು’ ಎನ್ನುತ್ತಾರೆ. ಅರಸು ಕೆ.ಎಸ್.ನಾಗರತ್ನಮ್ಮ ಅವರನ್ನು ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ವಿಧಾನಸಭಾ ಸ್ಪೀಕರ್ ಸ್ಥಾನಕ್ಕೆ ಆರಿಸುತ್ತಾರೆ.

ಅರಸು ಅವರನ್ನು ಒಬ್ಬ ಅಂತಃಕರಣದ ಮನುಷ್ಯನನ್ನಾಗಿಸಿದ್ದರಲ್ಲಿ ಅವರ ಪುಸ್ತಕ ಓದುವ ಹವ್ಯಾಸವೂ ಮುಖ್ಯವಾಗಿತ್ತು. ಈ ಕೃತಿಯಲ್ಲಿ ಹಲವರು ಅವರ ಓದುವ ಹವ್ಯಾಸದ ಬಗ್ಗೆ ಉಲ್ಲೇಖಿಸಿದ್ದಾರೆ. ಹೆಜ್ಜೂರು ಸೋಮಶೇಖರ್ ಅವರು ಹೇಳುವಂತೆ, `ಕೌಟಿಲ್ಯನ ಅರ್ಥಶಾಸ್ತ್ರವನ್ನು ತಿಂಗಳಿಗೊಮ್ಮೆ ಖಡ್ಡಾಯವಾಗಿ ಓದುತ್ತಿದ್ದರು. ಜೇನು ಸಾಕಾಣಿಕೆ, ಎರೆಹುಳುವಿನ ಅಗತ್ಯತೆ, ಕೃಷಿಯಲ್ಲಿ ಹಕ್ಕಿಗಳ ಪಾತ್ರ ಕುರಿತ ಪುಸ್ತಕಗಳನ್ನು ತರಿಸಿಕೊಂಡಿದ್ದರು ಎನ್ನುತ್ತಾರೆ. ಡಿ.ವಿ ರಾಜಶೇಖರ್ `ಅರಸರು ಸಮಾಜವಾದ, ಲೋಹಿಯಾವಾದ ಮತ್ತು ಸ್ಮಾಲ್ ಈಜ್ ಬ್ಯೂಟಿಫುಲ್..ಹೀಗೆ ಎಲ್ಲವನ್ನೂ ಓದಿಕೊಂಡಿದ್ದರು’ ಎನ್ನುತ್ತಾರೆ. ಜನಪರ ನಿಲುವುಗಳಿಗಾಗಿ ಅಂತಾರಾಷ್ಟ್ರೀಯ ಖ್ಯಾತಿ ಪಡೆದಿದ್ದ `ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ’ ಪತ್ರಿಕೆಯಲ್ಲಿ ವಿ.ಕೆ.ನಟರಾಜ್ ಅವರು ದೇವರಾಜ ಅರಸು ಪ್ರಯೋಗಗಳ ಬಗ್ಗೆ ಸೆಪ್ಟಂಬರ್ 11, 1981 ರಲ್ಲಿ ಬರೆಯುತ್ತಾರೆ. ಅದು ರಾಷ್ಟ್ರವ್ಯಾಪಿ ವಿದ್ವತ್ ಲೋಕ ಕೂಡ ಅರಸು ಅವರನ್ನು ಗಮನಿಸುವಂತೆ ಮಾಡುತ್ತದೆ.

