ಮಂಗಳೂರು: ವಾರಣಾಸಿ ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆಗೆ ಅಲಹಾಬಾದ್ ಹೈಕೋರ್ಟ್ ಒಪ್ಪಿಗೆ ಸೂಚಿಸಿದ್ದು, ಈ ಬಗ್ಗೆ ಹೋರಾಡುತ್ತಿದ್ದ ಹಿಂದೂಗಳು ಸಂತಸ ವ್ಯಕ್ತಪಡಿಸಿದ್ದಾರೆ. ವಾರಣಾಸಿ ಜಿಲ್ಲಾ ನ್ಯಾಯಾಲಯ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದ ಕೋರ್ಟ್, ಮಸೀದಿ ಆಡಳಿತ ಮಂಡಳಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಭಾರತೀಯ ಪುರಾತತ್ವ ಇಲಾಖೆಗೆ ಸೂಚನೆ ನೀಡಿದ ನ್ಯಾಯಾಲಯ, ಮಸೀದಿಯ ಸಂಕೀರ್ಣವನ್ನು ವೈಜ್ಞಾನಿಕವಾಗಿ ಸಮೀಕ್ಷೆಗೆ ಒಳಪಡಿಸುವಂತೆ ಹೇಳಿದೆ. ಜುಲೈ 21ರಂದು ವಾರಣಾಸಿ ಜಿಲ್ಲಾ ನ್ಯಾಯಾಲಯವು ಎ.ಎಸ್.ಐ. ಸರ್ವೇಗೆ ಅನುಮತಿ ನೀಡಿತ್ತು.
ಅದರಂತೆ ಜುಲೈ 24ರಂದು ಭಾರತೀಯ ಪುರಾತತ್ವ ಇಲಾಖೆಯ ಸಮೀಕ್ಷಾ ತಂಡದ 30 ಸದಸ್ಯರು ಮಸೀದಿಯ ಸರ್ವೇ ಆರಂಭಿಸಿದ್ದರು. ಕೂಡಲೇ ಮಸೀದಿಯ ಆಡಳಿತ ಮಂಡಳಿ ಸುಪ್ರೀಂ ಕೊರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಮಸೀದಿ ಆಡಳಿತ ಮಂಡಳಿಯ ಮನವಿಯಂತೆ ಸುಪ್ರೀಂ ಕೋರ್ಟ್ ತುರ್ತಾಗಿ ವಿಚಾರಣೆ ನಡೆಸಿ ಸರ್ವೇಗೆ ತಾತ್ಕಾಲಿಕ ತಡೆ ನೀಡಿತ್ತು. ಅಲ್ಲದೆ ಗುಜರಾತ್‍ನ ಅಲಹಾಬಾದ್ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ಸೂಚಿಸಿತ್ತು. ಜುಲೈ 27ರಂದು ವಿಚಾರಣೆ ಪೂರ್ಣಗೊಳಿಸಿದ ಕೋರ್ಟ್ ಮಸೀದಿ ಆಡಳಿತ ಮಂಡಳಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ಕಾಶಿ ವಿಶ್ವನಾಥ ದೇಗುಲದ ಭಾಗವನ್ನು ಕೆಡವಿ ಮಸೀದಿ ಕಟ್ಟಲಾಗಿದ್ದು, ಪೂಜೆಗೆ ಅವಕಾಶ ಕಲ್ಪಿಸಬೇಕೆಂದು 1991ರಲ್ಲಿ ಹಿಂದೂ ಅರ್ಚಕರು ಸಿವಿಲ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. 1998ರಲ್ಲಿ ಅಲಹಾಬಾದ್ ಹೈಕೋರ್ಟ್ ಇದರ ವಿಚಾರಣೆಗೆ ತಡೆ ನೀಡಿತ್ತು. ಕಳೆದ ವರ್ಷ ವಾರಣಾಸಿ ಕೆಳ ನ್ಯಾಯಾಲಯ ವೀಡಿಯೋಗ್ರಾಫಿಕ್ ಸರ್ವೇಗೆ ಆದೇಶ ನೀಡಿತ್ತು. ಇದರ ವಿರುದ್ಧ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ವಾರಣಾಸಿ ಹೈಕೋರ್ಟ್ ಮೊರೆ ಹೋಗಿತ್ತು. 17ನೇ ಶತಮಾನದಲ್ಲಿ ಮೊಘಲ್ ದೊರೆ ಔರಂಗಜೇಬ್ ಕಾಶಿ ವಿಶ್ವನಾಥ ದೇಗುಲವನ್ನು ಕೆಡವಿ ಜ್ಞಾನವಾಪಿ ಮಸೀದಿ ಕಟ್ಟಿಸಿದ್ದ ಎಂದು ಇತಿಹಾಸ ಹೇಳುತ್ತದೆ. ಹೀಗಾಗಿ ಹಿಂದೂಗಳು ಮಸೀದಿಯೊಳಗಿರುವ ಹಿಂದೂ ದೇವರ ವಿಗ್ರಹಗಳಿಗೆ ಪೂಜೆ ಸಲ್ಲಿಸುವ ಅವಕಾಶ ನಿಡಬೇಕೆಂದು ಹೋರಾಡುತ್ತಿದ್ದಾರೆ.