ಮಂಗಳೂರು( ವಾರಣಾಸಿ ): ವಾರಣಾಸಿಯ ಲಂಕಾ ಪ್ರದೇಶದಲ್ಲಿ ಟೊಮೊಟೊ ಕೊಳ್ಳಲು ಬರುವ ಗ್ರಾಹಕರಿಂದ ವಾಗ್ವಾದ ಮತ್ತು ಮಾತಿನ ಚಕಮಕಿಗಳನ್ನು ತಪ್ಪಿಸಲು ತರಕಾರಿ ವ್ಯಾಪಾರಿಯೋರ್ವ
ಬೌನ್ಸರ್ ಗಳನ್ನು ನೇಮಿಸಿಕೊಂಡ ಘಟನೆ ನಡೆದಿದೆ. ದೇಶದಾದ್ಯಂತ ಟೊಮೇಟೊ ಬೆಲೆ ಗಗನಕ್ಕೇರಿದ್ದು, ಜನರನ್ನು ನಿಯಂತ್ರಿಸಲು ಇಬ್ಬರನ್ನು ನೇಮಕ ಮಾಡಿರುವುದಾಗಿ ಟೊಮೆಟೊ ವ್ಯಾಪಾರಿ ಅಜಯ್ ಪೌಜಿ ಹೇಳಿದ್ದಾರೆ..
ನಾನು ಜನರಲ್ಲಿ ಟೊಮೇಟೊ ದರದ ಬಗ್ಗೆ ವಾದಗಳನ್ನು ಕೇಳುತ್ತಲೇ ಇದ್ದೇನೆ. ನನ್ನ ಅಂಗಡಿಯ ಜನರು ಕೂಡ ಚೌಕಾಸಿ ಮಾಡಲು ಪ್ರಯತ್ನಿಸಿದರು. ಆದ್ದರಿಂದ ನಿರಂತರ ವಾದಗಳನ್ನು ಕೊನೆಗೊಳಿಸಲು ನಾನು ಬೌನ್ಸರ್ ಗಳನ್ನು ನಿಯೋಜಿಸಲು ನಿರ್ಧರಿಸಿದೆ ಎಂದು ಪೌಜಿ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಟೊಮೇಟೊವನ್ನು ಕೆಜಿಗೆ 140 ರಿಂದ 160 ಗೆ ಮಾರಾಟ ಮಾಡುತ್ತಿರುವ ಪೌಜಿ, ಬೆಳಿಗ್ಗೆ 9:00 ರಿಂದ ಸಂಜೆ 5ರ ವರೆಗೆ ತಮ್ಮ ಗಾಡಿ ಬಳಿ ಬೌನ್ಸರ್ ಗಳನ್ನು ನಿಯೋಜಿಸಿದ್ದಾರೆ. ಎಸ್ ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಪೌಜಿ ಮತ್ತು ಅವರ ಬೌನ್ಸರ್ ಗಳಿಗೆ ಸಂಬಂಧಿಸಿದ ಸುದ್ದಿಯನ್ನು ಜಾಲತಾಣಗಳಲ್ಲಿ ಹಂಚಿಕೊಂಡಿದ್ದು , ಬಿಜೆಪಿ ಟೊಮೇಟೊಗಳಿಗೆ ಝೆಡ್ ಪ್ಲಸ್ ಭದ್ರತೆಯನ್ನು ನೀಡಬೇಕು ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.