ಕ್ಷೀರ ಕ್ರಾಂತಿಯ ಪಿತಾಮಹ ಡಾ.ವರ್ಗೀಸ್ ಕುರಿಯನ್

ಮಂಗಳೂರು: ಡಾ.ವರ್ಗೀಸ್ ಕುರಿಯನ್ ದಿ ಮಿಲ್ಕ್‌ ಮ್ಯಾನ್‌ ಆಫ್‌ ಇಂಡಿಯಾ. ಬಿಳಿ ಕ್ರಾಂತಿಯ ಪಿತಾಮಹ. 1921 ನವಂಬರ್ 26 ಅಂದಿನ ಬ್ರಿಟಿಷ್ ಇಂಡಿಯಾದ ಮದ್ರಾಸ್ ಪ್ರಾಂತ್ಯದ ಕೇರಳದ ಕೋಝಿಕೋಡಿನಲ್ಲಿ ಜನನ. ತಂದೆ ಡಾಕ್ಟರ್ ಪಿ. ಕೆ. ಕುರಿಯನ್ ಕೊಯಂಬತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕಾರಣ ವರ್ಗೀಸ್ ಬಾಲ್ಯ ಶಿಕ್ಷಣವು ಅಲ್ಲಿಯ ಡೈಮಂಡ್ ಜುಬಿಲಿ ಶಾಲೆಯಲ್ಲಿ ನಡೆಯಿತು.

ಬಾಲಕ ವರ್ಗಿಸ್ ಓದಿನಲ್ಲಿ ಬಹಳ ಮುಂದಿದ್ದ ಕಾರಣ ಪ್ರಮೋಷನ್ ಪಡೆದುಕೊಂಡು ತನ್ನ 14ನೇ ವರ್ಷಕ್ಕೆ ಕೊಯಂಬತ್ತೂರಿನ ಲೊಯೊಲಾ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಸೀಟು ಪಡೆದುಕೊಂಡಿದ್ದ. 19ನೇ ವರ್ಷಕ್ಕೆ ಡಿಗ್ರಿ ಮುಗಿದು ಗಿಂಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕಾನಿಕಲ್ ಇಂಜಿನಿಯರ್ ಪದವಿಗೆ ಮೆರಿಟ್ ಮೇಲೆ ಸೀಟು ಗಳಿಸಿದ್ದ. ಇಂಜಿನಿಯರಿಂಗ್ ಮುಗಿಸಿ ಆರ್ಮಿಗೆ ಸೇರಿ ಸೇವೆ ಸಲ್ಲಿಸಬೇಕೆಂಬುದು ವರ್ಗೀಸ್ ಹಂಬಲವಾಗಿತ್ತು. ಇಂಜಿನಿಯರಿಂಗ್ ಮುಗಿಸಿ ಕೆಲವು ದಿನಗಳಲ್ಲಿ ತಂದೆ ಮೃತಪಡುತ್ತಾರೆ. ಆ ಕಾರಣದಿಂದ ಪುನಃ ಮಾವನೊಂದಿಗೆ ಕೇರಳಕ್ಕೆ ಹಿಂದಿರುಗಬೇಕಾಗುತ್ತದೆ.

