ಕುತೂಹಲ ಮೂಡಿಸಿದ ಡಿಕೆಶಿ– ಬಿಕೆ ಹರಿಪ್ರಸಾದ್ ಭೇಟಿ,ಮಾತುಕತೆ

ಮಂಗಳೂರು(ಬೆಂಗಳೂರು): ವಿಧಾನ ಪರಿಷತ್‌ ಕಾಂಗ್ರೆಸ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಮಂಗಳವಾರ ರಾತ್ರಿ ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ.

ಸಚಿವ ಸಂಪುಟದಲ್ಲಿ ಸ್ಥಾನ ಸಿಗದ ಕಾರಣಕ್ಕೆ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿ.ಕೆ. ಹರಿಪ್ರಸಾದ್ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದರು. ಬಿಲ್ಲವ, ಈಡಿಗ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿದ್ದ ಹರಿಪ್ರಸಾದ್, ‘ನನಗೆ ಸಿಎಂ ಮಾಡುವುದೂ ಗೊತ್ತು. ಅಧಿಕಾರದಿಂದ ಇಳಿಸುವುದೂ ಗೊತ್ತು. ನಮ್ಮ ಸಮುದಾಯದವರು ರಾಜಕೀಯವಾಗಿ ಮುಂದೆ ಬರುತ್ತಿಲ್ಲ. ನಾವು ಯಾರದ್ದೋ ಷಡ್ಯಂತ್ರಕ್ಕೆ ಬಲಿಯಾಗುತ್ತಿದ್ದೇವೆ ಅನಿಸುತ್ತಿದೆ’ ಎಂದಿದ್ದರು. ಈ ಹೇಳಿಕೆ ಕಾಂಗ್ರೆಸ್‌ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಹರಿಪ್ರಸಾದ್‌ ಅವರ ಹೇಳಿಕೆ ಕಾಂಗ್ರೆಸ್‌ ವಲಯದಲ್ಲಿ ಆರೋಪ– ಪ್ರತ್ಯಾರೋಪಕ್ಕೆ ವಸ್ತುವಾಗುತ್ತಿದ್ದಂತೆ, ಹರಿಪ್ರಸಾದ್‌ ಅವರನ್ನು ಡಿ.ಕೆ. ಶಿವಕುಮಾರ್‌ ಭೇಟಿ ಮಾಡಿ ಕೆಲಹೊತ್ತು ಸಮಾಲೋಚನೆ ನಡೆಸಿದ್ದಾರೆ.

ಹಿರಿಯ ನಾಯಕನಾಗಿದ್ದರೂ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ಸಿಕ್ಕಿಲ್ಲವೆಂಬ ಕಾರಣಕ್ಕೆ ಹರಿಪ್ರಸಾದ್‌ ಮುನಿಸಿಕೊಂಡಿದ್ದಾರೆ. ‘ಮಂತ್ರಿ, ಸಿಎಂ ಸೇರಿ ಯಾವ ಅಧಿಕಾರದ ಮೇಲೂ ಲಾಬಿ ನಡೆಸಿಲ್ಲ. ಅದರ ಮೇಲೆ ಆಸೆಯೂ ಇಲ್ಲ. ಸಾಮಾಜಿಕ ನ್ಯಾಯದ ಪರ ನನ್ನ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ’ ಎಂದೂ ಹರಿಪ್ರಸಾದ್‌ ಅವರು ಸೋಮವಾರ ಟ್ವೀಟ್‌ ಮಾಡಿದ್ದರು. ಪಕ್ಷದೊಳಗಿನ ಆಂತರಿಕ ವಿಚಾರಗಳ ಬಗ್ಗೆ ಹರಿಪ್ರಸಾದ್‌ ಮತ್ತು ಶಿವಕುಮಾರ್‌ ಚರ್ಚೆ ನಡೆಸಿದ್ದಾರೆ ಎಂದು ಗೊತ್ತಾಗಿದೆ. ಈ ಸಂದರ್ಭದಲ್ಲಿ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಮತ್ತು ಚಿತ್ರಕಲಾ ಪರಿಷತ್‌ ಅಧ್ಯಕ್ಷ ಬಿ.ಎಲ್. ಶಂಕರ್ ಜೊತೆಗಿದ್ದರು.

LEAVE A REPLY

Please enter your comment!
Please enter your name here