ಮಂಗಳೂರು: ನಗರದ ಬಜ್ಪೆ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಡೆ ರಹಿತ ಪಾರ್ಕಿಂಗ್ ವ್ಯವಸ್ಥೆಗಾಗಿ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವ ಎಎನ್ಪಿಆರ್ ವ್ಯವಸ್ಥೆ ಮಾಡಲಾಗಿದೆ. ನಿಲ್ದಾಣದ ಪ್ರವೇಶ ಹಾಗೂ ನಿರ್ಗಮನ ಮಾರ್ಗಗಳನ್ನು ಫಾಸ್ಟ್ ಟ್ಯಾಗ್ ಲೇನ್ಗಳಾಗಿ ಪರಿವರ್ತಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಪಾರ್ಕಿಂಗ್ ಪೂರ್ವ ಪಾವತಿ ಕೌಂಟರ್ನಲ್ಲಿ ಪಾವತಿ ಸೌಲಭ್ಯ ಹಾಗೂ ನಿರ್ಗಮನ ಟೋಲ್ ಬೂತ್ಗಳಲ್ಲಿ ಹೆಚ್ಚುವರಿ ಲೇನ್ ವ್ಯವಸ್ಥೆ ಮಾಡಲಾಗಿದೆ.
ಎಎನ್ಪಿಆರ್ ವ್ಯವಸ್ಥೆ ಪ್ರವೇಶ ಬೂತ್ಗಳಲ್ಲಿ ವಿಮಾನ ನಿಲ್ದಾಣವನ್ನು ಪ್ರವೇಶಿಸುವ ವಾಹನಗಳ ನಂಬರ್ ಪ್ಲೇಟ್ ಅನ್ನು ಸ್ವಯಂ ಚಾಲಿತವಾಗಿ ದಾಖಲಿಸಿಕೊಂಡು, ವಾಹನವು 1 ನಿಮಿಷದ ಕಡ್ಡಾಯ ಉಚಿತ ಪ್ರಯಾಣದ ಸಮಯದೊಳಗೆ ವಿಮಾನ ನಿಲ್ದಾಣದಿಂದ ನಿರ್ಗಮಿಸುವುದಾದರೆ ನಿರ್ಗಮನ ಬೂತ್ಗಳಲ್ಲಿನ ಬೂಮ್ ತಡೆಗೋಡೆ ಸ್ವಯಂಚಾಲಿತವಾಗಿ ತೆರೆಯುತ್ತದೆ.
ಈ ಸಮಯವನ್ನು ಮೀರಿ ವಾಹನವನ್ನು ಪಾರ್ಕಿಂಗ್ ಮಾಡಬೇಕಾದರೆ ನಿಗದಿತ ಪಾರ್ಕಿಂಗ್ ಶುಲ್ಕ ಪಾವತಿಸುವ ಆಯ್ಕೆ ಮಾಡಲಾಗಿದೆ. ಪಾರ್ಕಿಂಗ್ ಪೂರ್ವ-ಪಾವತಿ ಕೌಂಟರ್ ನಲ್ಲಿ ಪಾರ್ಕಿಂಗ್ ಶುಲ್ಕವನ್ನು ಪಾವತಿಸಿದರೆ, ಬಳಕೆದಾರರು ನಿರ್ಗಮನ ಬೂತ್ ನಲ್ಲಿ ರಸೀದಿ ಸ್ಕ್ಯಾನ್ ಮಾಡುವ ಮೂಲಕ ಪಾರ್ಕಿಂಗ್ ಸ್ಥಳದಿಂದ ನಿರ್ಗಮಿಸಲು ಹೆಚ್ಚುವರಿ 1 ನಿಮಿಷದ ಸಮಯ ನೀಡಲಾಗುತ್ತದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.
ಫಾಸ್ಟ್ ಟ್ಯಾಗ್ ಪಾವತಿ ವಿಧಾನವನ್ನು ಆಯ್ಕೆ ಮಾಡಿಕೊಂಡಲ್ಲಿ ಮತ್ತು ಫಾಸ್ಟ್ ಟ್ಯಾಗ್ ಲೇನ್ ಮೂಲಕ ವಿಮಾನ ನಿಲ್ದಾಣ ಪ್ರವೇಶಕ್ಕೆ ಗ್ರಾಹಕರು ತಡೆರಹಿತ ಮಾರ್ಗವನ್ನು ಪಡೆಯಬಹುದು. ವಿಮಾನ ನಿಲ್ದಾಣವು ಎಲ್ಲಾ ಪ್ರವೇಶ ಮತ್ತು ನಿರ್ಗಮನ ಮಾರ್ಗಗಳನ್ನು ಫಾಸ್ಟ್ಯಾಗ್ ತಂತ್ರಜ್ಞಾನದೊಂದಿಗೆ ಒಳಗೊಳ್ಳುವ ಪ್ರಕ್ರಿಯೆಯಲ್ಲಿದೆ ಮತ್ತು ಶೀಘ್ರದಲ್ಲೇ ಈ ಯೋಜನೆ ಜಾರಿಗೆ ತರಲಾಗುವುದು ಎಂದು ತಿಳಿಸಿದ್ದಾರೆ.