ಮಂಗಳೂರು(ನವದೆಹಲಿ): ಭವಿಷ್ಯದ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಚುನಾವಣಾ ಆಯುಕ್ತರನ್ನು ನೇಮಕ ಮಾಡುವ ಸಮಿತಿಯಿಂದ ಭಾರತದ ಮುಖ್ಯ ನ್ಯಾಯಮೂರ್ತಿ ಅವರನ್ನು ಹೊರಗಿಡಲು ಮಸೂದೆಯೊಂದನ್ನು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದೆ. ಪ್ರಸ್ತಾಪಿತ ಹೊಸ ಮಸೂದೆಯ ಅನ್ವಯ ಪ್ರಧಾನ ಮಂತ್ರಿ ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕೇಂದ್ರ ಸಚಿವರು ಇರುವ ಸಮಿತಿ ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡಲಿದೆ.
ಚುನಾವಣಾ ಆಯುಕ್ತರ ನೇಮಕಕ್ಕೆ ಕೊಲಿಜಿಯಂ ಮಾದರಿಯ ವ್ಯವಸ್ಥೆ ಬೇಕು ಎಂದು ಅಭಿಪ್ರಾಯಪಟ್ಟಿದ್ದ ಸುಪ್ರೀಂ ಕೋರ್ಟ್ನ ಐವರು ಸದಸ್ಯರಿದ್ದ ಸಂವಿಧಾನ ಪೀಠ ಇದೇ ವರ್ಷ ಮಾರ್ಚ್ನಲ್ಲಿ ಮುಖ್ಯ ನ್ಯಾಯಮೂರ್ತಿ, ಪ್ರಧಾನ ಮಂತ್ರಿ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕರು ಇದ್ದ ಸಮಿತಿಯನ್ನು ರಚನೆ ಮಾಡಿತ್ತು. ಈ ತೀರ್ಪನ್ನು ಅಮಾನ್ಯ ಮಾಡಲು ಹೊಸ ಮಸೂದೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಇದನ್ನೇ ಅಸ್ತ್ರವಾಗಿಸಿಕೊಂಡ ಕಾಂಗ್ರೆಸ್ ಸಹಿತ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಿದ್ದು, ಕೇಂದ್ರ ಸರ್ಕಾರ ಸಂವಿಧಾನ ಪೀಠದ ಆದೇಶವನ್ನು ನಿಶ್ಶಕ್ತಗೊಳಿಸುತ್ತಿದೆ ಎಂದು ಆರೋಪಿಸಿದೆ. ಹಾಲಿ ಮುಖ್ಯ ಚುನಾವಣಾ ಆಯುಕ್ತ ಅನೂಪ್ ಚಂದ್ರ ಪಾಂಡೆ ಅವರು ಮುಂದಿನ ವರ್ಷ ಫೆಬ್ರುವರಿ 14 ರಂದು ನಿವೃತ್ತರಾಗಲಿದ್ದಾರೆ. ಮಾರ್ಚ್ನಲ್ಲಿ ಲೋಕಸಭೆ ಚುನಾವಣೆ ಘೋಷಣೆಯಾಗಲಿದೆ.
ಚುನಾವಣಾ ಆಯುಕ್ತರ ನೇಮಕಕ್ಕೆ ಮುಖ್ಯನ್ಯಾಯಮೂರ್ತಿ, ಪ್ರಧಾನ ಮಂತ್ರಿ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ಇರುವ ಸಮಿತಿ ರಚಿಸಿ ನ್ಯಾಯಮೂರ್ತಿ ಕೆ.ಎಂ ಜೋಸೆಫ್ ಅವರಿದ್ದ ಸಾಂವಿಧಾನಿಕ ಪೀಠ ಮಾರ್ಚ್ನಲ್ಲಿ ತೀರ್ಪು ನೀಡಿತ್ತು. ಅಲ್ಲದೆ ಈ ಬಗ್ಗೆ ಸಂಸತ್ ಕಾನೂನು ರಚಿಸುವವರೆಗೆ ಈ ತೀರ್ಪು ಅನ್ವಯವಾಗಲಿದೆ ಎಂದು ಹೇಳಿದ್ದರು. ಅದಕ್ಕೂ ಮುನ್ನ ಕೇಂದ್ರ ಸರ್ಕಾರದ ಶಿಫಾರಸಿನ ಅನ್ವಯ ರಾಷ್ಟ್ರಪತಿಗಳು ಚುನಾವಣಾ ಆಯುಕ್ತರನ್ನು ನೇಮಕ ಮಾಡುತ್ತಿದ್ದರು.