ಅರಸು ಬಡವರು, ದುರ್ಬಲರನ್ನು ಹರಕಂಗಿ ಕಂಪನಿಯೋರು ಎಂದು ಕರೆಯುತ್ತಿದ್ದರು. 1978 ರ ಚುನಾವಣೆಯಲ್ಲಿ ರೋಣ ಕ್ಷೇತ್ರದಿಂದ ವೀರಣ್ಣ ಮತ್ತಿಕಟ್ಟಿ ಅವರನ್ನು ನಿಲ್ಲಿಸಬೇಕೆಂದಾಗ, ತಾನು ಬಡವನೆನ್ನುವ ಕಾರಣಕ್ಕೆ ಹಿಂದೇಟು ಹಾಕುತ್ತಾರೆ. ಆಗ ಅರಸು `ನಮಗೆ ನಿಮ್ಮಂತಹ ಪ್ರಗತಿಪರ ಸಮಾಜಮುಖಿ ಯುವಕರ ಅಗತ್ಯವಿದೆ. ಪ್ರಭಾವಿಗಳು, ಶ್ರೀಮಂತರು, ಬಲಾಢ್ಯ ಲಿಂಗಾಯತ ನಾಯಕರು ನಮ್ಮ ಎದುರಾಳಿಗಳಾದರೂ, ನಮ್ಮ ಪರವಾಗಿ ಬಡವರು-ಹರಕಂಗಿ ಕಂಪನಿಯೋರು ಇದಾರೆ, ಅದೃಶ್ಯ ಮತದಾರರಿದ್ದಾರೆ, ಅವರು ಗೆಲ್ಲಿಸ್ತಾರೆ ನಿಲ್ಲಿ’ ಎನ್ನುತ್ತಾರೆ. ಅರಸರು ಮತ್ತೆ ಮತ್ತೆ ಅದೃಶ್ಯ ಮತದಾರರ ಬಗ್ಗೆ ಮಾತನಾಡುತ್ತಾರೆ. ಆ ಅದೃಶ್ಯ ಮತದಾರರೆ ಅರಸು ಅವರನ್ನು ಮುಖ್ಯಮಂತ್ರಿ ಮಾಡಿದ್ದು ಅನ್ನಿಸುತ್ತೆ.

ಈ ಕೃತಿಯ ಸಂಪಾದಕರಾದ ಬಸವರಾಜು ಅವರು ತಮ್ಮ ಸಂದರ್ಶನದಲ್ಲಿ ಒಂದು ಪ್ರಶ್ನೆಯನ್ನು ಬಿಟ್ಟೂ ಬಿಡದೆ ಕೇಳಿದ್ದಾರೆ. ಅದೆಂದರೆ ಅರಸು ಕಾಲದಲ್ಲಿ ಭ್ರಷ್ಟಾಚಾರ ಹೆಚ್ಚಾಗಿತ್ತಂತಲ್ಲ ಎಂದು. ಈ ಪ್ರಶ್ನೆಗೆ ಉತ್ತರಿಸಿದವರೆಲ್ಲಾ ಅರಸು ಕಾಲದ ಭ್ರಷ್ಟಾಚಾರದ ಹಲವು ವಾಸ್ತವ ನೆಲೆಗಳನ್ನು ವಿವರಿಸಿದ್ದಾರೆ. ಈ ವಿವರಗಳನ್ನು ಓದಿದರೆ ಅರಸು ಕಾಲ ಭ್ರಷ್ಟಾಚಾರದ ಗಂಗೋತ್ರಿಯಾಗಿದ್ದು ಹೇಗೆ ಮತ್ತು ಅದರಲ್ಲಿ ಅರಸು ಪಾಲೆಷ್ಟು ಎನ್ನುವುದು ತಿಳಿಯುತ್ತದೆ. ಸ್ವತಃ ಅರಸು ಅವರನ್ನೆ `ನಿಮ್ಮ ಆಡಳಿತದಲ್ಲಿ ಭ್ರಷ್ಟಾಚಾರ ತುಂಬಿದೆಯಂತೆ’ ಹೇಗೆ ಎಂದು ಆಪ್ತರು ಕೇಳಿದಾಗಲೂ ಸ್ವತಃ ಅರಸರೂ ಈ ಕುರಿತು ಮಾತನಾಡಿದ್ದು ದಾಖಲಾಗಿದೆ. ಇದರಲ್ಲಿ ಮುಖ್ಯವಾಗಿ ಅರಸು ಸಂಬಂಧಿ ನಂಜರಾಜೇ ಅರಸ್ ಒಮ್ಮೆ `ಹೊರ ಜಗತ್ತು ನೀವು ಭ್ರಷ್ಟ ಎನ್ನುವ ಮಾತಾಡುತ್ತಿದೆ’ ಎಂದು ಕೇಳುತ್ತಾರೆ. ಆಗ ಅರಸು `ಹೌದು ನಾನು ಕರಪ್ಟ್, ಅದನ್ನು ನೆಗೆಟಿವ್ ಆಗಿ ಯಾಕೆ ನೋಡುತ್ತೀರಿ, ಪಾಸಿಟಿವ್ ಆಗಿ ನೋಡಿ’, ನನ್ನ ಒಳ್ಳೆಯ ಕೆಲಸವನ್ನು ನೋಡಿ, ನಾನು ಬಡ ಜನರಿಗಾಗಿ ತಂದ ಕಾಯ್ದೆ ಕಾನೂನುಗಳನ್ನು ನೋಡಿ, ಅದರಿಂದ ಜನರಿಗೆ ಅನುಕೂಲವಾಗಿರುವುದನ್ನು ನೋಡಿ. ಜನಕ್ಕೆ ಒಳ್ಳೆಯದು ಮಾಡಬೇಕಾದರೆ ಅಧಿಕಾರ ಬೇಕು. ಸಿಎಂ ಆಗಿರಬೇಕು. ಸಿಎಂ ಆಗಿರಬೇಕೆಂದರೆ ಶಾಸಕರ ಬೆಂಬಲ ಬೇಕು. ಶಾಸಕರ ಬೇಕು ಬೇಡಗಳನ್ನು ಪೂರೈಸಬೇಕು. ಅದಕ್ಕೆಲ್ಲ ಹಣ ಬೇಕು’ ಎನ್ನುತ್ತಾರೆ. ಇದೇ ಪ್ರಶ್ನೆಯನ್ನು ಕಾದಂಬರಿಕಾರ ಚದುರಂಗರು ಕೇಳಿದಾಗ `ಸುಬ್ರಮಣ್ಯ (ಚದುರಂಗರ ನಿಜ ಹೆಸರು) ರಾಜಕಾರಣದಲ್ಲಿ ಭ್ರಷ್ಟಾಚಾರವನ್ನು ಬಿಟ್ಟು ಮಾತನಾಡುವಂತಿಲ್ಲ. ಅಷ್ಟಕ್ಕೂ ಈ ಹಣವನ್ನು ನಾನು ಮುಟ್ಟಿ ನೋಡಿದವನೂ ಅಲ್ಲ. ನನಗಾಗಿ ಅಲ್ಲ, ಶಾಸಕರನ್ನು ಸಾಕಲು, ಅಧಿಕಾರದಲ್ಲಿ ಉಳಿಯಲು ಭ್ರಷ್ಟಾಚಾರಿ ಎಂಬ ಆರೋಪಕ್ಕೆ ಗುರಿಯಾಗಿದ್ದೇನೆ’ ಎನ್ನುತ್ತಾರೆ. ಈ ಮಾತುಗಳು ಅರಸು ಕಾಲದ ಭ್ರಷ್ಟಾಚಾರದ ಬಗ್ಗೆ ಕನ್ನಡಿಯಂತಿವೆ.

