ಚೀತಾ ‘ಧಾತ್ರಿ‘ ಸಾವು – 5 ತಿಂಗಳಲ್ಲಿ ಮೃತ ಚೀತಾಗಳ ಸಂಖ್ಯೆ 9ಕ್ಕೆ ಏರಿಕೆ

ಮಂಗಳೂರು(ಭೋಪಾಲ್): ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಹೆಣ್ಣು ಚೀತಾ ‘ಧಾತ್ರಿ‘ ಬುಧವಾರ ಬೆಳಗ್ಗೆ ಮೃತಪಟ್ಟಿದೆ. ಕಳೆದ ಐದು ತಿಂಗಳ ಅವಧಿಯಲ್ಲಿ ಮೃತಪಟ್ಟ ಚೀತಾಗಳ ಸಂಖ್ಯೆ 9ಕ್ಕೇರಿದೆ.

‘ಧಾತ್ರಿ‘ ಸಾವಿಗೆ ಕಾರಣ ತಿಳಿದುಬಂದಿಲ್ಲ. ‘ಧಾತ್ರಿ‘ಯ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದ್ದು ವರದಿ ಬಂದ ಬಳಿಕ ನಿಖರವಾದ ಕಾರಣ ತಿಳಿಯಲಿದೆ ಎಂದು ಉದ್ಯಾನವನದ ಅಧಿಕಾರಿಗಳು ಹೇಳಿದ್ದಾರೆ. ಉದ್ಯಾನವನದಲ್ಲಿ‌ರುವ 14 ಚೀತಾಗಳು ಆರೋಗ್ಯವಾಗಿವೆ. ಇವುಗಳಲ್ಲಿ 7 ಗಂಡು, 6 ಹೆಣ್ಣು ಸೇರಿದಂತೆ ಒಂದು ಮರಿ ಚೀತಾ ಇದೆ. ಇವುಗಳ ಆರೋಗ್ಯವನ್ನು ಉದ್ಯಾನವನದ ವನ್ಯಜೀವಿ ಪಶುವೈದ್ಯರು ಮತ್ತು ನಮೀಬಿಯಾದ ತಜ್ಞರು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ಎರಡು ಚೀತಾಗಳನ್ನು ಉದ್ಯಾನವನದಿಂದ ಕಾಡಿಗೆ ಬಿಡಲಾಗಿತ್ತು. ಇವುಗಳ ಪೈಕಿ ಒಂದು ಚೀತಾ ಮೃತಪಟ್ಟಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.  ಕಳೆದ ವರ್ಷ ಸೆಪ್ಟೆಂಬರ್‌ ತಿಂಗಳಲ್ಲಿ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ 20 ವಯಸ್ಕ ಚೀತಾಗಳನ್ನು ಕುನೊ ರಾಷ್ಟ್ರೀಯ ಉದ್ಯಾನಕ್ಕೆ ತರಲಾಗಿತ್ತು. ಇವುಗಳಿಗೆ ಮೂರು ಮರಿಗಳು ಜನಿಸಿದ್ದರಿಂದ ಈ ಚೀತಾಗಳ ಸಂಖ್ಯೆ 23ಕ್ಕೆ ಏರಿಕೆಯಾಗಿತ್ತು. ಇವುಗಳ ಪೈಕಿ 9 ಸಾವನ್ನಪ್ಪಿದ್ದು 14 ಚೀತಾಗಳು ಆರೋಗ್ಯವಾಗಿವೆ ಎಂದು ಉದ್ಯಾನವನದ ಅಧಿಕಾರಿಗಳು ಹೇಳಿದ್ದಾರೆ.

LEAVE A REPLY

Please enter your comment!
Please enter your name here