ಕೊಡಗು: ಸಚಿವ ಸ್ಥಾನ, ಪ್ರತ್ಯೇಕ ಲೋಕಸಭಾ ಕ್ಷೇತ್ರ, 3 ವಿಧಾನಸಭಾ ಕ್ಷೇತ್ರಕ್ಕೆ ಒತ್ತಾಯಿಸಿದ ವೀರನಾಡು ರಕ್ಷಣಾ ವೇದಿಕೆ

ಮಂಗಳೂರು(ಮಡಿಕೇರಿ): ಕೊಡಗು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮತ್ತು ಸಮಸ್ಯೆಗಳ ಪರಿಹಾರಕ್ಕೆ ಸ್ಥಳೀಯ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು, ಪ್ರತ್ಯೇಕ ಲೋಕಸಭಾ ಕ್ಷೇತ್ರ ರಚಿಸಬೇಕು ಹಾಗೂ ವಿಧಾನಸಭಾ ಕ್ಷೇತ್ರದ ಸಂಖ್ಯೆಯನ್ನು ಮೂರಕ್ಕೇರಿಸಬೇಕು ಎಂದು ವೀರನಾಡು ರಕ್ಷಣಾ ವೇದಿಕೆ ಒತ್ತಾಯಿಸಿದೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಹರೀಶ್ ಜಿ.ಆಚಾರ್ಯ ರಾಜಕೀಯವಾಗಿ ಕೊಡಗಿಗೆ ಅನ್ಯಾಯವಾಗುತ್ತಿರುವುದರಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳುತ್ತಿವೆ ಎಂದು ಅಭಿಪ್ರಾಯಪಟ್ಟರು. ಕಳೆದ ಸರಕಾರದಲ್ಲೂ ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ದೊರೆಯಲಿಲ್ಲ, ಇದೀಗ ಬಹುಮತದ ಸರಕಾರ ಬಂದಿದ್ದರೂ ಸಚಿವ ಸ್ಥಾನವನ್ನು ನೀಡಿಲ್ಲ. ಹೊರ ಜಿಲ್ಲೆಯವರು ಉಸ್ತುವಾರಿ ಸಚಿವರಾಗಿ ಬಂದರೆ ಸ್ಥಳೀಯ ಸಮಸ್ಯೆಗಳ ಬಗ್ಗೆ ಅರಿವಿರುವುದಿಲ್ಲ ಮತ್ತು ಅಭಿವೃದ್ಧಿ ಕಾರ್ಯಗಳೆಡೆಗೆ ಹೆಚ್ಚು ಆಸಕ್ತಿ ತೋರುವುದಿಲ್ಲ. ಆದ್ದರಿಂದ ಜಿಲ್ಲೆಯವರಿಗೇ ಸಚಿವ ಸ್ಥಾನ ಮತ್ತು ಉಸ್ತುವಾರಿ ಜವಾಬ್ದಾರಿ ನೀಡಬೇಕು ಎಂದು ಒತ್ತಾಯಿಸಿದರು.

ಈ ಹಿಂದೆ ಕೊಡಗು ಮೂರು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿತ್ತು, ಆದರೆ ಕ್ಷೇತ್ರ ಪುನರ್ ವಿಂಗಡಣೆ ಸಂದರ್ಭ ಎರಡು ಕ್ಷೇತ್ರಗಳಿಗೆ ಸೀಮಿತಗೊಂಡಿತು. ಇದರಿಂದ ರಾಜಕೀಯವಾಗಿ ಮಾತ್ರವಲ್ಲದೆ ಅಭಿವೃದ್ಧಿ ಕಾರ್ಯಗಳಲ್ಲೂ ಜಿಲ್ಲೆ ಕುಂಠಿತಗೊಂಡಿದೆ. ಅಲ್ಲದೆ ಕ್ಷೇತ್ರಗಳು ಕೊಡವ ಮತ್ತು ಗೌಡ ಅಭ್ಯರ್ಥಿಗಳಿಗೆ ಸೀಮಿತವಾಗುತ್ತಿದೆ. ಜಿಲ್ಲೆಯಲ್ಲಿ ಶೇ.50 ರಷ್ಟು ಮತದಾರರು ಇತರ ಜನಾಂಗದವವರಾಗಿದ್ದು, ಮೂರು ಕ್ಷೇತ್ರಗಳು ರಚನೆಯಾದರೆ ಇತರರಿಗೆ ಒಂದು ಕ್ಷೇತ್ರವನ್ನು ಸೀಮಿತಗೊಳಿಸಬಹುದಾಗಿದೆ ಎಂದು ಹರೀಶ್ ಜಿ.ಆಚಾರ್ಯ ಅಭಿಪ್ರಾಯಪಟ್ಟರು.

ಪ್ರತ್ಯೇಕ ಲೋಕಸಭಾ ಕ್ಷೇತ್ರ ಹೊಂದುವ ಎಲ್ಲಾ ಅರ್ಹತೆಗಳು ಕೊಡಗು ಜಿಲ್ಲೆಗೆ ಇದ್ದರೂ ಇತರ ಜಿಲ್ಲೆಯೊಂದಿಗೆ ಹಂಚಿಕೆ ಮಾಡಲಾಗುತ್ತಿದೆ. ಈ ಹಿಂದೆ ಮಂಗಳೂರು ಲೋಕಸಭಾ ಕ್ಷೇತ್ರದೊಂದಿಗೆ ಗುರುತಿಸಿಕೊಂಡಿದ್ದ ಕೊಡಗನ್ನು ನಂತರ ಮೈಸೂರು ಕ್ಷೇತ್ರಕ್ಕೆ ಸೇರಿಸಲಾಯಿತು. ಇದು ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಸೂಕ್ತ ಕ್ರಮವಲ್ಲ. ಪ್ರತ್ಯೇಕ ಕ್ಷೇತ್ರ ಹೊಂದಲು ಎಲ್ಲಾ ಅರ್ಹತೆ ಇರುವುದರಿಂದ ಕೊಡಗು ಲೋಕಸಭಾ ಕ್ಷೇತ್ರವನ್ನು ಘೋಷಿಸಬೇಕೆಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಪ್ರಮುಖರಾದ ಚೌರೀರ ರಮೇಶ್, ಐ.ಸೋಮನಾಥ್, ಪಳಂಗಂಡ ಈಶ್ವರ್ ಹಾಗೂ ರವಿ ಅಪ್ಪಯ್ಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here