ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ದ್ವೇಷ ಆರೋಪ ಹೊಂದಿರುವ ಎಲ್ಲಾ ಕೊಲೆ ಪ್ರಕರಣ ಗಳನ್ನು ಎಸ್ಐಟಿ ಮೂಲಕ ತನಿಖೆ ನಡೆಸುವಂತೆ ಮಾಜಿ ಸಚಿವ ಬಿ.ರಮಾನಾಥ ರೈ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ದಲ್ಲಿ ಕಾಂಗ್ರೆಸ್ ಆಡಳಿತ ಆರಂಭಿಸಿ ಎರಡು ತಿಂಗಳೂ ಪೂರ್ಣ ಗೊಂಡಿಲ್ಲ ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದರೆ ಹತ್ಯೆಗಳು ಹೆಚ್ಚು ನಡೆಯುತ್ತಿವೆ ಎನ್ನುವ ಆರೋಪ ಮಾಡಲು ಆರಂಭಿಸಿದ್ದಾರೆ. ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯರೇ ಹತ್ಯೆ ಮಾಡಿದ್ದಾರೆ ಎಂದು ಜನ ಭ್ರಮಿಸುವ ರೀತಿಯಲ್ಲಿ ಆರೋಪಿಸುತ್ತಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯ ನವರು ತಮ್ಮ ರಾಜಕೀಯ ಜೀವನದಲ್ಲಿ ಯಾವುದೇ ಸಂದರ್ಭದಲ್ಲಿ ಹಿಂಸೆಗೆ ಪ್ರಚೋದನೆ ನೀಡುವ ಮಾತುಗಳನ್ನು ಆಡಿಲ್ಲ. ಆದರೆ ಬಿಜೆಪಿ ರಾಜ್ಯಾಧ್ಯಕ್ಷರು ಚುನಾವಣೆ ಹತ್ತಿರ ಬರುತ್ತಿದ್ದಂತೆ ಈ ರೀತಿ ಅಪಪ್ರಚಾರ ಮಾಡಿ ಜನರಿಗೆ ಭ್ರಮೆ ಹುಟ್ಟಿಸುತ್ತಿದ್ದಾರೆ. ಈ ರೀತಿಯ ರಾಜಕೀಯಕ್ಕೆ ಒಂದು ತಾರ್ಕಿಕ ಅಂತ್ಯ ಹಾಡಬೇಕಾದರೆ ಜಿಲ್ಲೆಯಲ್ಲಿ ಈ ಹಿಂದೆ ಕೋಮು ದ್ವೇಷದ ಹತ್ಯೆ ಪ್ರಕರಣಗಳಾದ ಹರೀಶ್ ಪೂಜಾರಿ, ವಿನಾಯಕ ಬಾಳಿಗ, ಜಲೀಲ್ ಕೊರೋಪಾಡಿ, ದೀಪಕ್, ಪ್ರವೀಣ್ ನೆಟ್ಟಾರ್, ಫಾಝಿಲ್, ಮಸೂದ್ ಸೇರಿದಂತೆ ಎಲ್ಲಾ ಪ್ರಕಣಗಳನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಬೇಕು. ಈ ಹತ್ಯೆಯ ಪಿತೂರಿಯಲ್ಲಿ ಭಾಗಿಯಾದವರಿಗೂ ಶಿಕ್ಷೆ ಯಾಗಬೇಕು. ಆಗ ಮಾತ್ರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಸಾಧ್ಯ. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಜಿಲ್ಲೆಯ ಸಮಾನ ಮನಸ್ಕರ ತಂಡ ರಾಜ್ಯದ ಮುಖ್ಯ ಮಂತ್ರಿ ಯನ್ನು ಭೇಟಿಯಾಗಲಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನ ಗೊಳ್ಳುತ್ತಿರುವ ಹಂತದಲ್ಲಿ ಬಿಜೆಪಿ ಮುಖಂಡರು ಸರ್ಕಾರವನ್ನು ಅಸ್ಥಿರ ಗೊಳಿಸಲು ಅಪಪ್ರಚಾರದ ತಂತ್ರದಲ್ಲಿ ತೊಡಗಿದ್ದಾರೆ. ಬಿಜೆಪಿ ಜನರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಪ್ರಯತ್ನದಲ್ಲಿ ತೊಡಗಿದೆ ಎಂದು ರಮಾನಾಥ ರೈ ಆರೋಪಿಸಿದರು.
