ಮಂಗಳೂರು(ಬೆಂಗಳೂರು): ಗೃಹಲಕ್ಷ್ಮಿ ಯೋಜನೆ ನೋಂದಣಿ ಪ್ರಕ್ರಿಯೆಗೆ ಇಂದು ಚಾಲನೆ ಸಿಗಲಿದೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸಂಜೆ 5 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯೋಜನೆಯ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಲಿದ್ದಾರೆ. ಯೋಜನೆಯ ಫಲಾನುಭವಿಗಳಿಗೆ ಮಂಜೂರಾತಿ ಆದೇಶವನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಹಂಚಿಕೆ ಮಾಡಲಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಯೋಜನೆಯ ಲಾಂಛನ ಮತ್ತು ಪೋಸ್ಟರ್ ಅನಾವರಣಗೊಳಿಸಲಿದ್ದಾರೆ. ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ರಾಜೀವ್ ಚಂದ್ರಶೇಖರ್, ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಶಾಸಕ ರಿಜ್ವಾನ್ ಅರ್ಷದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಗೃಹಲಕ್ಷ್ಮಿ ನೋಂದಣಿಗೆ ಯಾರು ಪರದಾಡಬೇಕಿಲ್ಲ. ಯಜಮಾನಿಗೆ ಎಸ್‍ಎಂಎಸ್ ಮೂಲಕ ದಿನಾಂಕ, ಸಮಯ, ನೋಂದಣಿ ಸ್ಥಳದ ಮಾಹಿತಿ ಕಳುಹಿಸಲಾಗುತ್ತದೆ. ಪಡಿತರ ಚೀಟಿ ಸಂಖ್ಯೆ, ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಮಾಹಿತಿ ನೀಡಬೇಕಾಗುತ್ತದೆ. ನಿಗದಿತ ದಿನ ನೋಂದಣಿ ಸಾಧ್ಯವಾಗದಿದ್ದಲ್ಲಿ ಯಾವುದೇ ದಿನ ಸಂಜೆ ನೋಂದಣಿ ಮಾಡಿಸಬಹುದು. ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಸಂಪೂರ್ಣ ಉಚಿತ
ಪಡಿತರ ಚೀಟಿಯಲ್ಲಿರುವ ಯಜಮಾನಿ ನೋಂದಾಯಿಸಿಕೊಳ್ಳಲು ಅರ್ಹರಾಗಿದ್ದಾರೆ.
ಫಲಾನುಭವಿ ಮಹಿಳೆ, ಅವರ ಪತಿ ಆದಾಯ ತೆರಿಗೆ ಪಾವತಿದಾರನಾಗಿರಬಾರದು.
ಫಲಾನುಭವಿ ಮಹಿಳೆ, ಅವರ ಪತಿ ಜಿಎಸ್‍ಟಿ ತೆರಿಗೆ ಪಾವತಿದಾರನಾಗಿರಬಾರದು.
ನೋಂದಾಯಿತ ಖಾತೆಗೆ ಪ್ರತಿ ತಿಂಗಳು ಡಿಬಿಟಿ ಮೂಲಕ 2000 ರೂ. ಜಮೆ.
ಫಲಾನುಭವಿ ಇಚ್ಚಿಸಿದಲ್ಲಿ ಪರ್ಯಾಯ ಬ್ಯಾಂಕ್ ಖಾತೆ ನೀಡಬಹುದು.
ಪರ್ಯಾಯ ಬ್ಯಾಂಕ್ ಖಾತೆಗೆ ಆರ್‌ಟಿಜಿಎಸ್ ಮೂಲಕ ಪ್ರತಿ ತಿಂಗಳು 2000 ರೂ.ಜಮೆ.
ನಾಡಕಚೇರಿ, ಗ್ರಾಮ ಒನ್, ಬೆಂಗಳೂರು ಒನ್ ಸಿಬ್ಬಂದಿಗೂ ತರಬೇತಿ ನೀಡಿದ್ದು, ಗೃಹಲಕ್ಷ್ಮೀ ಯೋಜನೆಯಡಿ ಮನೆ ಯಜಮಾನಿಗೆ 2 ಸಾವಿರ ರೂ. ಪಡೆಯಲು, ಮನೆ ಯಜಮಾನಿಯ ಪತಿಯ ಆಧಾರ್ಕಾರ್ಡ್ ಕೂಡ ಬೇಕಾಗುತ್ತದೆ. ಬೇರೆ ಖಾತೆಗೆ ಹಣ ಜಮಾ ಮಾಡಬಯಸುವವರು ಪಾಸ್ಬುಕ್ ಫೋಟೋ ಕಾಪಿ ಕೊಡಬೇಕು. ಯೋಜನೆಯ ಉಚಿತ ಲಾಭ ಪಡೆದುಕೊಳ್ಳಲು ಸಹಾಯವಾಣಿ ಸಂಖ್ಯೆ. 8147500500ಕ್ಕೆ ಪಡಿತರ ಚೀಟಿ ಸಂಖ್ಯೆ SMS ಮಾಡಿದಲ್ಲಿ, ಕೂಡಲೇ ಇದು ಸ್ಥಳ, ಗೊತ್ತುಪಡಿಸಿದ ದಿನಾಂಕ, ಸಮಯ ಸಂದೇಶ ರವಾನಿಸುತ್ತದೆ. ಗೊಂದಲವಿದ್ದರೆ 1902 ನಂಬರ್ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಿ ಎಂದು ಮಹಿಳಾ & ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ
ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಹಾಗೂ ಅಮೃತ ಜ್ಯೋತಿ ಯೋಜನೆಯ ಫಲಾನುಭವಿಗಳಿಗೂ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಸೌಲಭ್ಯ ವಿಸ್ತರಿಸಿ ಸರಕಾರ ಆದೇಶ ಹೊರಡಿಸಿದೆ. ಭಾಗ್ಯಜ್ಯೋತಿ ಹಾಗೂ ಕುಟೀರ ಜ್ಯೋತಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಈವರೆಗೆ ಮಾಸಿಕ 40 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಈ ಯೋಜನೆಯ ಫಲಾನುಭವಿಗಳಿಗೆ ರಾಜ್ಯದ ಮಾಸಿಕ ಸರಾಸರಿ ಬಳಕೆಯಾದ ಶೇ.53 ಯೂನಿಟ್ ಜತೆಗೆ ಹೆಚ್ಚುವರಿಯಾಗಿ ಶೇ.10ರಷ್ಟು ವಿದ್ಯುತ್ ಅನ್ನು ಉಚಿತವಾಗಿ ನೀಡುವ ಸಂಬಂಧ ಸೋಮವಾರ ಇಂಧನ ಇಲಾಖೆ ಆದೇಶ ಹೊರಡಿಸಿದೆ.