ಹತ್ತು ವರ್ಷಗಳ ಬಳಿಕ ತೆರೆದ ಮೈಸೂರು ಅರಮನೆಯ ಖಜಾನೆ 

ಮಂಗಳೂರು(ಮೈಸೂರು): ವಿಶ್ವ ಪ್ರಸಿದ್ಧ ಮೈಸೂರು ಅರಮನೆಗೆ ಪ್ರವಾಸೋದ್ಯಮ ಸಚಿವ ಹೆಚ್‌ ಕೆ ಪಾಟೀಲ್  ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುಮಾರು ಹತ್ತು ವರ್ಷಗಳ ಬಳಿಕ ಅರಮನೆಯ ಖಜಾನೆಯನ್ನು ಸಚಿವರ ಸಮ್ಮುಖ ತೆರೆಯಲಾಗಿದ್ದು, ಅಪರೂಪದ ಬೆಲೆ ಬಾಳುವ ವಸ್ತುಗಳು ಕಂಡು ಬಂದಿವೆ.

ಪಾರಂಪರಿಕ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಅರಮನೆಗೆ ಭೇಟಿ ನೀಡಿದ್ದೇನೆ. ಖಜಾನೆಯಲ್ಲಿ 369 ಅಪರೂಪದ ವಸ್ತುಗಳಿವೆ. ಇದರಲ್ಲಿ ತಾಮ್ರಪತ್ರ, ನಟರಾಜ ವಿಗ್ರಹ, ನಾಣ್ಯ ಇತ್ಯಾದಿಗಳು ಒಳಗೊಂಡಿದೆ. ಇದನ್ನೆಲ್ಲ ನೋಡುವ ಅವಕಾಶ ಸಾರ್ವಜನಿಕರಿಗೆ ಸಿಗಬೇಕು ಎಂದು ಪಾಟೀಲ್ ಹೇಳಿದ್ದಾರೆ. ಜಿಲ್ಲಾಧಿಕಾರಿ ಹಳೆ ಕಚೇರಿ ಕಟ್ಟಡವು ಪಾರಂಪರಿಕ ಕಟ್ಟಡವಾಗಿದ್ದು, ಅದನ್ನು ವಸ್ತು ಪ್ರದರ್ಶನಕ್ಕೆ ಬಳಸಿಕೊಳ್ಳಲಾಗುವುದು ಮತ್ತು ಅದರ ರಕ್ಷಣೆ, ನಿರ್ವಹಣೆ ಬಗ್ಗೆ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.

ಖಜಾನೆಯಲ್ಲಿ ಕಂಡುಬಂದ ಕೆಲವು ನಾಣ್ಯಗಳು ಅಕ್ಕಿಕಾಳಿನ ಗಾತ್ರದಲ್ಲಿದ್ದರೆ ಕೆಲವು ಅವರೆ ಕಾಳಿನ ಗಾತ್ರದಲ್ಲಿದ್ದವು. ಶತಮಾನಗಳ ಹಿಂದೆ ಬಳಕೆಯಲ್ಲಿದ್ದ ಚಿನ್ನದ ನಾಣ್ಯಗಳೂ ಇಲ್ಲಿವೆ. ಶಾತವಾಹನರು, ರೋಮನ್ನರು, ವಿಜಯ ನಗರ ಸಾಮ್ರಾಜ್ಯ, ಮೈಸೂರು ಅರಸರ ಕಾಲದ ನಾಣ್ಯಗಳೂ ಇದರಲ್ಲಿ ಸೇರಿವೆ. ಹಲವು ವರ್ಷಗಳ ಹಿಂದೆ ಉತ್ಖನನ ಮಾಡಲಾಗಿದ್ದು ಇವನ್ನು ಖಜಾನೆಯಲ್ಲಿ ಸಂಗ್ರಹಿಸಿಡಲಾಗಿದೆ. ಬಹು ದೊಡ್ಡ ತಾಮ್ರ ಪತ್ರವೂ ಪತ್ತೆಯಾಗಿದ್ದು, ಅದರಲ್ಲಿ ಸಾಕಷ್ಟು ಲಿಪಿಗಳಿವೆ. ಇದು ಶತಮಾನಗಳ ಇತಿಹಾಸ ಹೊಂದಿದ್ದು, ಆಡಳಿತಗಾರರು ಆದೇಶಗಳನ್ನು ಬರೆಯಲು ಇದನ್ನು ಬಳಸುತ್ತಿದ್ದರು ಎನ್ನಲಾಗಿದೆ. ಕರ್ನಾಟಕದಲ್ಲಿ ಪಾರಂಪರಿಕ, ಪುರಾತತ್ವ ಮತ್ತು ವಸ್ತು ಸಂಗ್ರಹಾಲಯಗಳ ಇಲಾಖೆ ಕೇಂದ್ರ ಸ್ಥಾನ ಮೈಸೂರಿನಲ್ಲಿದ್ದು, ಹಲವು ದಶಕಗಳಿಂದ ಪಾರಂಪರಿಕ, ಪುರಾತತ್ವ ಇಲಾಖೆಗೆ ಸಂಬಂಧಿಸಿದ ತಾಣಗಳು, ವಸ್ತು ಸಂಗ್ರಹಾಲಯ, ಕಟ್ಟಡಗಳು, ವಸ್ತುಗಳ ನಿರ್ವಹಣೆ ಮಾಡಲಾಗುತ್ತಿದೆ. ಈ ಇಲಾಖೆ ಸುಪರ್ದಿಯಲ್ಲಿ ಹಲವು ಪಾರಂಪರಿಕ ಮಹತ್ವದ ವಸ್ತುಗಳಿದ್ದು, ಇವುಗಳನ್ನು ಮೈಸೂರು ಅರಮನೆಯ ಆವರಣದ ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿದೆ. ರಾಜ್ಯದ ಏಕೈಕ ಪುರಾತನ ವಸ್ತುಗಳ ಟ್ರಜರಿ ಇದಾಗಿದೆ.

LEAVE A REPLY

Please enter your comment!
Please enter your name here