ಐಫೋನ್‌ ಪಿತಾಮಹ ಸ್ಟೀವ್ ಪಾಲ್ ಜಾಬ್ಸ್ ನ ರೋಚಕ ಕಥೆ

ಮಂಗಳೂರು: ಒಂದು ಕಾಲದಲ್ಲಿ ಆತನ ಬಳಿ ಹೊಟ್ಟೆ ತುಂಬಾ ಊಟ ಮಾಡಲು ದುಡ್ಡಿರಲಿಲ್ಲ. ಹಾಗಂತ ಸ್ಟಾನ್ ಫೋರ್ಡ್ ನಲ್ಲಿರುವ ಇಸ್ಕಾನ್ ಟೆಂಪಲ್ ಗೆ ಹೋಗಿ ಊಟ ಮಾಡುತ್ತಿದ್ದ. ರೂಮ್ ಬಾಡಿಗೆ ಕೊಡಲು ಕೂಡ ಜೇಬು ಖಾಲಿ ಅಂತ ಗೆಳೆಯನ ರೂಮಿನಲ್ಲಿ ನೆಲದ ಮೇಲೆ ಮಲಗುತ್ತಿದ್ದ. ಹೇಳುತ್ತಾ ಇರುವುದು ಬೇರೆ ಯಾರು ಅಲ್ಲ, ಆ್ಯಪಲ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಐಫೋನ್ ಎಂಬ ಮಂತ್ರದಂಡವನ್ನು ಲೋಕಕ್ಕೆ ನೀಡಿದ ಮಾಂತ್ರಿಕ ಸ್ಟೀವ್ ಪಾಲ್ ಜಾಬ್ಸ್ ಬಗ್ಗೆ. ಆತನ ಹುಟ್ಟು ಒಂದು ರೋಚಕ.

ಸಿರಿಯನ್ ಪ್ರಜೆಯಾದ ಅಬ್ದುಲ್ ಫ಼ತ್ತಾಹ ಜಿಂದಾಲಿ ಲೆಬನಾನ್ ನ ಬೆರೂತ್ ನಲ್ಲಿ ಡಿಗ್ರಿ ಮುಗಿಸಿ ಪೊಲಿಟಿಕಲ್ ಸೈನ್ಸ್ ನಲ್ಲಿ ಪಿಹೆಚ್‌ಡಿ ಮಾಡಲು ಅಮೆರಿಕದ ವಿಸ್ ಕೋನ್ ಸಿನ್ ಯುನಿವರ್ಸಿಟಿಗೆ ಬರುತ್ತಾನೆ. ಅಲ್ಲಿ ಅವನಿಗೆ ಪರಿಚಯವಾಗುವುದು ಕ್ಯಾಥೋಲಿಕ್ ವಿದ್ಯಾರ್ಥಿನಿ ಜೋನ್ ಸೀಬೆಲ್. ಪರಿಚಯ ಪ್ರೇಮವಾಗಿ ವಿವಾಹವಾಗಲು ಹೊರಡುತ್ತಾರೆ. ಅಷ್ಟೊತ್ತಿಗೆ ಆಕೆ ಗರ್ಭಿಣಿಯಾಗಿರುತ್ತಾಳೆ. ಜಿಂದಾಲಿಯ ಮನೆಯಲ್ಲಿ ಒಪ್ಪಿಗೆ ಸಿಗುವುದಿಲ್ಲ. ಆ ದಿನಗಳು ಅಮೆರಿಕದಲ್ಲಿ ಬ್ರೂಣ ಹತ್ಯೆ ಎಂಬುದು ಭಾರೀ ದೊಡ್ಡ ಕಾನೂನು ಬಾಹಿರ ಕೃತ್ಯವಾಗಿತ್ತು. ಪ್ರೇಮಿ ದೂರವಾಗುತ್ತಾನೆ. ಗರ್ಭ ಧರಿಸಲು ತೀರ್ಮಾನಿಸುತ್ತಾಳೆ. ಹೆರಿಗೆಯ ಹೊತ್ತಿಗೆ ಕ್ಯಾಲಿಫೋರ್ನಿಯಾದ ಸಾನ್ ಫ್ರಾನ್ಸಿಸ್ಕೋ ಗೆ ಹೋಗಿ ಅಲ್ಲಿಯ ಆಸ್ಪತ್ರೆಯಲ್ಲಿ 24 ಫೆಬ್ರವರಿ 1955 ರಂದು ಗಂಡು ಮಗುವಿಗೆ ಜನನ ನೀಡುತ್ತಾಳೆ.

