ಮಂಗಳೂರು: ಜು.12 ರಂದು ರಾತ್ರಿ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಬೆಟ್ಟಿನ ಹಳೆಯ ವಾಹನದ ಮಾರಾಟ ಮತ್ತು ಖರೀದಿ ಶೋರೂಂ ನಿಂದ 2 ಕಾರುಗಳನ್ನು ಕದ್ದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರತ್ಕಲ್ ಠಾಣಾ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಮಂಗಳೂರು ತಾಲೂಕಿನ ಕಿನ್ನಿಪದವು ನಿವಾಸಿ ಮಹಮ್ಮದ್ ಶಫೀಕ್ (21) ಎಂದು ಗುರುತಿಸಲಾಗಿದೆ.
ಜು.22 ರಂದು ಅಪ್ರಾಪ್ತ ಬಾಲಕನಿಂದ ಕಳವಾಗಿದ್ದ ಸ್ವಿಫ್ಟ್ ಕಾರನ್ನು ವಶಕ್ಕೆ ಪಡೆದ ಪೊಲೀಸರು ಆತ ನೀಡಿದ ಮಾಹಿತಿಯಂತೆ ಆರೋಪಿ ಶಫೀಕ್ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ವೇಳೆ ಮರಕಡ ಬಸ್ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಬಳಿಕ ಆತನ ವಿಚಾರಣೆ ನಡೆಸಿದ ಪೊಲೀಸರು ತೊಕ್ಕೊಟ್ಟು ಬಸ್ ನಿಲ್ದಾಣದ ಬಳಿಯಲ್ಲಿ ಶೋರೂಂ ನಿಂದ ಕಳವು ಮಾಡಿದ್ದ ಕ್ರೆಟಾ ಕಾರು ಮತ್ತು ಕೃತ್ಯಕ್ಕೆ ಉಪಯೋಗಿಸಿದ ಸುತ್ತಿಗೆ, ಕೃತ್ಯದ ಸಮಯದಲ್ಲಿ ಧರಿಸಿದ್ದ ಹೆಲ್ಮೆಟ್, ಕೋಟ್, ಕೈ ಕವಚ, ಮಾಸ್ಕನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಶಫೀಕ್ ವರ್ಷದ ಹಿಂದೆ ಮೂಡಬಿದ್ರ ಠಾಣಾ ವ್ಯಾಪ್ತಿಯ ಕೆಸರು ಗದ್ದೆ ಎಂಬಲ್ಲಿಂದ ಕಳವು ಮಾಡಿದ್ದ ದ್ವಿಚಕ್ರ ವಾಹನವನ್ನು ಆತನಿಂದ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ವಾಹನಗಳ ಒಟ್ಟು ಮೌಲ್ಯ 15.50 ಲಕ್ಷ ರೂಪಾಯಿ ಆಗಿರುತ್ತದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯವು 3 ದಿನಗಳ ಪೊಲೀಸ್ ಕಸ್ಟಡಿ ನೀಡಿದೆ.
ಜು.12 ರ ರಾತ್ರಿ ಸುರತ್ಕಲ್ ಹೊಸಬೆಟ್ಟಿನ ಕಾರ್ ಮಾರ್ಟ್ ಗೆ ದ್ವಿಚಕ್ರ ವಾಹನದಲ್ಲಿ ಬಂದ ಕಳ್ಳರು ಶೋರೂಂನ ಗಾಜಿನ ಬಾಗಿಲನ್ನು ಒಡೆದು ಒಳಪ್ರವೇಶಿಸಿ ಟೇಬಲ್ ಮೇಲಿದ್ದ ಮೊಬೈಲ್ ಫೋನ್, ಲ್ಯಾಪ್ ಟಾಪ್, ಪ್ರಿಂಟರ್, ಕ್ರೆಟಾ ಕಾರು ಮತ್ತು ಸ್ವಿಫ್ಟ್ ಕಾರನ್ನು ಕಳವು ಮಾಡಿದ್ದು ಕಾರ್ ಮಾರ್ಟ್ ಮಾಲಕ ಆಬಿದ್ ಅಹಮ್ಮದ್ ಸೂರಲ್ಪಾಡಿ ನೀಡಿದ ದೂರಿನಂತೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಳವು ಪ್ರಕರಣದ ಪತ್ತೆಗೆ ಮಂಗಳೂರು ಪೊಲೀಸ್ ಆಯುಕ್ತ ಕುಲ್ ದೀಪ್ ಕುಮಾರ್ ಜೈನ್ ಅವರ ಮಾರ್ಗದರ್ಶನದಲ್ಲಿ ಉಪ ಪೊಲೀಸ್ ಆಯುಕ್ತರಾದ ಅಂಶು ಕುಮಾರ್ ಮತ್ತು ಬಿ ಪಿ ದಿನೇಶ್ ಕುಮಾರ್ ನಿರ್ದೇಶನದಂತೆ ಮಂಗಳೂರು ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಮನೋಜ್ ಕುಮಾರ್ ನಾಯ್ಕ್ ಮಾರ್ಗದರ್ಶನದಲ್ಲಿ ಸುರತ್ಕಲ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಪಿಎಸ್‌ಐ ಗಳಾದ ರಘು ನಾಯಕ್, ಅರುಣ್ ಕುಮಾರ್, ಎಎಸ್‌ಐ ತಾರನಾಥ್, ಹೆಡ್ ಕಾನ್ಸ್ ಟೇಬಲ್ ಗಳಾದ ಅಣ್ಣಪ್ಪ, ಉಮೇಶ್ ಕಾನ್ಸ್ ಟೇಬಲ್ ಗಳಾದ ಕಾರ್ತಿಕ್, ಸುನೀಲ್, ಮಂಜುನಾಥ್, ನಾಗರಾಜ್ ಭಾಗವಹಿಸಿರುತ್ತಾರೆ.