ಹೆದ್ದಾರಿ ಗುಂಡಿಗೆ ದ್ವಿಚಕ್ರ ಸವಾರ ಬಲಿ – ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಮೇಲೆ ಕ್ರಮಕ್ಕೆ ಹೋರಾಟ ಸಮಿತಿ ಆಗ್ರಹ

ಮಂಗಳೂರು: ಬಿಸಿ ರೋಡ್ ರಾಷ್ಟ್ರೀಯ ಹೆದ್ದಾರಿಯ ಪಣಂಬೂರು ಸಮೀಪ ರಸ್ತೆ ನಡುವೆ ದಿಢೀರ್ ಎದುರಾದ ಹೊಂಡ ತಪ್ಪಿಸಲು ಯತ್ನಿಸಿದ ದ್ವಿಚಕ್ರ ವಾಹನ ಸವಾರ ರಸ್ತೆಗೆ ಉರುಳಿ ಬಿದ್ದು ಹಿಂಬದಿಯ ಘನವಾಹನದಡಿ ಸಿಲುಕಿ ಸಾವನ್ನಪ್ಪಿದ ದಾರುಣ ಘಟನೆಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಬೇಜವಾಬ್ದಾರಿತನ, ಕರ್ತವ್ಯಲೋಪವೇ ನೇರ ಕಾರಣವಾಗಿದ್ದು, ಸಂಬಂಧ ಪಟ್ಟ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು, ಅಪಘಾತಕ್ಕೆ ಬಲಿಯಾದ ಸವಾರನ ಕುಟುಂಬಕ್ಕೆ‌ ಹೆದ್ದಾರಿ ಪ್ರಾಧಿಕಾರ ಪರಿಹಾರ ಧನ ಒದಗಿಸಬೇಕು ಎಂದು ‘ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್’ ಆಗ್ರಹಿಸಿದೆ.

ಬಿ ಸಿ ರೋಡ್ ಸುರತ್ಕಲ್ ರಾಷ್ಟ್ರೀಯ ಹೆದ್ದಾರಿ ಟೋಲ್ ಸಂಗ್ರಹದ ರಸ್ತೆಯಾಗಿದ್ದು ಬಿ ಸಿ ರೋಡ್ ನಲ್ಲಿ ಈಗಲೂ ಟೋಲ್ ಸಂಗ್ರಹ ನಡೆಯುತ್ತಿದೆ‌.‌ ಹೆದ್ದಾರಿ ಪ್ರಾಧಿಕಾರವು ಇರ್ಕಾನ್ ಮೂಲಕ ನಿರ್ಮಿಸಿದ ಈ ಹೆದ್ದಾರಿ ನಿರ್ಮಾಣವೇ ತೀರಾ ಕಳಪೆಯಾಗಿದ್ದು, ಪ್ರತಿವರ್ಷ ಮಳೆಗಾಲದ ಆರಂಭದಲ್ಲೇ ಬೃಹತ್ ಸಂಖ್ಯೆಯ ಹೊಂಡಗಳು ರಸ್ತೆಯಲ್ಲಿ ಕಾಣಿಸಿಕೊಳ್ಳುತ್ತವೆ. ಇದರಿಂದ ಅಪಘಾತಗಳು ನಡೆದು ಹತ್ತಾರು ಸಂಖ್ಯೆಯ ಸಾವುನೋವುಗಳು ಸಂಭವಿಸಿವೆ. ಪ್ರತಿಬಾರಿಯೂ ಪ್ರತಭಟನೆ, ಹೋರಾಟಗಳನ್ನು ನಡೆಸಿಯೆ ಹೊಂಡ ಮುಚ್ಚಿಸಬೇಕಾದ ಅನಿವಾರ್ಯ ಸ್ಥಿತಿ ಇಲ್ಲಿದೆ. ಮಳೆಗಾಲದ ಮೂರ್ನಾಲ್ಕು ತಿಂಗಳು ಈ ರಸ್ತೆಯ ಪ್ರಯಾಣ ಮೃತ್ಯುವಿನಡೆಗೆ ಸರಸ ಎಂಬಂತಾಗಿದೆ.

