ಮಂಗಳೂರು(ಹೊಸದಿಲ್ಲಿ): ರಣ ಭೀಕರ ಮಳೆಯಿಂದಾಗಿ ಉಂಟಾದ ಜಲ ಪ್ರವಾಹದಿಂದ 1200ಕ್ಕೂ ಹೆಚ್ಚು ರಸ್ತೆಗಳು ಮುಚ್ಚಿ ಹೋಗಿದೆ ಎಂದು ಹಿಮಾಚಲ ಪ್ರದೇಶ ರಸ್ತೆ ಮತ್ತು ಸಾರಿಗೆ ನಿಗಮದ ಎಂ ಡಿ ರೋಹನ್ ಚಂದ್ ಮಾಹಿತಿ ನೀಡಿದ್ದಾರೆ.
ಕುಲು, ಮಂಡಿ ಮತ್ತು ಶಿಮ್ಲಾದ ಹೆಚ್ಚಿನ ರಸ್ತೆಗಳು ಮುಚ್ಚಿ ಹೋಗಿದ್ದು 316ಕ್ಕೂ ಹೆಚ್ಚು ಬಸ್ಸುಗಳು ಭೂ ಕುಸಿತ ಪ್ರದೇಶಗಳಲ್ಲಿ ಸಿಲುಕಿಕೊಂಡಿದೆ. ಕಳೆದ 24 ಗಂಟೆಗಳಲ್ಲಿ 250 ಮಾರ್ಗಗಳನ್ನು ತೆರವುಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಇನ್ನೊಂದೆಡೆ ಯಮುನಾ ನದಿಯ ನೀರಿನ ಮಟ್ಟ ಹೆಚ್ಚಿರುವ ಹಿನ್ನೆಲೆಯಲ್ಲಿ ವಝೀರಾಬಾದ್, ಚಂದ್ರವಾಲ್ ಮತ್ತು ಓಖ್ಲಾಗಳಲ್ಲಿನ ನೀರು ಶುದ್ಧೀಕರಣ ಘಟಕಗಳನ್ನು ಸ್ಥಗಿತಗೊಳಿಸಲಾಗಿದ್ದು, ರಾಷ್ಟ್ರ ರಾಜಧಾನಿಯ ಕೆಲವು ಭಾಗಗಳಲ್ಲಿ ನೀರು ಪೂರೈಕೆ ವ್ಯತ್ಯಯಗೊಳ್ಳಬಹುದು ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.
ಯಮುನಾ ನದಿಯ ನೀರಿನ ಮಟ್ಟ ಗುರುವಾರ ಬೆಳಿಗ್ಗೆ 208.48 ಮೀ.ತಲುಪಿದ್ದು, ಸಮೀಪದ ರಸ್ತೆಗಳು, ಸಾರ್ವಜನಿಕ ಮತ್ತು ಖಾಸಗಿ ಮೂಲಸೌಕರ್ಯಗಳು ಜಲಾವೃತಗೊಂಡಿವೆ. ನದಿಗೆ ಸಮೀಪದ ನಿವಾಸಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಳೆಯ ರೈಲ್ವೆ ಸೇತುವೆಯಲ್ಲಿ ಯಮುನಾ ನದಿ ನೀರಿನ ಮಟ್ಟ ಬುಧವಾರ ರಾತ್ರಿ 208 ಮೀ.ದಾಟಿದ್ದು, ಗುರುವಾರ ಬೆಳಿಗ್ಗೆ 208.48 ಮೀ.ಗೆ ಏರಿಕೆಯಾಗಿದೆ. ನದಿ ನೀರಿನ ಮಟ್ಟ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ ಎಂದು ಹೇಳಿರುವ ಕೇಂದ್ರ ಜಲ ಆಯೋಗವು,ಪರಿಸ್ಥಿತಿ ತೀವ್ರ ಹದಗೆಟ್ಟಿದೆ ಎಂದು ಹೇಳಿದೆ.