ಹೆಚ್ಚು ದಿನ ಮಗುವನ್ನು ಮನೆಯಲ್ಲಿ ಇಟ್ಟುಕೊಳ್ಳದಂತೆ ಹೆತ್ತವರಿಂದ ಆಜ್ಞೆಯಾಗಿತ್ತು. ದತ್ತು ತೆಗೆದುಕೊಳ್ಳಲು ತಯಾರಿರುವ ಸರಿಯಾದ ಒಂದು ದಂಪತಿಗಳಿಗಾಗಿ ಹುಡುಕಾಟ ನಡೆಸುತ್ತಾಳೆ. ಆಗ ಮುಂದೆ ಬರುವವರು ಮೆಕಾನಿಕಲ್ ವೃತ್ತಿ ಮಾಡಿಕೊಂಡಿದ್ದ ಪಾಲ್ ಜಾಬ್ಸ್ ಮತ್ತು ಕ್ಲಾರ ಜಾಬ್ಸ್ ದಂಪತಿಗಳು. ನನ್ನ ಮಗನನ್ನು ಚೆನ್ನಾಗಿ ಓದಿಸಬೇಕು ಎನ್ನುವ ಷರತ್ತಿನೊಂದಿಗೆ ಅವರಿಗೆ ದತ್ತು ನೀಡುತ್ತಾಳೆ. ಬಾಲ್ಯ ಶಿಕ್ಷಣ ಕ್ಯಾಲಿಫೋರ್ನಿಯಾದಲ್ಲಿ ನಡೆಯುತ್ತದೆ. ಚಿಕ್ಕಂದಿನಲ್ಲಿಯೇ ಸ್ಟೀವ್ ಗೆ ಎಲೆಕ್ಟ್ರಾನಿಕ್ಸ್ ಉಪಕರಣಗಳ ಮೇಲೆ ಎಲ್ಲಿಲ್ಲದ ಆಸಕ್ತಿ. ಶಾಲೆ ಬಿಟ್ಟ ಕೂಡಲೇ ನೆರೆಯಲ್ಲಿದ್ದ ಒಬ್ಬ ಇಂಜಿನಿಯರ್ ರ ಮನೆಗೆ ಹೋಗಿ ಆಟವಾಡುತ್ತಿದ್ದ. ಕ್ಲಾಸಿನ ಮಕ್ಕಳಿಗೂ ಕೂಡ ಅವನ ಆಟಗಳು ಅರ್ಥವಾಗುತ್ತಿರಲಿಲ್ಲ. ಹಾಗಾಗಿ ಹೆಚ್ಚಾಗಿ ಕ್ಲಾಸ್ ರೂಮಲ್ಲಿ ಒಬ್ಬನೇ ಇರುತ್ತಿದ್ದ. ಹೈಸ್ಕೂಲಿನಲ್ಲಿ ಇರುವಾಗಲೇ ಹೆಚ್‌ ಪಿ ಕಂಪ್ಯೂಟರ್ಸ್ ನಲ್ಲಿ ಬೇಸಿಗೆ ರಜಾ ದಿನಗಳಲ್ಲಿ ಕೆಲಸ ಮಾಡಿದ್ದ.