ವರ್ಷಕ್ಕೆ ಹತ್ತಾರು ಕೋಟಿ ರೂಪಾಯಿ ಈ ರಸ್ತೆಯ ನಿರ್ವಹಣೆಗಾಗಿ ಹೆದ್ದಾರಿ ಪ್ರಾಧಿಕಾರ ಮೀಸಲಿಡುತ್ತದೆ. ಆದರೆ ಗುಣಮಟ್ಟದ ನಿರ್ವಹಣೆ, ಮಳೆಗಾಲಕ್ಕೆ ಮುಂಚಿತವಾಗಿ ದುರಸ್ಥಿಗಳು ನಡೆಯುವುದೇ ಇಲ್ಲ. ಈ ನಿಧಿಯು ಬಹುತೇಕ ಭ್ರಷ್ಟಾಚಾರದ ಪಾಲಾಗುತ್ತಿದೆ. ಈ ಭಾಗದ ಸಂಸದ, ಶಾಸಕರುಗಳ ಬೇಜವಾಬ್ದಾರಿತನ, ಅರಿವಿನ ಕೊರತೆ, ಜನಾಗ್ರಹವನ್ನು ಲೆಕ್ಕಿಸದ ದರ್ಪದ ನಡೆಗಳು ರಾಷ್ಟ್ರೀಯ ಹೆದ್ದಾರಿಯ ಇಂತಹ ದುಸ್ಥಿತಿಗೆ ಕಾರಣವಾಗಿದೆ‌.

ಈ ಬಾರಿಯ ಮೊದಲ ಮಳೆಗೆ ನೂರಾರು ಸಂಖ್ಯೆಯಲ್ಲಿ ಹೊಂಡಗಳು ಬಿದ್ದಿರುವ ಕುರಿತು ಸಂಬಂಧ ಪಟ್ಟವರ ಗಮನ ಸೆಳೆದು, ಉಂಟಾಗುವ ಅಪಾಯಗಳ ಬಗ್ಗೆ ಎಚ್ಚರಿಸಿದ್ದರೂ ಪ್ರಾಧಿಕಾರದ ಅಧಿಕಾರಿಗಳು ತೀರಾ ಬೇಜವಾಬ್ದಾರಿತನ ತೋರಿರುತ್ತಾರೆ. ಕಳೆದ ಹದಿನೈದು ದಿನಗಳಿಂದ ಸರಣಿ ಅಪಘಾತಗಳು ನಡೆಯುತ್ತಿದ್ದರೂ ಯಾವುದೇ ತುರ್ತು ಕ್ರಮಗಳನ್ನು ಕೈಗೊಂಡಿಲ್ಲ. ಇಂದು ಅಪಾಘಾತಕ್ಕೆ ಸವಾರ ಬಲಿಯಾದ ನಂತರ ಬೈಕ್ ಉರುಳಿದ ಹೊಂಡಕ್ಕೆ ತೇಪೆಹಾಕಿ ಜನರ ಕಣ್ಣಿಗೆ ಮಣ್ಣೆರೆಚುವ ಯತ್ನ ನಡೆಸಿರುತ್ತಾರೆ.. ಇಂದಿನ ಅಪಫಾತ, ಸವಾರನ ಸಾವಿಗೆ ಹೆದ್ದಾರಿ ಪ್ರಾಧಿಕಾರದ ಸಂಬಂಧ ಪಟ್ಟ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಜರುಗಿಸಬೇಕು, ಬಲಿಯಾದ ದ್ವಿಚಕ್ರ ಸವಾರನ ಕುಟುಂಬಕ್ಕೆ ಪರಿಹಾರ ಒದಗಿಸಬೇಕು, ಬಿ ಸಿ ರೋಡ್, ಸುರತ್ಕಲ್ ಹೆದ್ದಾರಿಯ ಎಲ್ಲಾ ಗುಂಡಿಗಳನ್ನು ಗುಣಮಟ್ಟದ ಕಾಮಗಾರಿಯ ಮೂಲಕ ತಕ್ಷಣವೆ ಮುಚ್ಚಬೇಕು ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಆಗ್ರಹಿಸಿದೆ, ಇಲ್ಲದಿದ್ದಲ್ಲಿ ಹೆದ್ದಾರಿ ಪ್ರಾಧಿಕಾರದ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದೆ‌.

LEAVE A REPLY

Please enter your comment!
Please enter your name here