ಮಂಗಳೂರು (ಬೆಳಗಾವಿ): ಚಿಕ್ಕೋಡಿಯ ಹಿರೇಕೋಡಿ ಆಶ್ರಮದ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜ ಸ್ವಾಮೀಜಿಗೆ ಕರೆಂಟ್ ಶಾಕ್ ನೀಡಿ, ಟಾರ್ಚರ್ ನೀಡಿ ನಂತರ ದೇಹವನ್ನು ತುಂಡು ತುಂಡಾಗಿ ಭೀಕರವಾಗಿ ಕತ್ತರಿಸಿ ಕೊಲೆ ಮಾಡಲಾಗಿದೆ. ಜುಲೈ 5 ರಿಂದ ನಾಪತ್ತೆಯಾಗಿದ್ದ ಸ್ವಾಮೀಜಿ ಕುರಿತು ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನಟ್ಟಿದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆಗ ಪ್ರಕರಣದ ಭಯಾನಕತೆ ಹೊರಬಿದ್ದಿದೆ.
ಕೊಳವೆಬಾವಿಯಲ್ಲಿ ಶವ ಎಸೆದಿರುವುದಾಗಿ ಆರೋಪಿಗಳಾದ ನಾರಾಯಣ ಮಾಳಿ ಮತ್ತು ಹುಸೇನ್ ಒಪ್ಪಿಕೊಂಡಿದ್ದರು. ಹೀಗಾಗಿ ಕೊಳವೆ ಬಾವಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಆರೋಪಿ ನಾರಾಯಣನ ಜೊತೆ ಜೈನ ಮುನಿಗೆ ಉತ್ತಮ ಸಂಬಂಧ ಇತ್ತು. ಮುನಿಗಳು ಹಂತಕ ನಾರಾಯಣನಿಗೆ 6 ಲಕ್ಷ ರೂಪಾಯಿ ಹಣ ಸಾಲವಾಗಿ ನೀಡಿದ್ದರು. ಹಣವನ್ನು ಮರಳಿ ನೀಡುವಂತೆ ಮುನಿ ಒತ್ತಾಯಿಸಿದಾಗ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಜುಲೈ 5ರ ರಾತ್ರಿ ನಂದಿ ಪರ್ವತ ಆಶ್ರಮದ ಕೋಣೆಯಲ್ಲಿ ಹತ್ಯೆ ನಡೆಸಿದ್ದರು. ಪೊಲೀಸರ ವಿಚಾರಣೆ ವೇಳೆ ಅವರಿಬ್ಬರೂ ದಿಕ್ಕು ತಪ್ಪಿಸಲು ಯತ್ನಿಸಿದ್ದರು. ಒಮ್ಮೆ ನದಿಯಲ್ಲಿ ಶವ ಎಸೆದಿರುವುದಾಗಿ ಮತ್ತೊಮ್ಮೆ ಕೊಳವೆ ಬಾವಿಯಲ್ಲಿ ಶವ ಎಸೆದಿರುವುದಾಗಿ ಹೇಳಿಕೆ ನೀಡಿದ್ದರು. ತೀವ್ರ ವಿಚಾರಣೆಯ ಬಳಿಕ ನಿಜ ಸಂಗತಿ ಹೊರಗೆ ಬಂದಿತ್ತು. ಜುಲೈ 5ರಂದು ಅಡುಗೆ ಸಹಾಯಕ್ಕೆ ಕೆಲಸ ಮುಗಿಸಿ ಹೋಗುತ್ತಿದ್ದಂತೆ ಆರೋಪಿಗಳು ಕೊಲೆಗೆ ಹಾಕಿದ್ದಾರೆ. ವಿದ್ಯುತ್ ಶಾಕ್ ನೀಡಿ ಕತ್ತು ಹಿಸುಕಿ ಆರೋಪಿ ನಾರಾಯಣ ಕೊಲೆ ಮಾಡಿದ್ದಾನೆ. ನಂತರ ಸ್ನೇಹಿತ ಹುಸೇನ್ ಗೆ ಕರೆ ಮಾಡಿ ಕರೆಸಿಕೊಂಡಿದ್ದು ಬಳಿಕ ಸ್ವಾಮೀಜಿ ಶವವನ್ನು ಇಬ್ಬರು ಜೊತೆಗೂಡಿ ಬೈಕಿನಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಬೈಕಿನಲ್ಲಿ 39 ಕಿ.ಮೀ. ಸಂಚರಿಸಿ ಆ ಬಳಿಕ ಕೊಳವೆ ಬಾವಿಯಲ್ಲಿ ಶವವನ್ನು ಎಸೆದಿದ್ದಾರೆ. ಜೈನ ಮುನಿ ಹತ್ಯೆಗೆ ರಾಜ್ಯಾದ್ಯಂತ ಖಂಡನೆ ವ್ಯಕ್ಯವಾಗಿದ್ದು, ಸೂಕ್ತ ತನಿಖೆಗೆ ಒತ್ತಾಯಿಸಿದ್ದಾರೆ.