ಅಲ್ಲಿಂದ ಪ್ರತಿಷ್ಠಿತ ರೀಡ್ ಕಾಲೇಜಿಗೆ ಸೇರಿಕೊಳ್ಳುತ್ತಾನೆ. ಆದರೆ ಕಾಲೇಜು ಕಲಿಕೆಯಲ್ಲಿ ಅವನಿಗೆ ಆಸಕ್ತಿಯೇ ಬರಲಿಲ್ಲ. ಪೋಷಕರು ಖರ್ಚು ಮಾಡಿ ಕಲಿಸುವುದು ವ್ಯರ್ಥ ಅಂತ ಒಂದೇ ವರ್ಷದಲ್ಲಿ ಕಾಲೇಜ್ ಬಿಡುತ್ತಾನೆ. ಅಲ್ಲಿಂದ ಕ್ಯಾಲಿಗ್ರಫಿ ಕಲಿಯಲು ಸೇರಿಕೊಳ್ಳುತ್ತಾನೆ. ಅದು ಆತನ ಜೀವನದ ಟರ್ನಿಂಗ್ ಪಾಯಿಂಟ್ ಎಂದೇ ಹೇಳಬಹುದು. ಆತ ಎಷ್ಟೋ ಭಾಷಣದಲ್ಲಿ ಹೇಳಿದ ಹಾಗೆ ಬಹುಶಃ ನಾನು ಕ್ಯಾಲಿಗ್ರಫಿ ಕಲಿಯದೆ ಹೋಗಿದ್ದರೆ ನನ್ನಲ್ಲಿ ಕಂಪ್ಯೂಟರ್ ತಯಾರಿಸುವ ಆಸಕ್ತಿ ಇರುತ್ತಿತೋ ಎಂದು ನಾನು ಹೇಳಲಾರೆ. 1971 ರಲ್ಲಿ ವಿಡಿಯೋ ಗೇಮ್ ತಯಾರು ಮಾಡುವ ಒಂದು ಕಂಪನಿಗೆ ಸೇರಿಕೊಳ್ಳುತ್ತಾನೆ. ಆಗ ಸ್ಟೀವ್ ವ್ಯಾಸನಿಕ್ ನ ಪರಿಚಯವಾಗುತ್ತದೆ. ಆತ ಆವಾಗಲೇ ಪಾಂಗ್ ಎಂಬ ಒಂದು ವಿಡಿಯೋ ಗೇಮ್ ತಯಾರು ಮಾಡಿದ್ದ. ಸ್ವಲ್ಪ ಕಾಲ ಕೆಲಸ ಮಾಡಿದ ನಂತರ ಕೆಲಸದಲ್ಲಿ ಆಸಕ್ತಿ ಹೊರಟು ಹೋಗುತ್ತದೆ. ಅದನ್ನು ಬಿಟ್ಟು 1974 ರಲ್ಲಿ ಸ್ಟೀವ್ ಜಾಬ್ಸ್ ನೇರವಾಗಿ ಭಾರತಕ್ಕೆ ಬರುತ್ತಾನೆ. ಇಲ್ಲಿ ಉತ್ತರ ಭಾರತದ ಹಿಮಾಚಲದಲ್ಲಿ ಸ್ವಲ್ಪ ದಿನ ಅಲೆಯುತ್ತಾನೆ. ಬೌದ್ಧ ಧರ್ಮ ಪ್ರಾಕ್ಟೀಸ್ ಮಾಡುತ್ತಾನೆ. ಒಂದು ವರ್ಷ ಕಳೆದು ಇಲ್ಲಿಂದ ಮರಳುವಾಗ ಮಾತ್ರ ಒಬ್ಬ ಹೊಸ ಸ್ಟೀವ್ ಜಾಬ್ ಆಗಿ ಅಮೆರಿಕಕ್ಕೆ ಮರಳುತ್ತಾನೆ.

