ಮಂಗಳೂರು(ಬೆಂಗಳೂರು): ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಕೆ.ಆರ್. ಪುರ ತಾಲ್ಲೂಕಿನ ತಹಶೀಲ್ದಾರ್ ಅಜಿತ್ ಕುಮಾರ್ ರೈ ಅವರಿಗೆ ನಗರದ ನ್ಯಾಯಾಲಯ ಸೋಮವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಅಜಿತ್ ಕುಮಾರ್ ರೈ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸಿಟಿ ಸಿವಿಲ್ ನ್ಯಾಯಾಲಯ-24ರ ನ್ಯಾಯಾಧೀಶ ರಾಧಾಕೃಷ್ಣ ಅವರು ವಿಚಾರಣೆ ನಡೆಸಿದರು.
ಅರ್ಜಿದಾರ ಅಜಿತ್ ರೈ ಪರ ಹೈಕೋರ್ಟ್ ಹಿರಿಯ ವಕೀಲ ಎಂ.ಎಸ್. ಶ್ಯಾಮಸುಂದರ್ ವಾದ ಮಂಡಿಸಿದರು. ವಾದ ಆಲಿಸಿದ ನ್ಯಾಯಾಧೀಶರು ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶ ನೀಡಿದ್ದಾರೆ. ಅಜಿತ್ ರೈ ಈ ಹಿಂದೆ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಪ್ರಕರಣಗಳ ವಿಶೇಷ ನ್ಯಾಯಾಲಯ ವಜಾ ಮಾಡಿತ್ತು. ಲೋಕಾಯುಕ್ತ ಪೊಲೀಸರು ಜೂನ್ 28ರಂದು ಅಜಿತ್ ರೈ ಮನೆ ಮೇಲೆ ದಾಳಿಮಾಡಿ ಶೋಧ ನಡೆಸಿದ್ದರು. ವಿಚಾರಣೆಗೆ ಸಹಕರಿಸದ ಆರೋಪದ ಮೇಲೆ ಜೂನ್ 29ರಂದು ಬಂಧಿಸಲಾಗಿತ್ತು. ವಿಚಾರಣೆಗಾಗಿ ಕೆಲವು ದಿನಗಳ ಕಾಲ ತನಿಖಾ ತಂಡದ ವಶಕ್ಕೆ ನೀಡಲಾಗಿತ್ತು.