ಮಂಗಳೂರು(ಬಜಪೆ): ಬಿಜೆಪಿ ಕಾರ್ಯಕರ್ತನೋರ್ವ ದಲಿತ ಯುವತಿಗೆ ಜಾತಿನಿಂದನೆ ಮಾಡಿದ್ದಾನೆ ಎನ್ನಲಾದ ಘಟನೆ ಬಜಪೆ ಪೊಲೀಸ್ ಠಾಣೆ ವ್ಯಾಪ್ತಿಯ ಕಂದಾವರ ಗ್ರಾಮದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದ ಆರೋಪಿ ಸುದರ್ಶನ್ ಎಂಬಾತನ ವಿರುದ್ಧ ಯುವತಿ ಬಜಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪೊಲೀಸರು ಆರೋಪಿಯ ಜೊತೆ ಸೇರಿಕೊಂಡು ಪ್ರಕರಣ ದಾಖಲಿಸಲು ಹಿಂದೇಟು ಹಾಕುತ್ತಿದ್ದು ಠಾಣೆಗೆ ಬಂದಿದ್ದ ಆರೋಪಿ ಸುದರ್ಶನ್ ಅನ್ನು ಪೊಲೀಸ್ ರಕ್ಷಣೆಯಲ್ಲಿ ಪರಾರಿಯಾಗಲು ಅವಕಾಶ ನೀಡಿದ್ದಾರೆ ಎಂದು ಆರೋಪಿಸಿ ದಲಿತ ಸಂಘಟನೆಗಳು ಭೀಮಸೇನೆಯ ನೇತೃತ್ವದಲ್ಲಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಧರಣಿ ನಡೆಸಿದರು.
ಪೋಲಿಸ್ ಆಯುಕ್ತರು ಧರಣಿ ನಿರತರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಮೂರು ದಿನಗಳ ಒಳಗಾಗಿ ಆರೋಪಿಯನ್ನು ಬಂಧಿಸುವ ಭರವಸೆ ನೀಡಿದ ಬಳಿಕ ಧರಣಿ ಹಿಂಪಡೆದುಕೊಳ್ಳಲಾಯಿತು.
ಬಜ್ಪೆ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ದಲಿತ ಕಾಲನಿಯಲ್ಲಿ ನೀರಿನ ಸಮಸ್ಯೆಯ ಕುರಿತು ಅದೇ ವಾರ್ಡಿನ ಯುವತಿ ವಾರ್ಡ್ ಸದಸ್ಯೆ ಸವಿತಾ ಎಂಬವರಿಗೆ ದೂರವಾಣಿ ಮೂಲಕ ತಿಳಿಸಿದ್ದರು. ಸವಿತಾ ಯುವತಿಗೆ ಮನಬಂದಂತೆ ಬೈದು ಬಳಿಕ ಯುವತಿಯ ಮೊಬೈಲ್ ನಂಬರನ್ನು ಆರೋಪಿ ಸುದರ್ಶನ್ ಎಂಬಾತನಿಗೆ ನೀಡಿ ಆತನಿಂದ ಕರೆ ಮಾಡಿಸಿದ್ದರು. ಯುವತಿಗೆ ಕರೆ ಮಾಡಿದ್ದ ಆರೋಪಿಯು ಯುವತಿಯ ಜೊತೆ ಅಸಭ್ಯವಾಗಿ ಮಾತನಾಡಿದ್ದಲ್ಲದೆ ಜಾತಿ ನಿಂದನೆ ಮಾಡಿ ಅವಮಾನಿಸಿದ್ದಾನೆ. ಈ ಕುರಿತು ದೂರು ನೀಡುವ ಸಂದರ್ಭ ಆರೋಪಿ ಪೊಲೀಸ್ ಠಾಣೆಯಲ್ಲಿ ಇದ್ದು ಪೊಲೀಸರೇ ಆತನನ್ನು ಕಳುಹಿಸಿಕೊಟ್ಟಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.