1976 ರಲ್ಲಿ ಸ್ಟೀವ್ ಜಾಬ್ ಮತ್ತು ವ್ಯಾಸನಿಕ್ ಜೊತೆ ಸೇರಿ ಆ್ಯಪಲ್ ಕಂಪನಿಯನ್ನು ಹುಟ್ಟು ಹಾಕುತ್ತಾರೆ. 1977ರಲ್ಲಿ ಆ್ಯಪಲ್ 1 ಕಂಪ್ಯೂಟರ್ ಹೊರಬರುತ್ತದೆ. ವರ್ಷ ಕಳೆದು ಆ್ಯಪಲ್ 2 ಕೂಡ ಬರುತ್ತದೆ. 1979ರಲ್ಲಿ ಮೌಸ್ ಡ್ರೈವ್ ಇರುವ ಜೆರಾಕ್ಸ್ ಆಲ್ಟೊ ಹೊರತರುತ್ತಾರೆ. 1984ರಲ್ಲಿ ಅವರು ಹೊರ ತರುವ ಮ್ಯಾಕಿನ್ಟೋಷ್ GUI, ಕಂಪ್ಯೂಟರ್ ಜಗತ್ತನ್ನೇ ಬದಲಾಯಿಸಿ ಬಿಡುತ್ತದೆ. 1985 ರಲ್ಲಿ ಕಂಪನಿ ಜೊತೆ ಸಮಸ್ಯೆ ಮಾಡಿಕೊಂಡು ಹೊರಗೆ ಬರುತ್ತಾನೆ. ಬರುವಾಗ ಆ್ಯಪಲ್ ನಿಂದಲೇ ಕೆಲವರನ್ನು ಕರೆದುಕೊಂಡು ಬಂದು ನೆಕ್ಸ್ಟ್ ಮತ್ತು ಪಿಕ್ಸರ್ ಕಂಪನಿಗಳನ್ನು ಆರಂಭಿಸುತ್ತಾನೆ. 3D ಅನಿಮೇಷನ್ ಗಳು ಬರುತ್ತವೆ. 20ಕ್ಕೂ ಹೆಚ್ಚು ಅನಿಮೇಷನ್ ಮೂವಿಗಳು ತಯಾರಾಗುತ್ತವೆ. ಇವನ ವೇಗ ಕಂಡು 1997ರಲ್ಲಿ ಆ್ಯಪಲ್ ಸಂಸ್ಥೆಯೇ ಇವನ ಕಂಪನಿಗಳನ್ನು ಖರೀದಿಸಿ ಆ್ಯಪಲ್ ಸಂಸ್ಥೆಗೆ ಇವನನ್ನು ಸಿಇಒ ಮಾಡುತ್ತದೆ.