ಈ ಕೃತಿಯಲ್ಲಿ 61 ಜನರು ಬೇರೆ ಬೇರೆ ಹಿನ್ನೆಲೆಯ ಹಿರಿಯರು, ರಾಜಕಾರಣಿಗಳು, ಅಧಿಕಾರಿಗಳು, ಪತ್ರಕರ್ತರು, ಸಾಮಾನ್ಯ ವರ್ಗದವರು, ಕುಟುಂಬದವರು ಹೀಗೆ ಎಲ್ಲರೂ ತಮ್ಮ ತಮ್ಮ ಆತ್ಮಕಥನದಲ್ಲಿ `ಅರಸು’ ಅವರಿಗಾಗಿ ಮೀಸಲಿಟ್ಟ ಭಾಗವನ್ನು ಹಾಗೆ ಎತ್ತಿಕೊಟ್ಟಂತಿದೆ. ಹಾಗಾಗಿ ಇಡೀ ಕೃತಿ ಅರವತ್ತೊಂದು ಜನರ ಆತ್ಮಕಥನದ ಭಾಗಗಳಿಂದ ಪೊಣಿಸಿದ ಒಂದು ಬೃಹತ್ ಅರಸು ಆತ್ಮಕಥನದಂತೆ ಅನ್ನಿಸುತ್ತದೆ. ಈ ಕಾರಣಕ್ಕೆ 550 ಪುಟದ ಈ ಪುಸ್ತಕವನ್ನು ನೀವು ಓದಲು ಕೈಗೆತ್ತಿಕೊಂಡರೆ, ಒಂದು ಕಾದಂಬರಿಯಂತೆ ಓದು ನಿರಾಳವಾಗಿ ಸಾಗುತ್ತದೆ, ಅಲ್ಲಲ್ಲಿ ನಿಮ್ಮನ್ನು ಭಾವೋದ್ವೇಗಕ್ಕೆ ಒಳಗಾಗಿಸುತ್ತದೆ. ಇಲ್ಲಿನ ಅನುಭವಗಳಲ್ಲಿ ಕೆಲವರು ಪ್ರಾಮಾಣಿಕವಾಗಿ ತಪ್ಪೊಪ್ಪಿಗೆಯನ್ನು ಮಾಡಿದ್ದರೆ, ಮತ್ತೆ ಕೆಲವರು ಅಪ್ರಾಮಾಣಿಕವಾಗಿ ಈಗಲೂ ಸತ್ಯ ಹೇಳಲು ಹಿಂಜರಿದು ತಮ್ಮನ್ನು ತಾವು ಮತ್ತದೆ `ಸುಳ್ಳಿನ ಕೋಟೆ’ಯೊಳಗೆ ಬಂಧಿಸಿಕೊಂಡಿರುವ ಸಾಕ್ಷ್ಯಗಳೂ ಸಿಗುತ್ತವೆ. ಇಡೀ ಕೃತಿಯಲ್ಲಿ ಇಂದಿರಾಗಾಂಧಿಯ ವ್ಯಕ್ತಿತ್ವವೂ ಅನಾವರಗೊಂಡಿದೆ. ಅರಸು ಅವರ ದೌರ್ಬಲ್ಯಗಳು, ಮಿತಿಗಳು, ತಪ್ಪುಗಳು, ಕೊನೆ ಕೊನೆಗೆ ಮೂಢನಂಬಿಕೆಯಲ್ಲಿ ಕಳೆದುಹೋದದ್ದು, ಅಹಂಕಾರ ರಹಿತ ಅರಸು ಅಹಂಕಾರಿಯಾದದ್ದು ಎಲ್ಲವೂ ದಾಖಲಾಗಿವೆ. ಹಾಗಾಗಿ ಈ ಕೃತಿ ಅರಸು ಅವರನ್ನು ಸತ್ವ ಪರೀಕ್ಷೆಗೆ ಒಳಪಡಿಸಿದೆ. ಈ ಕಾರಣಕ್ಕೂ ಈ ಕೃತಿ ಮುಖ್ಯವಾಗುತ್ತದೆ. ಈ ಹೊತ್ತು ರಾಜಕಾರಣ ಪ್ರವೇಶಿಸುವ ಹೊಸ ತಲೆಮಾರು ಈ ಕೃತಿಯನ್ನು ಅವಶ್ಯ ಓದಬೇಕಾಗಿದೆ. ಅರಸು ಕರ್ನಾಟಕವನ್ನು ಅರಿಯಲು ನಾಡಿನ ಪ್ರತಿಯೊಬ್ಬ ಪ್ರಜ್ಞಾವಂತರೂ ಈ ಪುಸ್ತಕವನ್ನು ಓದಬೇಕು. ಈ ಕೃತಿಯನ್ನು ಸಂಪಾದಿಸಿದ ಬಸವರಾಜು ಅವರ ಶ್ರಮ ಅಪಾರವಾದುದು. ಈ ಕೃತಿಯನ್ನು ಅತೀವ ಕಾಳಜಿ ಶ್ರದ್ಧೆಯಿಂದ ಪಲ್ಲವ ಪ್ರಕಾಶನ ಪ್ರಕಟಿಸಿದೆ. ಈ ಇಬ್ಬರೂ ಅಭಿನಂದನಾರ್ಹರು.