ಕೇರಳಕ್ಕೆ ಬಂದು ಮಿಲಿಟರಿ ಸೇರೋಣ ಅಂದುಕೊಂಡಿದ್ದಾಗ ತಾಯಿಯವರು ಜಂಶೆಡ್ ಪುರದಲ್ಲಿರುವ ಟಾಟಾ ಇನ್ಸ್ಟಿಟ್ಯೂಟ್ ಸೇರುವಂತೆ ಮನವೊಲಿಸುತ್ತಾರೆ. ಅಲ್ಲಿ ಸ್ವಲ್ಪ ಕಾಲ ಇದ್ದ ವರ್ಗಿಸ್ ಆಮೇಲೆ ಸರಕಾರದ ಸ್ಕಾಲರ್ ಶಿಪ್ ಪಡೆದು ಅಮೆರಿಕದ ಮಿಷಿಗನ್ ಯುನಿವರ್ಸಿಟಿಯಲ್ಲಿ ಡೈರಿ ಇಂಜಿನಿಯರಿಂಗ್ ಕಲಿಯಲು ಹೋಗುತ್ತಾರೆ.
ಅಮೆರಿಕದಲ್ಲಿ ಮಾಸ್ಟರ್ ಡಿಗ್ರಿ ಮುಗಿಸಿ ಹಿಂದಿರುಗಿದ ಇವರನ್ನು ಸರಕಾರವು ಗುಜರಾತಿನ ಆನಂದ್ ಗ್ರಾಮದಲ್ಲಿರುವ ಸರಕಾರಿ ಡೈರಿ ಒಂದಕ್ಕೆ ಅಧಿಕಾರಿಯಾಗಿ ಕಳುಹಿಸುತ್ತದೆ. ಅದು ಅವರ ಜೀವನದ ಟರ್ನಿಂಗ್ ಪಾಯಿಂಟ್ ಎಂದೇ ಹೇಳಬಹುದು. ಅಲ್ಲಿ ಅವರಿಗೆ ಪರಿಚಯವಾಗುವುದು ಹಾಲು ಚಳುವಳಿಯ ಪಿತಾಮಹ ತ್ರಿಭುವನ್ ದಾಸ್ ಪಟೇಲ್. ಅಂದು ಗುಜರಾತಿನಲ್ಲಿ ಸಂಗ್ರಹವಾಗುತ್ತಿದ್ದ ಹಾಲನ್ನು ಮುಂಬೈಯ ಪಾಲ್ಸನ್ ಎಂಬ ಬ್ರಿಟಿಷ್ ಕಂಪನಿಯು ಹೈನುಗಾರರಿಗೆ ಅತ್ಯಂತ ಕಡಿಮೆ ದರಕೊಟ್ಟು ಮುಂಬೈಗೆ ಸಾಗಾಣಿಕೆ ಮಾಡುತ್ತಿತ್ತು. ಅದರ ವಿರುದ್ಧ ಹೋರಾಟ ಮಾಡಿದ್ದೇ ಇದೇ ತ್ರಿಭುವನ್ ದಾಸ್ ಪಟೇಲ್.

ಸರಕಾರಿ ಕೆಲಸವನ್ನು ಅರ್ಧಕ್ಕೆ ಬಿಟ್ಟು ಪಟೇಲ್ ಜೊತೆ ಸೇರಿದ ಕುರಿಯನ್ ಕೈರಾ ಗ್ರಾಮದಲ್ಲಿ ಹಾಲು ಸಂಗ್ರಹಿಸಲು ಕೈರಾ ಕೋಪರೇಟಿವ್ ಸೊಸೈಟಿ ಎಂಬ ಸಂಸ್ಥೆಯನ್ನು ಆರಂಭಿಸುತ್ತಾರೆ. ಕ್ರಮೇಣ ಅದು 1950 ರಲ್ಲಿ ಆನಂದ್ ಮಿಲ್ಕ್ ಯೂನಿಯನ್ ಲಿಮಿಟೆಡ್ AMUL ಎಂದು ನಾಮಕರಣ ಕೊಳ್ಳುತ್ತದೆ. ಮೊದಲಿಗೆ ಜನರಲ್ ಮ್ಯಾನೇಜರ್ ಆಗಿದ್ದ ವರ್ಗೀಸ್ ಕುರಿಯನ್, ತ್ರಿಭುವನ್ ದಾಸ್ ಪಟೇಲ್ ನಿವೃತ್ತಿಯಾದಾಗ ಕಂಪನಿಯ ಚೇರ್ ಮ್ಯಾನ್ ಆಗಿ ಬಡ್ತಿ ಹೊಂದಿ 2005ರವರೆಗೂ ಆ ಹುದ್ದೆಯಲ್ಲಿ ಇರುತ್ತಾರೆ .