ಆಮೇಲೆ ನಡೆದದ್ದೆಲ್ಲ ಚರಿತ್ರೆಯಲ್ಲಿ ಸರ್ವಕಾಲಿಕ ದಾಖಲೆಯಿಂದೇ ಹೇಳಬಹುದು. ಆತ ಹೊರತರುವ ಪ್ರಾಡಕ್ಟ್ ಗಳು ಆ್ಯಪಲ್‌ ಸ್ಟೋರ್‌, ಆ್ಯಪ್‌ ಸ್ಟೋರ್‌, ಐಮ್ಯಾಕ್‌, ಐಪ್ಯಾಡ್‌, ಐಪೋಡ್‌, ಐಫೋನ್‌, ಐಟ್ಯೂನ್ ತಂತ್ರಜ್ಞಾನ ಜಗತ್ತಿನಲ್ಲಿ ಒಂದು ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿ ಬಿಡುತ್ತವೆ. Forbes ಮ್ಯಾಗಜಿನ್ ನ ಶತಕೋಟಿಶ್ವರರ ಲಿಸ್ಟಿಗೆ ಸೇರುತ್ತಾನೆ. ಹಲವಾರು ಪುರಸ್ಕಾರಗಳು ಹುಡುಕಿಕೊಂಡು ಬರುತ್ತವೆ. ದುರದೃಷ್ಟವಶಾತ್ 2003 ರಲ್ಲಿ ಆರೋಗ್ಯ ತಪಾಸಣೆ ನಡೆಸುವಾಗ ಪಾನ್ಕ್ರಿಯಾಟಿಕ್ ಕ್ಯಾನ್ಸರ್ ಇದೆ ಎಂದು ತಿಳಿದು ಬರುತ್ತದೆ. ಕ್ಯಾನ್ಸರ್ ವ್ಯಾಧಿಯನ್ನು ಜೊತೆಯಲ್ಲಿಟ್ಟುಕೊಂಡೆ ಕೆಲವು ವರ್ಷಗಳ ಕಾಲ ಕಂಪನಿಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಾನೆ. ಕ್ಯಾನ್ಸರ್ ಭಾದಿತನಾದ ನಂತರ ಮೋಟಿವೇಷನಲ್ ಸ್ಪೀಕರ್ ಆಗಿ ಹಲವಾರು ಕಡೆ ಮಾತನಾಡಲು ಹೋಗುತ್ತಾನೆ. ಆಗ ಆತ ಹೇಳುತ್ತಿದ್ದದ್ದು ನನ್ನ ಹುಟ್ಟಿನ ಬಗ್ಗೆ ನಾನು ಯಾವತ್ತೂ ತಲೆಕೆಡಿಸಿಕೊಳ್ಳಲಿಲ್ಲ. ನನ್ನ ಪ್ರಾಮುಖ್ಯತೆ ಏನಿದ್ದರೂ ನಾನು ಇಲ್ಲಿ ಏನು ಮಾಡುತ್ತಿದ್ದೇನೆ ಎಂಬುದರ ಬಗ್ಗೆ ಮಾತ್ರ. 1000 ಬಾರಿ ಧೈರ್ಯದಿಂದ ಹೇಳಬಲ್ಲೆ ನನ್ನನ್ನು ಸ್ಟೀವ್ ಜಾಬ್ಸ್ ಮಾಡಿದ್ದು ನನ್ನನ್ನು ಬೆಳೆಸಿದ ತಂದೆ ತಾಯಿಗಳು. ಇದರಲ್ಲಿ ನನಗೆ ಜನ್ಮ ಕೊಟ್ಟವರ ಯಾವ ಪಾತ್ರವೂ ಇಲ್ಲ. ಆರೋಗ್ಯ ಹದಗೆಡುತ್ತಾ ಹೋಗುತ್ತದೆ. ಕೊನೆಯದಾಗಿ ಆತ ಹೇಳುತ್ತಿದ್ದ ಮಾತುಗಳು ತಂತ್ರಜ್ಞಾನ ಎಷ್ಟೇ ಮುಂದುವರಿಯಲಿ ಮನುಷ್ಯ ಕೊನೆಗೊಂದು ದಿನ ಮರಣವೆಂಬ ಸತ್ಯಕ್ಕೆ ಮರಳಲೇಬೇಕು ಎಂದು. ಕೊನೆಗೆ 2011 ಅಕ್ಟೋಬರ್ 5 ರಂದು ತಂತ್ರಜ್ಞಾನ ಲೋಕದ ಉತ್ತುಂಗ ಶಿಖರಕ್ಕೇರಿದ್ದ ಸ್ಟೀವ್ ಜಾಬ್ಸ್ ತನ್ನ 56ನೇ ವರ್ಷ ಪ್ರಾಯಕ್ಕೆ ಕ್ಯಾಲಿಫೋರ್ನಿಯಾದಲ್ಲಿ ಕೊನೆಯುಸಿರೆಳೆಯುತ್ತಾನೆ. ತಂತ್ರಜ್ಞಾನ ಲೋಕ ಅಂದು ಹೇಳಿದ್ದು, ಈ ದಿನವನ್ನು ಜಗತ್ತು ಯಾವತ್ತೂ ಮರೆಯಲು ಸಾಧ್ಯವಿಲ್ಲವೆಂದು. ಅಮೆರಿಕನ್ ಸರಕಾರ ಆತನಿಗೆ 2022 ರಲ್ಲಿ ಅಲ್ಲಿನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪ್ರೆಸಿಡೆನ್ಸಿಯಲ್ ಮೆಡಲ್ ಆಫ್ ಫ್ರೀಡಂ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಿ ಗೌರವಿಸಿದೆ.

ಮಾಹಿತಿ/ಚಿತ್ರ
ಇಕ್ಬಾಲ್ ಪುತ್ತೂರು
(ಸಂಪೊಲಿ)

LEAVE A REPLY

Please enter your comment!
Please enter your name here