ಹೊಂಡ ಬಿದ್ದ ರಾಷ್ಟ್ರೀಯ ಹೆದ್ದಾರಿ – ಅಪಘಾತಕ್ಕೆ ರಹದಾರಿ

ಮಂಗಳೂರು: ಮಳೆಗಾಲದ ಮೊದಲ ತಿಂಗಳ ಮಳೆಗೆ ದಕ್ಷಿಣ ಕನ್ನಡದ ಬಿ ಸಿ ರೋಡ್ ನಿಂದ ಸುರತ್ಕಲ್ ಟೋಲ್ ಗೇಟ್ ವರೆಗಿನ ರಾಷ್ಟ್ರೀಯ ಹೆದ್ದಾರಿ ಪೂರ್ತಿ ಹೊಂಡ ಬಿದ್ದಿವೆ. ಕೆಲವು ಹೊಂಡಗಳಂತೂ ಅರ್ಧ ಅಡಿ ಆಳ,  ಮೀಟರ್ ಗಟ್ಟಲೆ ಅಗಲವಿದೆ. ಮಳೆ ಸುರಿಯುತ್ತಿರುವಾಗಲಂತೂ ರಸ್ತೆಯಲ್ಲಿ ನೀರು ತುಂಬಿ ಹೊಂಡಗಳು ಗೋಚರಿಸುವುದೇ ಇಲ್ಲ. ಕೆಲವು ಹೊಂಡಗಳು ದಿಢೀರಾಗಿ ಎದುರುಗೊಂಡು ವಾಹನ ಸವಾರರನ್ನು ಕಕ್ಕಾಬಿಕ್ಕಿಯಾಗಿಸುತ್ತದೆ.

ದ್ವಿಚಕ್ರ ವಾಹನ ಸವಾರರಂತೂ ಈ ಹೊಂಡಗಳನ್ನು ಗಮನಿಸದಿದ್ದರೆ ಕೆಳಗೆ ಬೀಳಲೇಬೇಕು. ಕಾರು, ಟ್ರಕ್ಕುಗಳು ಹೊಂಡಕ್ಕೆ ಬಿದ್ದ ರಭಸಕ್ಕೆ ರಸ್ತೆಯಲ್ಲೆ ಕೆಟ್ಟು ನಿಲ್ಲುತ್ತಿವೆ. ಸಾವಿರಾರು ರೂಪಾಯಿ ಖರ್ಚು ಬೇರೆ. ಒಟ್ಟಾರೆ ಸುರತ್ಕಲ್ ನಿಂದ ಬಿ ಸಿ ರೋಡ್-ಮಾಣಿ ವರೆಗಿನ ರಾಷ್ಟ್ರೀಯ ಹೆದ್ದಾರಿ ಸಂಚಾರ ಈಗ ಮೃತ್ಯುವಿನೊಂದಿಗೆ ಸರಸ ಎನ್ನುವಂತಾಗಿದೆ. ರಾಷ್ಟ್ರೀಯ ಹೆದ್ದಾರಿಯಾಗಿ ಉಳಿಯದೆ ಸಾರ್ವಜನಿಕರ ಪಾಲಿಗೆ ಅದೀಗ ಮರಣದ ಹೆದ್ದಾರಿಯಾಗಿದೆ. ಇನ್ನೂ ಮೂರು ತಿಂಗಳ ಮಳೆಗಾಲ ಬಾಕಿ ಇದ್ದು ಆ ಅವಧಿಯಲ್ಲಾಗುವ ಅನಾಹುತ  ಊಹೆಗೂ ನಿಲುಕದ್ದು ಎಂದು ರಾಜ್ಯ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ ಹೇಳಿದ್ದಾರೆ.

 

ಸುರತ್ಕಲ್ ನಿಂದ ಮಾಣಿ ವರೆಗಿನ ಸುಮಾರು 50 ಕಿ.ಮೀ ನಷ್ಟು ಉದ್ದದ ಹೆದ್ದಾರಿಯ ದುರವಸ್ಥೆ ಅಂದಾಜಿಗೆ ನಿಲುಕದ್ದು. ಇಲ್ಲಿ ಇಷ್ಟೊಂದು ಅನಾಹುತ, ಹೆದ್ದಾರಿಯಲ್ಲಿ ಮೃತ್ಯು ಕೂಪ ನಿರ್ಮಾಣಗೊಂಡಿದ್ದರೂ ಆಡಳಿತ ವಿರೋಧಿ ಅಲೆಯನ್ನೂ ಎದುರಿಸಿ ದೊಡ್ಡ ಅಂತರದಲ್ಲಿ ಗೆದ್ದು ಬಂದ ಬಿಜೆಪಿ ಶಾಸಕರುಗಳು ಸಣ್ಣ ಶಬ್ದವನ್ನೂ ಎತ್ತಿಲ್ಲ.

ಅವರು ರಸ್ತೆ, ಚರಂಡಿಯಂತಹ ಸಣ್ಣ ವಿಚಾರಗಳ ಕುರಿತು ಪ್ರಶ್ನಿಸಬೇಡಿ ಎಂದು ಹೇಳಿ ಚುನಾವಣೆ ಗೆದ್ದವರು. ಆದ್ದರಿಂದ ಅವರು ಹೆದ್ದಾರಿ ಮೃತ್ಯು ಹೊಂಡಗಳ ಕುರಿತು ಮಾತಾಡುವುದಿಲ್ಲ. ಅದೇನಿದ್ದರೂ ಜನಪರ ಸಂಘಟನೆಗಳ ಕೆಲಸ ಎಂಬಂತಾಗಿದೆ. ಈ ವಿಚಾರದಲ್ಲಿ ಹೋರಾಟಕ್ಕಿಳಿಯುವುದೇ ನಮ್ಮ ಮುಂದಿರುವ ದಾರಿ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷರೂ ಆಗಿರುವ, ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ ಹೇಳಿದ್ದಾರೆ.

LEAVE A REPLY

Please enter your comment!
Please enter your name here