ಮಂಗಳೂರು (ಮೈಸೂರು) (ಉತ್ತರಾಖಂಡ ): ಪ್ರಸಿದ್ಧ ಪ್ರವಾಸಿ ತಾಣ ಕುಲು ಮನಾಲಿ ಪ್ರವಾಸಕ್ಕೆಂದು ತೆರಳಿದ್ದ ಮೈಸೂರಿನ ನಾಲ್ವರು ಪ್ರವಾಸಿಗರು ನಾಪತ್ತೆಯಾಗಿದ್ದಾರೆ. ಶ್ರೀನಿಧಿ, ನವ್ಯ, ವೀರ್ ಹಾಗೂ ಅವರ ಪತ್ನಿ ಮೈಸೂರಿನ ನಿವಾಸಿಗಳಾಗಿದ್ದು ಪ್ಯಾಕೇಜ್ ಟೂರ್ನಲ್ಲಿ ಕುಲುಮನಾಲಿ ಪ್ರವಾಸಕ್ಕೆಂದು ಕಳೆದ ಜುಲೈ 6 ರಂದು ಮೈಸೂರಿನಿಂದ ಹೊರಟಿದ್ದರು. ಪ್ರವಾಸಕ್ಕೆ ಹೋದ ಮೇಲೆ ಜುಲೈ 9ರಂದು ಕೊನೆಯ ಬಾರಿ ಸಂಪರ್ಕಕ್ಕೆ ಸಿಕ್ಕಿದ್ದು, ಮಳೆ ಜಾಸ್ತಿ ಇದೆ, ರೆಡ್ ಅಲರ್ಟ್ ಘೋಷಣೆ ಮಾಡಿದ್ದಾರೆ, ನಾವು ಕೊಠಡಿಯಲ್ಲಿ ಸುರಕ್ಷಿತವಾಗಿದ್ದೇವೆ ಎಂದು ಕುಟುಂಬಸ್ಥರಿಗೆ ತಿಳಿಸಿದ್ದರು. ಆ ಬಳಿಕ ಇದುವರೆಗೂ ಯಾರೊಬ್ಬರ ಬಗ್ಗೆಯೂ ಮಾಹಿತಿ ಇಲ್ಲ. ಇದರಿಂದ ಮನೆಯವರು ಆತಂಕಗೊಂಡಿದ್ದು ಕುಟುಂಬಸ್ಥರ ಬಗ್ಗೆ ಮಾಹಿತಿ ನೀಡಿ ಸುರಕ್ಷಿತವಾಗಿ ಕರೆತರುವಂತೆ ಮನವಿ ಮಾಡಿದ್ದಾರೆ.
ಇನ್ನೊಂದೆಡೆ ಉತ್ತರಾಖಂಡದಲ್ಲಿ ಭಾರಿ ಮಳೆಯಿಂದಾಗಿ ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿದ್ದು ಗುಡ್ಡದಿಂದ ಬಂಡೆಯೊಂದು ಉರುಳಿ ಕಾರುಗಳ ಮೇಲೆ ಬಿದ್ದ ಪರಿಣಾಮ ನಾಲ್ವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಆರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಜುಲೈ 10ರ ಸೋಮವಾರ ರಾತ್ರಿ ಯಾತ್ರಾರ್ಥಿಗಳು ಗಂಗೋತ್ರಿಯಿಂದ ಉತ್ತರ ಕಾಶಿಗೆ ಹಿಂದಿರುಗುತ್ತಿದ್ದಾಗ ಸುನಗರದ ಬಳಿ ಅಪಘಾತ ಸಂಭವಿಸಿದೆ. ಸ್ಥಳೀಯರ ನೆರವಿನಿಂದ ತಡರಾತ್ರಿ ಹಲವಾರು ಪ್ರಯಾಣಿಕರನ್ನು ರಕ್ಷಿಸಲಾಯಿತು. ಆದರೆ ನಿರಂತರವಾಗಿ ಬೀಳುತ್ತಿದ್ದ ಬಂಡೆಗಳಿಂದಾಗಿ ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಮೂರು ವಾಹನಗಳು ಅವಶೇಷಗಳ ಅಡಿ ಸಿಲುಕಿವೆ ಎಂದು ವಿಪತ್ತು ನಿರ್ವಹಣಾ ಅಧಿಕಾರಿ ರಾಜೇಶ್ ಕುಮಾರ್ ತಿಳಿಸಿದ್ದಾರೆ.