ಮಂಗಳೂರು: ಕನ್ನಡನಾಡಿನ ನಾಡಗೀತೆಯ ರಾಗ ಹೇಗಿರಬೇಕು ಎಂಬ ಬಗ್ಗೆ ಕರ್ನಾಟಕ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದಿದೆ. ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ನಾಡಗೀತೆಯ ರಾಗದ ಧಾಟಿಯ ಬಗ್ಗೆ ಪ್ರಶ್ನಿಸಲಾದ ಅರ್ಜಿಯನ್ನು ವಿಚಾರಣೆಗಾಗಿ ಕೈಗೆತ್ತಿಕೊಂಡಿದ್ದಾರೆ.
2022ರ ಸೆಪ್ಟಂಬರ್‌ನಲ್ಲಿ ಮೈಸೂರು ಅನಂತಸ್ವಾಮಿ ಅವರು ಸಂಯೋಜಿಸಿದ ರಾಗದಲ್ಲಿ ಎರಡೂವರೆ ನಿಮಿಷದ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಿತ್ತು. ಇದನ್ನು ಪ್ರಶ್ನಿಸಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಬಗ್ಗೆ ನ್ಯಾಯಪೀಠಕ್ಕೆ ಸಹಾಯ ಮಾಡಲು ಸಂಗೀತ ತಜ್ಞರ ನೆರವನ್ನು ಕೋರಲಾಯಿತು. ಅರ್ಜಿದಾರ ಕಿಕ್ಕೇರಿ ಕೃಷ್ಣಮೂರ್ತಿ ಅವರು ಹಿರಿಯ ಗಾಯಕಿ ಬಿ.ಕೆ. ಸುಮಿತ್ರಾ ಅವರ ನೆರವನ್ನು ಬಳಸಬಹುದು ಎಂದು ಸೂಚಿಸಿದರು. ಇದಕ್ಕೆ ಅನುಮತಿ ನೀಡಿದ ನ್ಯಾಯಪೀಠ ಆಗಸ್ಟ್ 17ರಂದು ತಜ್ಞರನ್ನು ಕರೆಸುವಂತೆ ಹೇಳಿತು. ಹಾಗೂ ಸಂಗೀತಕ್ಕೆ ಸಂಬಂಧಿಸಿದ ಗ್ರಂಥಗಳನ್ನು ಓದಿಕೊಂಡು ಬರುವಂತೆ ಸೂಚಿಸಿತು.