ಈ ಹಿಂದೆ ಜಿಲ್ಲೆಯಲ್ಲಿ ನಡೆದಿರುವ ಧರ್ಮ, ಮತೀಯ ದ್ವೇಷದ ಹತ್ಯೆಯ ಪ್ರಕರಣದಲ್ಲಿ ಯಾವುದೇ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿಲ್ಲ ಎನ್ನುವುದು ತನಿಖೆ ಬಹಿರಂಗ ಪಡಿಸಿದೆ. ಬದಲಾಗಿ ಬಿಜೆಪಿ ಪಕ್ಷದ ಬೆಂಬಲಿತ ಮತೀಯ ಸಂಘಟನೆಗಳ ಸದಸ್ಯರು ಗುರುತಿಸಿಕೊಂಡಿರುವುದು ಬಹಿರಂಗವಾಗಿದೆ. ಹೀಗಿರುವಾಗ ಬಿಜೆಪಿ ರಾಜಾಧ್ಯಕ್ಷರು ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಪಕ್ಷ ಮತ್ತು ಮುಖಂಡ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಸಾಮರಸ್ಯ ಬಯಸುವ ಪಕ್ಷ. ಯಾವುದೇ ಸಂದರ್ಭದಲ್ಲಿ ಹಿಂಸೆಗೆ ಪ್ರಚೋದನೆ ನೀಡಿಲ್ಲ. ಯಾರು ಪ್ರಚೋದನಕಾರಿ ಭಾಷಣ ಮಾಡಿರುವುದು ? ಯಾವ ಪಕ್ಷ ಧರ್ಮ, ಕೋಮು ದ್ವೇಷದ ರಾಜಕೀಯ ಮಾಡುತ್ತಿದ್ದಾರೆ ಎನ್ನುವುದು ಜಿಲ್ಲೆಯ ಜನತೆಗೆ ತಿಳಿದಿದೆ. ಕಾಂಗ್ರೆಸ್ ಈ ರೀತಿಯ ರಾಜಕೀಯ ಮಾಡಿಲ್ಲ. ಜಿಲ್ಲೆಯ ಜನರಿಗೆ ಅತ್ಯಂತ ಹೆಚ್ಚು ಸರಕಾರಿ ಸೌಲಭ್ಯಗಳನ್ನು ನೀಡಿದೆ. ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಲ್ಲೂ ದ.ಕ ಜಿಲ್ಲೆಯ ಜನರೇ ಮುಂದಿದ್ದಾರೆ. ಬಿಜೆಪಿಯ ಈ ರೀತಿಯ ಅಪಪ್ರಚಾರವನ್ನು ಇನ್ನಾದರೂ ನಿಲ್ಲಿಸಲು ಮನವಿ ಮಾಡುವುದಾಗಿ ಹಾಗೂ ಇಂತಹ ತಂತ್ರಗಾರಿಕೆಯ ವಿರುದ್ಧ ಜನ ಜಾಗೃತರಾಗಬೇಕು ಎಂದರು.
ಮಾಜಿ ಮೇಯರ್ ಶಶಿಧರ್ ಹೆಗ್ಡೆಕಾಂಗ್ರೆಸ್ ಪದಾಧಿಕಾರಿಗಳಾದ ಶಾಹುಲ್ ಹಮೀದ್, ಸುರೇಂದ್ರ ಕಂಬ್ಳಿ, ಬಿ ಎಲ್ ಪಿ ಪದ್ಮನಾಭ ಕೋಟ್ಯಾನ್, ಜಯಶೀಲಾ ಅಡ್ಯಂತಾಯ, ಕುಮಾರಿ ಅಪ್ಪಿ, ಗಣೇಶ್ ಪೂಜಾರಿ, ಶಬೀರ್ ಸಿದ್ಧ ಕಟ್ಟೆ, ಶುಭೋದಯ ಆಳ್ವಾ ಉಪಸ್ಥಿತರಿದ್ದರು.