ಸಿಂಗಳೀಕ (Macaca silenus)
ಮಕ್ಕಳಿಗಾಗಿ ವಿಶೇಷ ಮಾಹಿತಿ
ಸಿಂಗಳೀಕವು ಅಲೆಮಾರಿ ಕಪ್ಪು ಕಪಿಯಾಗಿದೆ. ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳಲ್ಲಿ ಸಾಮಾನ್ಯವಾಗಿ ಇವು ಕಂಡು ಬರುತ್ತವೆ. ಇವುಗಳ ವಿಶೇಷತೆಯೆಂದರೆ ಬಿಳಿ ರಜತ ವರ್ಣದ ಕತ್ತಿನ ಕೂದಲು, ಬೇರೆ ಭಾಗಗಳಲ್ಲಿ ಕೂದಲು ಕಪ್ಪಾಗಿರುತ್ತದೆ. ಮುಖವೂ ಕಪ್ಪಾಗಿದೆ. ಮುಖದಲ್ಲಿ ಕೂದಲು ಇಲ್ಲ. ಸಿಂಗಳೀಕಗಳ ತೂಕವು 2 ರಿಂದ 10 ಕೆ.ಜಿ. ಇವುಗಳ ಬಾಲದ ಉದ್ದ ಮಧ್ಯಮ ಗಾತ್ರದ್ದು, ಬಾಲದ ತುದಿಯು ಸಿಂಹದ ಬಾಲದ ತುದಿಯಂತೆ – ತುರಾಯಿಯಂತೆ ಇದೆ, ಸಿಂಗಳಿಕಗಳು 20 ರಿಂದ 30 ವರುಷ ಬದುಕುತ್ತವೆ.
ಈ ಸಿಂಗಳೀಕಗಳು ಹೆಚ್ಚು ಮಳೆ ಬೀಳುವ ಅರಣ್ಯ ಪ್ರದೇಶಗಳಲ್ಲಿ, ಹಸಿರು ಕಾಡಿನ ತೇವ ವಾತಾವರಣದಲ್ಲಿ ವಾಸಿಸುತ್ತವೆ. ಇವು ಆದಷ್ಟು ಮನುಷ್ಯರಿಂದ ದೂರವಿರುತ್ತವೆ, ಸಾಮಾನ್ಯವಾಗಿ ಸಿಂಗಳೀಕಗಳು 10 ರಿಂದ 20 ಸಹಚರರೊಂದಿಗೆ ಗುಂಪುಗೂಡಿ ವಾಸಿಸುತ್ತವೆ. ಇವುಗಳ ಆಹಾರವು ಹಣ್ಣುಗಳು, ಎಲೆಗಳು, ಬೇರುಗಳು, ಬೀಜಗಳು, ಹೂವುಗಳು, ಕೀಟಗಳು ಇತ್ಯಾದಿ. ಇವುಗಳ ಸಂಖ್ಯೆಯು ಸುಮಾರು 35 ಸಾವಿರ ರಷ್ಟಿದ್ದು ಹೆಚ್ಚಾಗಿ ಕರ್ನಾಟಕ, ಕೇರಳ, ತಮಿಳುನಾಡುಗಳಲ್ಲಿ ಕಂಡುಬರುತ್ತವೆ. ಕರ್ನಾಟಕದ ಶಿರಸಿ, ಹೊನ್ನಾವರಗಳ ಭಾಗದಲ್ಲಿ 32 ಜಾತಿಯ ಸಿಂಗಳೀಕಗಳಿವೆ. ಭಾರತದ ಅನೇಕ ಝೂಗಳಲ್ಲಿ ಇವುಗಳನ್ನು ಕಾಣುತ್ತೇವೆ. ಅನೇಕ ಕಾರಣಗಳಿಂದಾಗಿ ಈ ಪ್ರಾಣಿಗಳ ಸಂಖ್ಯೆ ಕಡಿಮೆಯಾಗಿದೆ.