ಮಂಗಳೂರು (ಬೆಂಗಳೂರು): ಗರ್ಭಿಣಿಯರಿಗೆ ಮತ್ತು ಮಕ್ಕಳಿಗೆ ವಿತರಿಸಲು ರಾಜ್ಯದ ಅಂಗನವಾಡಿಗಳಿಗೆ ಪೂರೈಕೆಯಾಗುತ್ತಿರುವ ಮೊಟ್ಟೆಗಳು ಕಳಪೆ ಮಟ್ಟದೆಂದು ಬೆಳಕಿಗೆ ಬಂದಿದೆ. ಇದು ಗರ್ಭಿಣಿ ಮತ್ತು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ವಿವಿಧ ಯೋಜನೆಗಳಂತೆ ಮೊಟ್ಟೆ ವಿತರಣೆಯಲ್ಲಿಯೂ ಸರ್ಕಾರ ಭ್ರಷ್ಟಾಚಾರ ನಡೆಸುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಂಗನವಾಡಿಗಳಿಗೆ ಪೂರೈಕೆಯಾಗುತ್ತಿರುವ ಮೊಟ್ಟೆಗಳು ಹಾಳಾಗಿದ್ದು, ಬೇಯಿಸಿದ ನಂತರ ಸಿಪ್ಪೆ ತೆಗೆದು ನೋಡಿದರೆ, ಮೊಟ್ಟೆ ಕಪ್ಪಾಗಿರುವುದು ಕಂಡು ಬಂದಿದೆ. ಹೀಗಾಗಿ ಸಾರ್ವಜನಿಕ ವಲಯದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಹಾಸನ, ಕೊಡಗು, ಹಾವೇರಿ ಜಿಲ್ಲೆ ಸೇರಿ ಕೆಲವು ಜಿಲ್ಲೆಗಳ ಅಂಗನವಾಡಿಗಳಿಗೆ ಹಾಳಾದ ಮೊಟ್ಟೆಗಳನ್ನು ವಿತರಿಸಲಾಗಿದೆ. ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ಎರಡು ಪ್ರಕರಣ ಪತ್ತೆಯಾಗಿದೆ. ಇನ್ನೂ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಬಸವತ್ತೂರು ಗ್ರಾಮದ ಅಂಗನವಾಡಿಗೂ ಕೊಳೆತ ಮೊಟ್ಟೆ ಪೂರೈಕೆ ಆಗಿದೆ. ಹೀಗಾಗಿ ಮೊಟ್ಟೆ ಪಡೆಯಲು ಹಿಂದೇಟು ಹಾಕುವಂತಾಗಿದೆ.
ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ‘ಯಾರು ಕಳಪೆ ಮೊಟ್ಟೆ ಪೂರೈಕೆ ಮಾಡಿದ್ದಾರೆ ಅವರನ್ನು ಕಪ್ಪುಪಟ್ಟಿಗೆ ಸೇರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಲ್ಲದೆ ಅಂತಹ ಪೂರೈಕೆದಾರರನ್ನು ಪೂರೈಕೆ ಪಟ್ಟಿಯಿಂದಲೂ ಕೈಬಿಡುವಂತೆ ನಿರ್ದೇಶನ ನೀಡಿದ್ದೇನೆ. ಖರೀದಿ ವಿಕೇಂದ್ರೀಕರಣದ ಕಾರಣದಿಂದ ಪಂಚಾಯತಿ ಮಟ್ಟದಲ್ಲೂ ಮೊಟ್ಟೆ ಖರೀದಿ ಆಗುತ್ತಿದೆ’ ಎಂದು ಸ್ಪಷ್ಟನೆ ನೀಡಿದ್ದಾರೆ.