ಆ ಮೇಲೆ ನಡೆದದ್ದೆಲ್ಲವೂ ಚರಿತ್ರೆ. ಆರಂಭದಲ್ಲಿ ದಿನವೊಂದಕ್ಕೆ 250 ಲೀಟರ್ ಹಾಲು ಸಂಗ್ರಹಿಸುತ್ತಿದ್ದ ಅಮುಲ್ ಕಳೆದ ವರ್ಷ ನಡೆಸಿದ ವಾರ್ಷಿಕ ವ್ಯವಹಾರ 72,000 ಕೋಟಿ. ದೇಶದ ಅತ್ಯಂತ ದೊಡ್ಡ ಹಾಲು ಉತ್ಪಾದಕ ಕಂಪನಿ ಯಾಗಿ ಅಮುಲ್ ಅನ್ನು ಬೆಳೆಸುತ್ತಾರೆ. ಅಮೂಲ್ ಪ್ರಾಡಕ್ಟ್ ಗಳಿಗೆ ದೇಶದಾದ್ಯಂತ ಮಾರುಕಟ್ಟೆ ಸಿಗುವಂತೆ ಯೋಜನೆಗಳನ್ನು ಮಾಡುತ್ತಾರೆ. Amul the taste of india ಎಂಬ ಸ್ಲೋಗನ್ ವಿಶ್ವದಾದ್ಯಂತ ಜನರ ಗಮನ ಸೆಳೆಯುತ್ತದೆ. ಅಮುಲ್ ಬಟರ್ 85% ಮಾರುಕಟ್ಟೆ ಹಿಡಿದರೆ ಅಮುಲ್ ಚೀಸ್ 65% ಮಾರುಕಟ್ಟೆಯನ್ನು ಆವರಿಸಿಕೊಳ್ಳುತ್ತದೆ. ಕುರಿಯನ್ ರನ್ನು ಹುಡುಕಿ ಬರದ ಪ್ರಶಸ್ತಿಗಳು ಇಲ್ಲವೆಂದೇ ಹೇಳಬಹುದು. ಪದ್ಮಶ್ರೀ, ಪದ್ಮಭೂಷಣ್, ಪದ್ಮ ವಿಭೂಷಣ್, ರಾಮನ್ ಮ್ಯಾಗ್ಸೆಗ್ಸೆ, ವರ್ಲ್ಡ್ ಫುಡ್ ಪ್ರೈಸ್, ಲೈಫ್ ಟೈಮ್ ಅಚೀವ್ಮೆಂಟ್ ಅವಾರ್ಡ್ ಇಂತಹ ನೂರಾರು ಪುರಸ್ಕಾರಗಳು ಅವರನ್ನು ಹುಡುಕಿಕೊಂಡು ಬಂದಿವೆ. ಇವರ ಜೀವನ ಸಾಧನೆಗಳ ಬಗ್ಗೆ ಇಂದು ಅನೇಕ ಯೂನಿವರ್ಸಿಟಿಗಳಲ್ಲಿ ಪಾಠ ಹೇಳಿಕೊಡಲಾಗುತ್ತಿದೆ. ಕುರಿಯನ್ ಬಗ್ಗೆ ಮಂಥನ್ ಎಂಬ ಒಂದು ಬಾಲಿವುಡ್ ಚಿತ್ರವು ಬಿಡುಗಡೆಯಾಗಿತ್ತು. ಅಲ್ಪ ಕಾಲದ ಸರಕಾರಿ ಕೆಲಸಕ್ಕೆ ಎಂದು ಆನಂದ್ ಗ್ರಾಮಕ್ಕೆ ಹೋದ ವರ್ಗಿಸ್ ಕುರಿಯನ್ ಅದೇ ಊರಲ್ಲಿ ಶಾಶ್ವತವಾಗಿ ನೆಲೆಸಿ ವಯೋ ಸಹಜವಾದ ಅಸೌಖ್ಯದೊಂದಿಗೆ 9 ಸೆಪ್ಟೆಂಬರ್ 2012 ರಂದು ಕೊನೆಯುಸಿರೆಳೆಯುತ್ತಾರೆ. ಅಲ್ಲಿಗೆ ದೇಶ ಕಂಡ ಕ್ಷೀರಕ್ರಾಂತಿಯ ಒಂದು ಮಹಾನ್ ಚೇತನದ ಅಂತ್ಯವಾಗುತ್ತದೆ.

ಮಾಹಿತಿ/ಚಿತ್ರ
ಇಕ್ಬಾಲ್ ಪುತ್ತೂರು
(ಸಂಪೋಲಿ)

LEAVE A REPLY

Please enter your comment!
Please enter your name here