ಅರಸು ಅವರು ಜಾರಿ ಮಾಡಿದ ಭೂಸುಧಾರಣೆಯ ಕಾರಣಕ್ಕೆ 7,80,000 ಕ್ಕಿಂತ ಹೆಚ್ಚಿನ ಬಡ ಗೇಣಿದಾರರು ಭೂಮಾಲೀಕರಾದರು. ಈ ಭೂಮಾಲಿಕರ ಮಕ್ಕಳು ಇಂದು ಶಾಲೆ ಕಲಿತು ಉದ್ಯೋಗ ಹಿಡಿದಿದ್ದಾರೆ. ಹಾವನೂರು ವರದಿಯ ಮೂಲಕ ಹಿಂದುಳಿದ ಜಾತಿಗಳಿಗೆ ಮೀಸಲಾತಿ ಕಲ್ಪಿಸಿದರು, ಈ ಮೀಸಲಾತಿ ಬಳಸಿಕೊಂಡು ಇಂದು ಲಕ್ಷಾಂತರ ಯುವಕ ಯುವತಿಯರು ಹುದ್ದೆ ಹಿಡಿದು ನೆಮ್ಮದಿಯ ಬದುಕು ಕಂಡುಕೊಂಡಿದ್ದಾರೆ. ಜೀತ ಪದ್ದತಿ ನಿರ್ಮೂಲನೆಯಿಂದ ಧಣಿಗಳ ಮನೆಯಲ್ಲಿ ದುಡಿಯಬೇಕಾದ ಎಷ್ಟೋ ಯುವಕ-ಯುವತಿಯರು ವಿದ್ಯಾವಂತರಾಗಿದ್ದಾರೆ. ಮಲಹೊರುವ ಪದ್ಧತಿಯ ನಿಷೇಧದಿಂದ ದಲಿತ ಮಕ್ಕಳು ಇಂತಹದ್ದೊಂದು ಅಸಹ್ಯ ಕಲ್ಪನೆಗೂ ಬರದೆ ಬದುಕು ಕಟ್ಟಿಕೊಂಡಿದ್ದಾರೆ. ಭಾಗ್ಯಜ್ಯೋತಿ ಯೋಜನೆಯಲ್ಲಿ ಕೋಟ್ಯಾಂತರ ಮನೆಗಳು ಬೆಳಗಿವೆ. ಹಿಂದುಳಿದ, ದಲಿತ, ದಮನಿತ, ಅಲ್ಪಸಂಖ್ಯಾತ, ಬುಡಕಟ್ಟು ಆದಿವಾಸಿಗಳನ್ನು ಒಳಗೊಂಡಂತೆ ಅಧಿಕಾರ ರಹಿತ ಅಂಚಿನ ಸಮುದಾಯಗಳ ಇಂದಿನ ಹೊಸ ತಲೆಮಾರು ಅರಸು ಕಾಲದ ಕ್ರಾಂತಿಕಾರಿ ಯೋಜನೆಯ ಫಲಾನುಭವಿಗಳಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಈ ಹೊತ್ತಿನ ಹೊಸತಲೆಮಾರಿನ ಕರ್ನಾಟಕ ಅದು `ಅರಸು ಕರ್ನಾಟಕ’.

ಪಲ್ಲವ ಪ್ರಕಾಶನ ಪ್ರಕಟಿಸಿರುವ ‘ನಮ್ಮ ಅರಸು’ ಕೃತಿ ಪ್ರಜೋದಯ ಪ್ರಕಾಶನದ Online Storeನಲ್ಲಿ ಲಭ್ಯವಿದ್ದು, ಆಸಕ್ತರು ಪುಸ್ತಕ ಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ಕಿಸಬಹುದು…
https://imojo.in/4d4xlza

LEAVE A REPLY

Please enter your comment!
Please enter your name here